ನಿನ್ನೆ ನಮ್ಮ ಸಿಎಂ, ಡಿಸಿಎಂ ಕೂಡಿ ಉಪ್ಪಿಟ್ಟು ತಿಂದ್ರು, ನೀವು ಮಾಡುವ ಎಲ್ಲ ಸುದ್ದಿ ಸರಿ ಇರಲ್ಲ, ನಾವೆಲ್ಲ ಒಂದಾಗಿದ್ದೇವೆ, ನಮ್ಮಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿನಿಂದ ವಿಧಾನಸಭೆ, ವಿಧಾನ ಪರಿಷತ್ ಕಲಾಪ ಎದುರಿಸುತ್ತೀವಿ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಬಾಗಲಕೋಟೆ (ಡಿ.01): ಇಷ್ಟು ದಿನ ಮಾಧ್ಯಮದವರು ಜಗಳ ಮಾಡ್ತಾರೆ. ಅದು ಇದು ಎಂದು ಸುದ್ದಿ ಮಾಡಿದ್ರಿ, ನಿನ್ನೆ ನಮ್ಮ ಸಿಎಂ, ಡಿಸಿಎಂ ಕೂಡಿ ಉಪ್ಪಿಟ್ಟು ತಿಂದ್ರು, ನೀವು ಮಾಡುವ ಎಲ್ಲ ಸುದ್ದಿ ಸರಿ ಇರಲ್ಲ, ನಾವೆಲ್ಲ ಒಂದಾಗಿದ್ದೇವೆ, ನಮ್ಮಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿನಿಂದ ವಿಧಾನಸಭೆ, ವಿಧಾನ ಪರಿಷತ್ ಕಲಾಪ ಎದುರಿಸುತ್ತೀವಿ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಉತ್ತಮ ಕಾರ್ಯಕ್ರಮ ಮಾಡಿದೆ. ಅದಕ್ಕೆ ಕೆಲವರು ಅಸೂಯೆಯಿಂದ ಕಾಡುತ್ತಿದ್ದಾರೆ. ಗ್ಯಾರಂಟಿ ಯಶಸ್ಸಿನಿಂದ ಕೆಲವರಿಗೆ ಅಸಮಾಧಾನ ಆಗಿದೆ. ಅವೆಲ್ಲವೂಗಳನ್ನು ಎದುರಿಸಿ ಸರ್ಕಾರದ ಸಾಧನೆ ಬಿಂಬಿಸುವುದಕ್ಕೆ ಈ ಅಧಿವೇಶನ ಉಪಯೋಗಿಸಿಕೊಳ್ಳುತ್ತೇವೆ ಎಂದು ಹೇಳಿದರು.
ನಿನ್ನೆ ಉಪ್ಪಿಟ್ಟಿ ತಿಂದಿರುವ ಸಂಧಾನ ಸಂಪೂರ್ಣ ಸರಿ ಆಗಿದೆಯಾ ಎಂಬ ಪ್ರಶ್ನೆಗೆ ಸಚಿವ ಎಚ್.ಕೆ.ಪಾಟೀಲ ಉತ್ತರಿಸಿ, ನೀವು ಯಾರ ಜೊತೆಯಾದರೂ ಜಗಳ ಮಾಡಿದರೆ ಅವರ ಜೊತೆಗೆ ಉಪ್ಪಿಟ್ಟು, ಸೀರಾ ತಿಂತೀರಾ? ಹಂಗೆ ಅದು. ಎಲ್ಲರೂ ಒಂದ ಆಗ್ಯಾರ, ಜಗಳಾ ಮಾಡ್ಯಾರ ಎಂದು ಬರೆದಿದ್ದರಲ್ಲ, ಜಗಳ ಇದ್ದರ ತಾನೆ ಶಮನ ಆಗೋಕೆ. ಆದರೂ ನೀವು ಬರೆದಿದ್ದೆಲ್ಲ, ಅದಕ್ಕೆ ಜನರಿಗೆ ಜಗಳ ಇಲ್ಲ ಎಂದು ತಿಳಿಸಬೇಕಿತ್ತು. ಅದನ್ನು ಸಿಎಂ, ಡಿಸಿಎಂ ಅತ್ಯಂತ ಮುತ್ಸದ್ಧಿತನದಿಂದ, ಪಕ್ಷಕ್ಕೆ ದೊಡ್ಡ ಶಕ್ತಿ ತರುವ ಹಾಗೆ ಆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ದೆಹಲಿ ಮಟ್ಟದಲ್ಲಿ ರಾಹುಲ್ ಗಾಂಧಿ, ಖರ್ಗೆ ಸಭೆ ಸೇರಿದ ವಿಚಾರ ಕುರಿತು ಉತ್ತರಿಸಿ, ನಮ್ಮ ಹೈಕಮಾಂಡ್ ನವರು ಪಕ್ಷ ಬಲವರ್ಧನೆ ಮಾಡುವ ಸಲುವಾಗಿ ಮೇಲಿಂದ ಮೇಲೆ ಸಭೆ ಮಾಡ್ತಾರೆ. ರಾಜಕಾರಣ ಅಂದರೆ ಅಭಿಪ್ರಾಯ, ವ್ಯತ್ಯಾಸ ಇರುತ್ತೆ. ಅವುಗಳನ್ನ ಬಗೆಹರಿಸುತ್ತಾರೆ. ಪಕ್ಷ ಬಲವರ್ಧನೆ ಮಾಡುವ ದಿಸೆಯಲ್ಲಿ ಹೈಕಮಾಂಡ್ ವಿಶೇಷ ಆಸಕ್ತಿ ವಹಿಸಿದ್ದಾರೆ. ಸಭೆ ಮಾಡ್ತಿದ್ದಾರೆ, ಅದು ಒಂದು ರೀತಿ ನಮ್ಮ ಕಾರ್ಯಕರ್ತರಿಗೆ ಸಂತೋಷ ತಂದಿದೆ ಎಂದು ಹೇಳಿದರು.
ನಾವೆಲ್ಲ ಕಾಂಗ್ರೆಸ್ ಶಿಸ್ತಿನ ಸಿಪಾಯಿಗಳು
ಸಿಎಂ, ಡಿಸಿಎಂ ನಡುವೆ ಎರಡುವರೆ ವರ್ಷ ಒಪ್ಪಂದ ಆಗಿತ್ತಾ ಎಂಬ ಚರ್ಚೆ ಹೆಚ್ಚಿತ್ತು ಎಂಬ ಪ್ರಶ್ನೆಗೆ, ನಮಗೆ ಗೊತ್ತಿರಬಹುದು, ಇರಲಿಕ್ಕಿಲ್ಲ. ಗೊತ್ತಿದ್ದರೂ ಹೈಕಮಾಂಡ್ ನಮಗೆ ನಿರ್ದೇಶನ ಕೊಟ್ಟಿದ್ದರು. ಈ ಮಾತುಕತೆಗಳ ಬಗ್ಗೆ, ನಾಯಕತ್ವ ಬಗ್ಗೆ ಯಾವುದೇ ಅಭಿಪ್ರಾಯ, ಮಾತನ್ನು ಮಾಧ್ಯಮದವರ ಜೊತೆ ಮಾತನಾಡಬೇಡಿ ಎಂದು ಖರ್ಗೆ ಅವರು ಹೇಳಿದ್ದಾರೆ. ಅವರ ಆದೇಶದಂತೆ ನಡೆಸಿಕೊಳ್ಳುತ್ತೇವೆ. ನಾವೆಲ್ಲ ಕಾಂಗ್ರೆಸ್ ಶಿಸ್ತಿನ ಸಿಪಾಯಿಗಳು ಎಂದರು. ಇಬ್ಬರ ನಡುವೆ ಒಪ್ಪಂದ ಇತ್ತಾ ಎಂಬ ಪ್ರಶ್ನೆಗೆ, ನಾವು ಅದು ಇತ್ತು, ಇಲ್ಲಾ ಎಂದು ಏನೂ ಹೇಳಲ್ಲ ಎಂದು ಮುಗುಳ್ನಗುತ್ತಾ ಎಚ್.ಕೆ.ಪಾಟೀಲ ಮಾತು ಮುಗಿಸಿದರು.


