ಗ್ಯಾರಂಟಿ ಯೋಜನೆಗಳಿಂದ ಬಡವರು ಸಂಭ್ರಮದಿಂದ ಹಬ್ಬ ಮಾಡುತ್ತಿದ್ದಾರೆ: ಎಚ್.ಕೆ.ಪಾಟೀಲ್
ಹತ್ತು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಏನು ಮಾಡಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡವರ ಬಡತನ ನೀಗಿದೆ ಮತ್ತು ಬಡವರು ಸಹ ಸಂಭ್ರಮದಿಂದ ಹಬ್ಬ ಮಾಡುವಂತಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕೊಪ್ಪಳ (ಏ.17): ಹತ್ತು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಏನು ಮಾಡಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡವರ ಬಡತನ ನೀಗಿದೆ ಮತ್ತು ಬಡವರು ಸಹ ಸಂಭ್ರಮದಿಂದ ಹಬ್ಬ ಮಾಡುವಂತಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ನಾಮಪತ್ರ ಸಲ್ಲಿಸುವ ಕುರಿತು ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ಘೋಷಣೆ ಮಾಡಿದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ.
ಕೋಟ್ಯಂತರ ಬಡವರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಕುಟುಂಬದ ಒಡತಿಗೆ ಗೃಹ ಲಕ್ಷ್ಮಿ, ಮನೆ ಬೆಳಗಲು ಗೃಹಜ್ಯೋತಿ, ಬಸ್ಸಿನಲ್ಲಿ ಉಚಿತವಾಗಿ ಓಡಾಡಲು ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವ ನಿಧಿಯನ್ನು ಜಾರಿ ಮಾಡುವ ಮೂಲಕ ಪ್ರತಿ ಕುಟುಂಬಕ್ಕೂ ನಿಗದಿತ ಆದಾಯ ಬರುವಂತೆ ಆಗಿದೆ ಎಂದರು. ಆದರೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿಯವರು ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು ಎಂದು ಕಿಡಿಕಾರಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಸಂವಿಧಾನದ ಬಗ್ಗೆ ಕಾಳಜಿ ಮೂಡಿದೆ. ಇಷ್ಟು ದಿನಗಳ ಸಂವಿಧಾನ ಪ್ರತಿ ಸುಟ್ಟು ಹಾಕುತ್ತೇವೆ ಮತ್ತು ಸಂವಿಧಾನ ಬದಲಾಯಿಸುತ್ತೇವೆ ಎಂದು ಅವರ ಪಕ್ಷದವರೇ ಹೇಳಿದರೂ ಬಾಯಿಬಿಡಲಿಲ್ಲ.
ಒಕ್ಕಲೆಬ್ಬಿಸುವಾಗ ಕನ್ನಡಿಗನ ಕಾಲು ಮುರಿದ ಗೋವಾ ಪೊಲೀಸರು!
ಆದರೆ, ಈಗ ಏಕಾಏಕಿ ಸಂವಿಧಾನದ ಬಗ್ಗೆ ಗೌರವ ಉಕ್ಕಿ, ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸಂವಿಧಾನ ರಕ್ಷಣೆಯ ಕುರಿತು ಮಾತನಾಡಿದಾಗ ಮೋದಿ ಅವರಿಗೆ ಎಚ್ಚರವಾಯಿತು ಎಂದರು. ಭಾರತ್ ಮಾತಾ ಕೀ ಜೈ ಎಂದು ಬಿಜೆಪಿಯವರು ಈಗ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ಎದುರೇ ಭಾರತ್ ಮಾತಾಕೀ ಜೈ ಎಂದಿದೆ ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಲಿ ಎಂದು ಕುಟುಕಿದರು. ಸಚಿವ ಜಮೀರ್ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಂತೆ ಈಗಾಗಲೇ ಕೇಂದ್ರದಲ್ಲಿಯೂ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಇವುಗಳು ಜಾರಿಯಾಗಬೇಕಾದರೇ ಕಾಂಗ್ರೆಸ್ ಪಕ್ಷಕ್ಕೆ ಎಲ್ಲರೂ ಮತ ಹಾಕಬೇಕು ಎಂದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ದೇಶ ಭಕ್ತಿ ಎನ್ನುವುದು ಬಿಜೆಪಿಗೆ ಗುತ್ತಿಗೆ ನೀಡಿಲ್ಲ. ನಾವು ದೇಶಭಕ್ತರೇ ಇದ್ದೇವೆ. ಸ್ವಾತಂತ್ರ್ಯ ಬಂದ ಮೇಲೆ ಬಿಜೆಪಿಯವರು ದೇಶಭಕ್ತರಾಗಿದ್ದಾರೆ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ನಿಜವಾದ ದೇಶಭಕ್ತ ಪಕ್ಷ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿಗರು ಎಂದು ಜೋರಾಗಿ ಭಾರತ್ ಮಾತಾ ಕೀ ಜೈ ಘೋಷಣೆ ಹಾಕಿ, ಕಾರ್ಯಕರ್ತರಿಂದಲೂ ಹಾಕಿಸಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿದರು.
ಮತಗಟ್ಟೆಯಲ್ಲಿ ಮತದಾರರ ಸೇವಾ ಕೇಂದ್ರ ಸ್ಥಾಪನೆ: ತುಷಾರ್ ಗಿರಿನಾಥ್
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಬಾದರ್ಲಿ ಹಂಪನಗೌಡ, ಬಾದರ್ಲಿ ಬಸನಗೌಡ, ಶರಣೇಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ, ಬಸನಗೌಡ ತುರವಿಹಾಳ, ಬಿ.ಎಂ. ನಾಗರಾಜ, ಎಚ್.ಆರ್. ಶ್ರೀನಾಥ, ಕೆ. ಬಸವರಾಜ ಹಿಟ್ನಾಳ, ಮಲ್ಲಿಕಾರ್ಜುನ ನಾಗಪ್ಪ ಮೊದಲಾದವರು ಇದ್ದರು.