ಕೇರಳ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ನೇಮಕವಾಗಿರುವ ಕೆ.ಜೆ.ಜಾರ್ಜ್‌ ಅವರು ಶುಕ್ರವಾರ ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಉದ್ದೇಶ ಕೇರಳ ಚುನಾವಣೆಗೆ ಸಂಬಂಧಿಸಿದ್ದಾದರೂ ರಾಜ್ಯ ಕಾಂಗ್ರೆಸ್‌ ವಲಯದಲ್ಲೂ ಈ ಭೇಟಿ ತೀವ್ರ ಕುತೂಹಲ

 ಬೆಂಗಳೂರು : ಕೇರಳ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ನೇಮಕವಾಗಿರುವ ಕೆ.ಜೆ.ಜಾರ್ಜ್‌ ಅವರು ಶುಕ್ರವಾರ ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಉದ್ದೇಶ ಕೇರಳ ಚುನಾವಣೆಗೆ ಸಂಬಂಧಿಸಿದ್ದಾದರೂ ರಾಜ್ಯ ಕಾಂಗ್ರೆಸ್‌ ವಲಯದಲ್ಲೂ ಈ ಭೇಟಿ ತೀವ್ರ ಕುತೂಹಲ ಹುಟ್ಟುಹಾಕಿದೆ.

ಜಾರ್ಜ್ ಅವರನ್ನು ನೆರೆಯ ಕೇರಳ ರಾಜ್ಯಕ್ಕೆ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಚುನಾವಣೆ ಕುರಿತು ರಾಹುಲ್‌ಗಾಂಧಿ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನುತ್ತವೆ ಮೂಲಗಳು.

ಆದರೆ, ಕೆ.ಜೆ.ಜಾರ್ಜ್ ಅವರು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ಮೊದಲು ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಜಾರ್ಜ್‌ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ಕೆ.ಜೆ.ಜಾರ್ಜ್ ಅವರು ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆಯೇ ಎಂಬ ಕುತೂಹಲ ಇದೀಗ ಉಂಟಾಗಿದೆ.

ಅಸ್ಸಾಂ ವೀಕ್ಷಕರ ಸಭೆಯಲ್ಲಿ ಡಿಕೆಶಿ ಭಾಗಿ:

ಮತ್ತೊಂದೆಡೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದ ಅಸ್ಸಾಂ ಚುನಾವಣೆ ವೀಕ್ಷಕರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾಗವಹಿಸಿದ್ದರು. ಆದರೆ, ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿಲ್ಲ. ಆದರೆ, ಶಿವಕುಮಾರ್‌ ಅವರು ದೆಹಲಿಯಲ್ಲೇ ತಂಗಿದ್ದು, ಶನಿವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಸಂಜೆ 5 ಗಂಟೆಗೆ ದೆಹಲಿಯಿಂದ ವಾಪಸಾಗಲಿದ್ದು, ಅದಕ್ಕೂ ಮೊದಲು ಕಾಂಗ್ರೆಸ್‌ ನಾಯಕರ ಭೇಟಿಗೆ ಅವಕಾಶ ದೊರೆಯುವುದೇ ಎಂಬ ಕುರಿತು ತೀವ್ರ ಕುತೂಹಲವಿದೆ.

ರಾಜಣ್ಣ ಮನೆಯಲ್ಲಿ ಸಿದ್ದುಗೆ ಔತಣಕೂಟ

ತುಮಕೂರು: ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ತುಮಕೂರು ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಔತಣಕೂಟದಲ್ಲಿ ಭಾಗಿಯಾದರು. ನನಗೆ ಹುಷಾರು ಇರಲಿಲ್ಲ. ಹಾಗಾಗಿ ಬಾಯಿ ಕೆಟ್ಟು ಹೋಗಿತ್ತು. ಆದ್ದರಿಂದ ಕೋಳಿ ಸಾರು, ಕಾಲುಸೂಪು, ಇಡ್ಲಿ ಸವಿದೆ ಎಂದು ಹೇಳಿದರು. ರಾಜಣ್ಣಗೆ ಮಂತ್ರಿ ಸ್ಥಾನ ನೀಡುವ ಕುರಿತು ವರಿಷ್ಠರ ಜತೆ ಚರ್ಚಿಸುವುದಾಗಿ ಹೇಳಿದರು.