ಬೆಂಗಳೂರು(ಜ.14):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯದ್ದೇ ಪ್ರಾಬಲ್ಯ. ಎರಡನೇ ಸ್ಥಾನ ಒಕ್ಕಲಿಗ ಸಮುದಾಯಕ್ಕಿದ್ದರೆ, ಮೂರನೆಯ ಸ್ಥಾನದಲ್ಲಿ ಕುರುಬ ಸಮುದಾಯವಿದೆ.

"

ಯಡಿಯೂರಪ್ಪ ಸೇರಿದಂತೆ 11 ಮಂದಿ ಲಿಂಗಾಯತ ಸಮುದಾಯದವರು ಸಂಪುಟದಲ್ಲಿದ್ದಾರೆ. ಇನ್ನುಳಿದಂತೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಏಳು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಆರು ಮಂದಿ ದಲಿತರು, ನಾಲ್ವರು ಕುರುಬರು, ಇಬ್ಬರು ಬ್ರಾಹ್ಮಣರಿಗೆ, ರಜಪೂತ, ಈಡಿಗ ಮತ್ತು ಮರಾಠ ಸಮುದಾಯಕ್ಕೆ ತಲಾ ಒಂದು ಸ್ಥಾನ ನೀಡಿ ಮುಖ್ಯಮಂತ್ರಿ ಹೊರತುಪಡಿಸಿ ಒಟ್ಟು 32 ಸಚಿವರು ಸಂಪುಟದಲ್ಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ, ಸಚಿವರಾದ ಜಗದೀಶ್‌ ಶೆಟ್ಟರ್‌, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್‌, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್‌, ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಂಪುಟದಲ್ಲಿ ಈಗಲೂ 12 ಜಿಲ್ಲೆಗಿಲ್ಲ ಪ್ರಾತಿನಿಧ್ಯ

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ್‌, ಕೆ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌, ಕೆ.ಸುಧಾಕರ್‌, ನಾರಾಯಣಗೌಡ, ಸಿ.ಪಿ.ಯೋಗೇಶ್ವರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿ.ಶ್ರೀರಾಮುಲು ಮತ್ತು ರಮೇಶ್‌ ಜಾರಕಿಹೊಳಿ ಪರಿಶಿಷ್ಟಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಎಸ್‌.ಅಂಗಾರ, ಅರವಿಂದ್‌ ಲಿಂಬಾವಳಿ ಹಾಗೂ ಪ್ರಭು ಚವ್ಹಾಣ್‌ ಅವರು ಪರಿಶಿಷ್ಟಜಾತಿಗೆ ಸೇರಿದ್ದಾರೆ. ಸಚಿವರಾದ ಕೆ.ಎಸ್‌.ಈಶ್ವರಪ್ಪ, ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌, ಬೈರತಿ ಬಸವರಾಜ್‌ ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಎಸ್‌.ಸುರೇಶ್‌ ಕುಮಾರ್‌, ಶಿವರಾಮ ಹೆಬ್ಬಾರ್‌ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಆನಂದ್‌ ಸಿಂಗ್‌ ರಜಪೂತ, ಶ್ರೀಮಂತ ಪಾಟೀಲ್‌ ಮರಾಠ ಮತ್ತು ಕೋಟ ಶ್ರೀನಿವಾಸ ಪೂಜಾರಿ ಈಡಿಗ ಸಮುದಾಯದವರಾಗಿದ್ದಾರೆ.

ಯಾವ ಜಾತಿಗೆ ಎಷ್ಟೆಷ್ಟು? ಜಾತಿ ಎಷ್ಟು ಸ್ಥಾನ

ಲಿಂಗಾಯತ 11
ಒಕ್ಕಲಿಗರು 07
ದಲಿತ 06
ಕುರುಬ 04
ಬ್ರಾಹ್ಮಣ 02
ರಜಪೂತ 01
ಮರಾಠ 01
ಈಡಿಗ 01