ಕಾಂಗ್ರೆಸ್‌ 120 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಫೈನಲ್‌: ಉಳಿದ 30 ಸ್ಥಾನಗಳು ಪಕ್ಷಾಂತರಿಗಳಿಗೆ ವೇಟಿಂಗ್‌!

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲು ಎರಡು ದಿನಗಳ ಕಾಲ ಸಭೆ ನಡೆಸಿ ಕಸರತ್ತು ಮಾಡಿರುವ ಎಐಸಿಸಿ ಸ್ಕ್ರೀನಿಂಗ್‌ ಸಮಿತಿಯು 120 ಕ್ಷೇತ್ರಗಳಿಗೆ ಒಂಟಿ ಹೆಸರಿನ ಸಂಭಾವ್ಯರ ಪಟ್ಟಿ ಅಂತಿಮಗೊಳಿಸಿದೆ. 

Congress has finalized the list of 120 potential candidates gvd

ಬೆಂಗಳೂರು (ಮಾ.09): ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲು ಎರಡು ದಿನಗಳ ಕಾಲ ಸಭೆ ನಡೆಸಿ ಕಸರತ್ತು ಮಾಡಿರುವ ಎಐಸಿಸಿ ಸ್ಕ್ರೀನಿಂಗ್‌ ಸಮಿತಿಯು 120 ಕ್ಷೇತ್ರಗಳಿಗೆ ಒಂಟಿ ಹೆಸರಿನ ಸಂಭಾವ್ಯರ ಪಟ್ಟಿ ಅಂತಿಮಗೊಳಿಸಿದೆ. ಜತೆಗೆ 104 ಕ್ಷೇತ್ರಗಳಿಗೆ 2-3 ಅಭ್ಯರ್ಥಿಗಳ ಪಟ್ಟಿಯನ್ನು ಶಾರ್ಟ್‌ಲಿಸ್ಟ್‌ ಮಾಡಿದ್ದು, ಶೀಘ್ರ ಮತ್ತೊಂದು ಸಭೆ ನಡೆಸಿ ಈ ಪೈಕಿ 75 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿ ಎಐಸಿಸಿ ಚುನಾವಣಾ ಸಮಿತಿಗೆ ರವಾನಿಸಲು ನಿರ್ಧರಿಸಲಾಗಿದೆ. ಉಳಿದ ಸುಮಾರು 30 ಸ್ಥಾನಗಳನ್ನು ಪಕ್ಷಾಂತರ ಸೇರಿದಂತೆ ವಿವಿಧ ಕಾರಣಗಳಿಗೆ ಕೊನೆ ಹಂತದಲ್ಲಿ ಮುನ್ನೆಲೆಗೆ ಬರಲಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಸ್ಕ್ರೀನಿಂಗ್‌ ಸಮಿತಿಯು ಮೊದಲ ಹಂತದಲ್ಲಿ ಕಳುಹಿಸಲಿರುವ 120 ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳನ್ನು ಎಐಸಿಸಿ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರನ್ನು ಒಳಗೊಂಡ ಎಐಸಿಸಿ ಚುನಾವಣಾ ಸಮಿತಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಿದೆ. ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್‌ ಪ್ರಕಾಶ್‌ ಅಧ್ಯಕ್ಷತೆಯ ಸ್ಕ್ರೀನಿಂಗ್‌ ಸಮಿತಿಯು ಮಂಗಳವಾರ ಹಾಗೂ ಬುಧವಾರ ರಾಜ್ಯ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಬುಧವಾರ ಸಂಜೆ ವೇಳೆಗೆ ಮೊದಲ ಹಂತದಲ್ಲಿ 120 ಕ್ಷೇತ್ರಗಳಿಗೆ ಒಂಟಿ ಹೆಸರಿನ ಸಂಭಾವ್ಯರ ಪಟ್ಟಿಯನ್ನು ಅಂತಿಮಗೊಳಿಸಿದೆ. 

ಸಿಂಧೂರ ಇಡುವವರು ಕಾಂಗ್ರೆಸ್‌ಗೆ ಮತ ನೀಡಬೇಡಿ: ಸಿದ್ದು ವಿರುದ್ಧ ಹರಿಹಾಯ್ದ ಸಿ.ಟಿ.ರವಿ

ಸಭೆಯಲ್ಲಿ ಸ್ಕ್ರೀನಿಂಗ್‌ ಸಮಿತಿಯ ಪದ ನಿಮಿತ್ತ ಸದಸ್ಯರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ರಾಜ್ಯ ಉಸ್ತುವಾರಿಯಲ್ಲಿರುವ ಎಐಸಿಸಿ ಕಾರ್ಯದರ್ಶಿಗಳು ಸಭೆಯಲ್ಲಿ ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ವಿಸ್ತೃತವಾಗಿ ಚರ್ಚೆ ನಡೆಸಿದರು. ಈ ವೇಳೆ ವಿಧಾನಪರಿಷತ್‌ ಸದಸ್ಯರ ಪೈಕಿ ಯು.ಬಿ. ವೆಂಕಟೇಶ್‌ ಅವರಿಗೆ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಿದ್ದು, ಉಳಿದ ಯಾವ ಪರಿಷತ್‌ ಸದಸ್ಯರಿಗೂ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.

30 ಕ್ಷೇತ್ರದಲ್ಲಿ ಕಾದು ನೋಡುವ ತಂತ್ರ: ಜೆಡಿಎಸ್‌ ಹಾಗೂ ಬಿಜೆಪಿಯಿಂದ ಪಕ್ಷಕ್ಕೆ ಬರಲಿರುವ ಶಾಸಕರು, ಸಚಿವರಿಗಾಗಿ ಹಲವು ಕ್ಷೇತ್ರಗಳನ್ನು ಕಾಯ್ದಿಟ್ಟುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಜತೆಗೆ ಕಾಂಗ್ರೆಸ್‌ನಿಂದ ಬೇರೆ ಪಕ್ಷದತ್ತ ಮುಖ ಮಾಡುವವರ ಬಗ್ಗೆಯೂ ಗಮನ ಹರಿಸಲು 30 ಕ್ಷೇತ್ರಗಳಲ್ಲಿ ಕಾದು ನೋಡುವ ತಂತ್ರ ಅನುಸರಿಸಲು ತೀರ್ಮಾನಿಸಲಾಗಿದೆ. ಹೀಗಾಗಿಯೇ ಈ ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನು ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

4 ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಅಂತಿಮವಿಲ್ಲ: ಜತೆಗೆ ಕಾಂಗ್ರೆಸ್‌ನ ಹಾಲಿ ಶಾಸಕರ ಪೈಕಿ ನಾಲ್ಕು ಮಂದಿಗೆ ಟಿಕೆಟ್‌ ಅಂತಿಮವಾಗಿಲ್ಲ. ಸಚಿವ ಸಿ.ಎಸ್‌. ಶಿವಳ್ಳಿ ಅವರ ನಿಧನದಿಂದ ಉಪ ಚುನಾವಣೆಗೆ ನಿಂತು ಕುಂದಗೋಳ ಕ್ಷೇತ್ರದ ಶಾಸಕಿಯಾಗಿ ಗೆದ್ದು ಬಂದಿದ್ದ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ಇನ್ನೂ ನಿರ್ಧಾರವಾಗಿಲ್ಲ. ಉಳಿದಂತೆ ಶಿಡ್ಲಘಟ್ಟಕ್ಷೇತ್ರದಿಂದ ಹಾಲಿ ಶಾಸಕ ವಿ. ಮುನಿಯಪ್ಪ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದರಿಂದ ಕೋಲಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಬ್ಯಾಲಾಳು ಗೋವಿಂದ ಗೌಡರಿಗೆ ಟಿಕೆಟ್‌ ಬಹುತೇಕ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.

ನಾನು ಬೋನ್‌ನಲ್ಲಿದ್ದರೂ ಹುಲಿನೇ, ಜೈಲ್‌ನಲ್ಲಿದ್ದರೂ ಹುಲಿನೇ: ಜನಾರ್ದನ ರೆಡ್ಡಿ

ಉಳಿದಂತೆ ಅಫ್ಜಲ್‌ಪುರ ಶಾಸಕ ಎಂ.ವೈ. ಪಾಟೀಲ್‌ ಅವರು ವಯಸ್ಸಿನ ಕಾರಣದಿಂದ ತಮಗೆ ಟಿಕೆಟ್‌ ಬೇಡ. ತಮ್ಮ ಬದಲಿಗೆ ಪುತ್ರ ಅರುಣ್‌ಕುಮಾರ್‌ ಪಾಟೀಲ್‌ ಅವರಿಗೆ ಟಿಕೆಟ್‌ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಇನ್ನು ಪಾವಗಡ ಕ್ಷೇತ್ರದಲ್ಲಿ ಶಾಸಕ ವೆಂಕಟರಮಣಪ್ಪ ತಮ್ಮ ಮಗ ವೆಂಕಟೇಶ್‌ಗೆ ಟಿಕೆಟ್‌ ಬಯಸಿದ್ದಾರೆ. ಆದರೆ ಎಡಗೈ ನಾಯಕರು ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಅವರಿಗೆ ಟಿಕೆಟ್‌ ಕೇಳುತ್ತಿದ್ದಾರೆ. ಒಂದು ವೇಳೆ ಮಗನಿಗೆ ಕೊಡದಿದ್ದರೆ ನಾನೇ ಈ ಬಾರಿಯೂ ಸ್ಪರ್ಧಿಸುವುದಾಗಿ ವೆಂಕಟರಮಣಪ್ಪ ಹೇಳುತ್ತಿದ್ದಾರೆ. ಹೀಗಾಗಿ ಟಿಕೆಟ್‌ ಆಯ್ಕೆ ಕಗ್ಗಂಟಾಗಿ ಉಳಿದಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios