ವಿಪಕ್ಷ ನಾಯಕ ಅಶೋಕ್ ಈಗ ನಿದ್ರೆಯಿಂದ ಎದ್ದಿದ್ದಾರೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್
ಜಯದೇವಕ್ಕೆ ಭೇಟಿ ನೀಡಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಅಶೋಕ್ ಇದೀಗ ಎಚ್ಚೆತ್ತಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಕಲಬುರಗಿ (ಜೂ.23): ನೀರಿಲ್ಲವೆಂದು ಶಸ್ತ್ರ ಚಿಕಿತ್ಸೆಗಳನ್ನೇ ಮಾಡಿಲ್ಲ, ನೂರಾರು ಜನರ ಆರೋಗ್ಯ ತೊಂದರೆಯಲ್ಲಿದೆ. ವೈದ್ಯಕೀಯ ಶಿಕ್ಷಣ ಸಚಿವರ ತವರಲ್ಲೇ ಹೀಂಗಾದರೆ ಹೇಗೆಂದು ವಿರೋಧ ಪಕ್ಷ ನಾಯಕ ಆರ್. ಅಶೋಕ್ ಕಲಬುರಗಿ ಜಿಮ್ಸ್, ಜಯದೇವಕ್ಕೆ ಭೇಟಿ ನೀಡಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಅಶೋಕ್ ಇದೀಗ ಎಚ್ಚೆತ್ತಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರಿ ಮಳೆ ಹಿನ್ನಲೆ ಸಡನ್ನಾಗಿ ಮಣ್ಣು ಮಿಶ್ರಿತ ನೀರು ಪೂರೈಕೆಯಾಗಿದೆ.
ಮುಂಜಾಗ್ರತೆಯಾಗಿ ಮೂರು ದಿನ ತುರ್ತು ಅಲ್ಲದ ಶಸ್ತ್ರ ಚಿಕಿತ್ಸೆ ತಡೆದಿದ್ದಾರೆ. ಕ್ಯಾತಲಾಬ್ ಎಲ್ಲಾ ಕೆಲಸ ಮಾಡುತ್ತಿದ್ದವು. ಜಯದೇವ ಆಸ್ಪತ್ರೆ ಮೇಲೆ ಜನರಿಗೆ ವಿಶ್ವಾಸ ಇದೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಆರ್. ಅಶೋಕ್ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅದು ಬಿಟ್ಟು ಅಭಿವೃದ್ಧಿಗಾಗಿ ಸಲಹೆ ಕೊಡಲಿ. ಒಳ್ಳೆಯ ಸಲಹೆಗಳನ್ನು ಜಾರಿಗೆ ತರುತ್ತೇವೆ ಎಂದರು. ಇದೇ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಮಾತನಾಡುತ್ತ, ಡಾ. ಮಂಜುನಾಥ್ ಕಟ್ಟಿದ ಜಯದೇವ ಆಸ್ಪತ್ರೆಯ ಗೌರವ ಈ ಸರ್ಕಾರ ಹಾಳು ಮಾಡುತ್ತಿದೆ ಎನ್ನುವ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.
ಜಯದೇವ ಆಸ್ಪತ್ರೆ ಮಂಜುನಾಥ್ ಕಟ್ಟಿದ್ದಲ್ಲ.. ಸರ್ಕಾರ ಕಟ್ಟಿ ಬೆಳೆಸಿದ ಆಸ್ಪತ್ರೆ ಅದು. ಕಲಬುರಗಿಗೆ ಜಯದೇವ ತಂದಿದ್ದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರೇ ಹೊರತು ಬೇರೆಯವರಲ್ಲ ಎಂದರು. ಸೂರಜ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಸುದ್ದಿಗಾರರು ಕೇಳಿದಾಗ, ಮಾಡಿದವರ ಪಾಪ ಆಡಿದವರ ಬಾಯಿಲ್ಲೇಕೆ...? ನಮ್ಮ ಬಾಯಲ್ಲಿ ಅವರ ಬಗ್ಗೆ ಮಾತು ಬೇಡ. ಅಭಿವೃದ್ಧಿ ಬಗ್ಗೆ ಕೇಳಿ ನಾವು ಮಾತನಾಡ್ತೇವೆ. ನಾನು, ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇವೆ. ನಾವು ತಪ್ಪು ಮಾಡಿದ್ರೆ ನಮ್ಮ ಬಗ್ಗೆ ಸುದ್ದಿ ಮಾಡಿ ನಾವು ತಿದ್ದಿಕೊಳ್ಳುತ್ತೇವೆ.
ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಸಮರ್ಥಿಸಿಕೊಳ್ಳುವುದು ನಾಚಿಕೆಗೇಡು: ಮಾಜಿ ಸಚಿವ ಎನ್.ಮಹೇಶ್
ಅದು ಬಿಟ್ಟು ರಾಜಕಾರಣ ಬಗ್ಗೆ ನಾವು ಮಾತನಾಡಲ್ಲ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು. ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಚರ್ಚೆ ವಿಚಾರವಾಗಿಯೂ ತಮ್ಮ ನಿಲುವು ಸ್ಪಷ್ಟಪಡಿಸಲು ನಿರಾಕರಿಸಿದ ಉಭಯ ಸಚಿವರು, ನಾವ್ಯಾರು ಡಿಸಿಎಂ ಆಕಾಂಕ್ಷಿಗಳಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಹತ್ತಿರ ಕೇಳಲು ಅವಕಾಶ ಇದೆ ಎಂದು ಹೇಳಿ ಸಾಗಹಾಕಿದರು.