ಮಾಡಾಳು ಪುತ್ರನ ಅಮಾನತಿಗೆ ಸೂಚನೆ ನೀಡ್ತೇವೆ: ಸಚಿವ ಮಾಧುಸ್ವಾಮಿ
ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಅಮಾನತು ಮಾಡುವ ಸಂಬಂಧ ಸಂಬಂಧಪಟ್ಟಇಲಾಖೆಗೆ ಸೂಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಬೆಂಗಳೂರು (ಮಾ.09): ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಅಮಾನತು ಮಾಡುವ ಸಂಬಂಧ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಂಗಳೂರು ಜಲಮಂಡಳಿಯು ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಒಂದು ವೇಳೆ ಕ್ರಮ ಕೈಗೊಂಡಿಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಹೇಳಲಾಗುವುದು. ಪ್ರಕರಣ ಸರ್ಕಾರಕ್ಕೆ ಮುಜುಗರ ತರುವ ವಿಚಾರ.
ಆದರೆ, ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು. ‘ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಸಮರ್ಥವಾಗಿ ವಾದ ಮಂಡಿಸಲು ವಕೀಲರು ನೇಮಕಾತಿ ಮಾಡುವ ಕುರಿತು ಚರ್ಚೆಗಳು ಕೇಳಿ ಬಂದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಇದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಲೋಕಾಯುಕ್ತ ಸಂಸ್ಥೆಯೇ ಇದನ್ನು ನೋಡಿಕೊಳ್ಳಲಿದೆ. ಲೋಕಾಯುಕ್ತ ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ನೌಕರರ ವೇತನ ಸಭೆ ವಿಫಲ: ಶೇ.25ರಷ್ಟು ಹೆಚ್ಚಳಕ್ಕೆ ಪಟ್ಟು
ಮಾಡಾಳುಗೆ ಒಂದೇ ದಿನದಲ್ಲಿ ಬೇಲ್: ಲಂಚ ಪ್ರಕರಣದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಒಂದೇ ದಿನದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಕ್ರಮಕ್ಕೆ ಆಘಾತ ವ್ಯಕ್ತಪಡಿಸಿರುವ ಬೆಂಗಳೂರು ವಕೀಲರ ಸಂಘ, ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರಿಗೆ ಪತ್ರ ಬರೆದಿದೆ. ಸಂಜೆ ತುರ್ತು ಸಭೆ ನಡೆಸಿದ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಜಿ ಎಂ.ಟಿ. ಹರೀಶ ಅವರು, ಉನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಗಂಭೀರ ಕಾಳಜಿಯುಕ್ತ ಪತ್ರ ಬರೆದಿದ್ದಾರೆ.
ಹೈಕೋರ್ಟ್‌ನಲ್ಲಿ ಹೊಸ ಪ್ರಕರಣಗಳು ಅದರಲ್ಲೂ ನಿರೀಕ್ಷಣಾ ಜಾಮೀನು ಕೋರಿಕೆಗೆ ಸಂಬಂಧಿಸಿದ ಅರ್ಜಿಗಳು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಅತಿ ಗಣ್ಯ ವ್ಯಕ್ತಿಗಳ ಪ್ರಕರಣಗಳನ್ನು ದಿನ ಬೆಳಗಾಗುವುದರೊಳಗೆ ಪುರಸ್ಕರಿಸಲಾಗುತ್ತಿದೆ. ಇಂತಹ ಪದ್ಧತಿಯು ಶ್ರೀಸಾಮಾನ್ಯರು ನ್ಯಾಯಾಂಗದ ಮೇಲೆ ಹೊಂದಿರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಸಂಘ ಪತ್ರದಲ್ಲಿ ಆಕ್ಷೇಪಿಸಿದೆ.
ಕಾಂಗ್ರೆಸ್ 120 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಫೈನಲ್: ಉಳಿದ 30 ಸ್ಥಾನಗಳು ಪಕ್ಷಾಂತರಿಗಳಿಗೆ ವೇಟಿಂಗ್!
ಓರ್ವ ಶಾಸಕರನ್ನೂ ಒಬ್ಬ ಸಾಮಾನ್ಯನಂತೆ ಪರಿಗಣಿಸುವುದು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶಿಸಬೇಕು. ಇದರಿಂದ ಶ್ರೀಸಾಮಾನ್ಯನನ್ನೂ ಸಹ ಅತಿಗಣ್ಯ ವ್ಯಕ್ತಿಯಾಗಿ ಪರಿಗಣಿಸಿದಂತಾಗುತ್ತದೆ. ನ್ಯಾಯದೇಗುಲ ಎಲ್ಲರಿಗೂ ಸಮಾನವಾಗಿರಬೇಕು. ಯಾವುದೇ ಅತಿಗಣ್ಯ ವ್ಯಕ್ತಿ ಸಹ ಸಾಮಾನ್ಯನಂತೆ ಕಾಯಬೇಕು. ಈ ವಿಚಾರದಲ್ಲಿ ವಕೀಲರ ಸಂಘ ತೀವ್ರ ಆಘಾತ ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದೆ.