ಸಂಪುಟ ವಿಸ್ತರಣೆ ಅಸಮಾ​ಧಾನ ಸರಿಪಡಿಸಲಾಗುತ್ತದೆ: ಶೆಟ್ಟರ್‌

ಸಿದ್ದರಾಮಯ್ಯ ನಮ್ಮ ಪಕ್ಷದ ವಕ್ತಾರರಾ? ಅಥವಾ ಪಕ್ಷದ ಹೈಕಮಾಂಡಾ? ಅವರಿಗೇನು ಹೇಳಲು ಹಕ್ಕಿದೆ. ಇಂತಹ ಅರ್ಥವಿಲ್ಲದ ಹೇಳಿಕೆ ಕೊಡುವುದು ತರವಲ್ಲ ಎಂದ ಶೆಟ್ಟರ್‌

Minister Jagadish Shettar Talks Over Cabinet Expansion grg

ಕೊಪ್ಪಳ(ಜ.14):  ಸಚಿವರಾಗುವ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಸಂಪುಟ ವಿಸ್ತರಣೆಯಿಂದ ಅಸಮಾಧಾನ ಸಹಜ. ಆದರೆ, ಇದನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಇಂಥ ವೇಳೆಯಲ್ಲಿ ಸಚಿವ ಸ್ಥಾನ ಸಿಗದೆ ಇರುವವರು ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಾರೆ. ಇದನ್ನು ಸಿಎಂ ಸೇರಿದಂತೆ ನಾಯಕರು ಸರಿಪಡಿಸುತ್ತಾರೆ.

ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಗೆ ಎಷ್ಟೆಷ್ಟು ಸ್ಥಾನ..?

ಶಾಸಕ ಯತ್ನಾಳ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ನಿರಂತರವಾಗಿ ಪ್ರವಾಸದಲ್ಲಿರುವ ಕಾರಣ ಆ ಬಗ್ಗೆ ಮಾಹಿತಿ ಇಲ್ಲ. ಹೇಳಿಕೆ ಕೊಟ್ಟಿದ್ದರೆ ಅದು ಅವರ ವೈಯಕ್ತಿಕ. ನಾನು ಪ್ರತಿಕ್ರಿಯೇ ನೀಡುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ತ್ಯಾಗ ಮಾಡಿದವರು ಕಾರಣೀಕರ್ತರಾಗಿದ್ದಾರೆ. ಅವರಿಗೆ ಮೊದಲ ಆದ್ಯತೆ ಕೊಟ್ಟಿರುವುದರಿಂದ ಜಿಲ್ಲಾ ಪ್ರಾತಿನಿಧ್ಯದಡಿ ಸಚಿವ ಸ್ಥಾನ ಕೊಡಲಾಗಿಲ್ಲ. ಎಚ್‌.ವಿಶ್ವನಾಥ ಅವರು ಸಿಎಂ ಕೊಟ್ಟ ಮಾತಿನಂತೆ ನಡೆದಿಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಒಂದು ಬಾರಿ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ. ಮಾತು ಕೊಟ್ಟಂತೆ ನಡೆದಿಲ್ಲ ಎನ್ನುವ ಹೇಳಿಕೆಯು ಸರಿಯಲ್ಲ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅವರು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಆ ಸಮಸ್ಯೆ ಬಗೆ ಹರಿಸಿಕೊಳ್ಳಿ. ಬಹಿರಂಗವಾಗಿ ಹೇಳಿಕೆ ಕೊಡುವುದು ತರವಲ್ಲ ಎಂದರು.

ಸಿಎಂ ಬದಲಾವಣೆ ವಿಚಾರದ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿರುವುದಕ್ಕೆ ಸಿದ್ದರಾಮಯ್ಯ ನಮ್ಮ ಪಕ್ಷದ ವಕ್ತಾರರಾ? ಅಥವಾ ಪಕ್ಷದ ಹೈಕಮಾಂಡಾ? ಅವರಿಗೇನು ಹೇಳಲು ಹಕ್ಕಿದೆ. ಇಂತಹ ಅರ್ಥವಿಲ್ಲದ ಹೇಳಿಕೆ ಕೊಡುವುದು ತರವಲ್ಲ ಎಂದರು. ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೆ ಅದನ್ನು ಸಿಎಂ ಅವರ ಗಮನಕ್ಕೆ ತರಲಾಗುವುದು. ಆದರೆ, ಸರ್ಕಾರ ರಚನೆಗೆ ತ್ಯಾಗ ಮಾಡಿದವರಿಗೆ ಆದ್ಯತೆ ನೀಡಿರುವುದರಿಂದ ಇದು ಅನಿವಾರ್ಯ ಎಂದರು.
 

Latest Videos
Follow Us:
Download App:
  • android
  • ios