Asianet Suvarna News Asianet Suvarna News

ಅಕ್ಕಿ ಬದಲು ಹಣ ಕೊಡಿ ಎಂದವರಿಂದಲೇ ಈಗ ಟೀಕೆ, ಬಡವರ ಹಸಿವಲ್ಲಿ ರಾಜಕೀಯ ಬೇಡ: ಸಚಿವ ಪರಮೇಶ್ವರ್‌

ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅಕ್ಕಿ ಕೊಟ್ಟೆಕೊಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. 

minister dr g parameshwar says dont do politics in poor people hunger gvd
Author
First Published Jun 30, 2023, 1:20 AM IST

ತುಮಕೂರು/ಕೊರಟಗೆರೆ (ಜೂ.30): ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅಕ್ಕಿ ಕೊಟ್ಟೆ ಕೊಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಅಕ್ಕಿ ಕೊಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸ್ಪಷ್ಟಪಡಿಸಿದರು.

ಕೊರಟಗೆರೆಯ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಬದಲಿಗೆ ದುಡ್ಡು ಕೊಡುವುದನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ಆದರೆ ನಾವು ದುಡ್ಡು ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್‌ಸಿಐನಲ್ಲಿ 7 ಲಕ್ಷ ಟನ್‌ ಅಕ್ಕಿ ದಾಸ್ತಾನಿದೆ. ಖಾಸಗಿಯವರಿಗೆ ಮಾರುತ್ತಿದ್ದಾರೆ. ನಮಗೆ ರಾಜಕೀಯ ಕಾರಣಕ್ಕೋಸ್ಕರ ಅಕ್ಕಿ ಕೊಡುತ್ತಿಲ್ಲ ಎಂದು ದೂರಿದರು.

ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್‌: ಯತ್ನಾಳ್‌ ವಿರುದ್ಧ ಮುರುಗೇಶ್‌ ನಿರಾಣಿ ವಾಗ್ದಾಳಿ

5 ಕೆ.ಜಿ. ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಕೇವಲ ಮೂರು ತಿಂಗಳ ಕಾಲ ಮಾತ್ರ ದುಡ್ಡು ಕೊಡುತ್ತೇವೆ. ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ. 10 ಕೆ.ಜಿ. ಅಕ್ಕಿಗೆ ದುಡ್ಡು ಹಾಕಬೇಕು ಎಂಬ ಬಿಜೆಪಿಯವರ ವಾದ ಸರಿಯಿಲ್ಲ. ಬಿಜೆಪಿಯವರಿಗೆ ಇದರ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಕೊಟ್ಟಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.

ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿಯವರು ಸಲಹೆ ನೀಡಿದ್ದಕ್ಕೆ ದುಡ್ಡು ತಿನ್ನೋಕಾಗುತ್ತಾ ಎಂದ ಸಿದ್ದರಾಮಯ್ಯ ಅವರು ಹೇಳಿದ್ದ ವಿಚಾರವನ್ನು ಪತ್ರಕರ್ತರು ಪ್ರಸ್ತಾಪಿಸಿದಾಗ, ಇದು ಪ್ರೆಸ್ಟೀಜ್‌ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು. ಪ್ರೆಸ್ಟೀಜ್‌ನಿಂದ ಹೊಟ್ಟೆ ತುಂಬಲ್ಲ. ಬಿಜೆಪಿಯವರೇ ಹಣ ಕೊಡಿ ಹಣ ಕೊಡಿ ಎಂದು ಬೊಬ್ಬೆಯೊಡೆದರು. ಈಗ ಏಕಾಏಕಿ ಟೀಕೆ ಮಾಡುತ್ತಿದ್ದಾರೆ. ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಸ್ನೇಹಿತರಲ್ಲಿ ಮನವಿ ಮಾಡುತ್ತೇವೆ ಎಂದರು.

ತ್ಯಾಗ-ಬಲಿದಾನದ ಸಂಕೇತ: ಬಕ್ರೀದ್‌ ಹಬ್ಬ ತ್ಯಾಗ ಬಲಿದಾನದ ಸಂಕೇತ. ಮಹಮ್ಮದ್‌ ಇಬ್ರಾಹಿಂ ತನ್ನ ಮಗನನ್ನೇ ಅಲ್ಲಾನಿಗೆ ಬಲಿ ಕೊಟ್ಟಿದ್ದರು. ಅಂತಹ ಮಹಾನ್‌ ಬಲಿದಾನದ ಸಂಕೇತ. ಎಲ್ಲರಿಗೂ ಶುಭಕಾಮನೆ ಹೇಳಿದ್ದೇನೆ. ಭಾರತ ಶಾಂತಿ ನಂಬಿದ ದೇಶ, ಸಂವಿಧಾನದಲ್ಲೇ ಅದನ್ನು ಅಳವಡಿಸಿಕೊಂಡಿದ್ದೇವೆ ಎಂದರು. ಎಲ್ಲೋ ಒಂದು ಕಡೆ ಮುಸ್ಲಿಮರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. 

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಕಾಂಗ್ರೆಸ್‌ ಜಾತ್ಯತೀತವಾದ ಪಕ್ಷ. ಹಾಗಾಗಿ ಅವರು ನಮ್ಮ ಜತೆ ನಿಂತಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿ ಜತೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಡಬೇಕಿದೆ. ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ಯಾರ ಮೇಲೂ ದ್ವೇಷ ಸಾಧಿಸಲು ಹೋಗುವುದಿಲ್ಲ. ಶಾಂತಿ ಕಾಪಾಡುವುದು ನಮ್ಮ ಆದ್ಯತೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow Us:
Download App:
  • android
  • ios