ಕಾಂಗ್ರೆಸ್, ಜೆಡಿಎಸ್‌ಗೆ ಭವಿಷ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ
ಸಾಕಷ್ಟು ಕಾಲ ಅಧಿಕಾರ ನಡೆಸಿದರೂ ಸಹ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಶಾಶ್ವತ ಯೋಜನೆ ರೂಪಿಸಲು ಸಾಧ್ಯವಾಗದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಾಗಮಂಗಲ (ಫೆ.22): ಸಾಕಷ್ಟು ಕಾಲ ಅಧಿಕಾರ ನಡೆಸಿದರೂ ಸಹ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಶಾಶ್ವತ ಯೋಜನೆ ರೂಪಿಸಲು ಸಾಧ್ಯವಾಗದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ತಾಲೂಕು ಘಟಕ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕಾಂಗ್ರೆಸ್ ಕೆಲವೇ ವ್ಯಕ್ತಿಗಳು, ಜೆಡಿಎಸ್ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಈ ಪಕ್ಷಗಳು ತಮ್ಮ ಆಡಳಿತದಲ್ಲಿ ಯಾವುದೇ ಜನಪರ ಯೋಜನೆ ನೀಡಿಲ್ಲ ಎಂದು ದೂರಿದರು.
ಬಿಜೆಪಿ ಜನಸಾಮಾನ್ಯರ ಪಕ್ಷವಾಗಿರುವ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಮಹಿಳೆಯರಿಗೆ ಉದ್ಯೋಗ, ಆರ್ಥಿಕ ಸ್ಥಿತಿ ಹೆಚ್ಚಳ, ಕೌಶಲ್ಯತೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮ ನೀಡಿದೆ ಎಂದರು. ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಸಂಘಗಳಿಗೆ ಸಂಜೀವಿನಿ ಯೋಜನೆ ಮೂಲಕ 4.34 ಸಾವಿರ ಕೋಟಿ ರು. ಹಣವನ್ನು ಪ್ರಾರಂಭ ನಿಧಿಯಾಗಿ ಕೊಟ್ಟಿದೆ. ಇದಲ್ಲದೆ ಮಹಿಳೆಯರೇ ನಿರ್ವಹಣೆ ಮಾಡುವ ಸ್ವ ಸಹಾಯ ಸಂಘಗಳಿಗೆ 44 ಸಾವಿರ ಕೋಟಿ ರು.ಗಳನ್ನು ನೀಡಿದೆ. ರಾಜ್ಯದ ಕುಡಿವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ 85 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.
ಭಗವದ್ಗೀತೆ ಮೇಲೆ ನಂಬಿಕೆ ಇಟ್ಟಷ್ಟೇ, ನಮ್ಮ ಪ್ರಣಾಳಿಕೆ ಮೇಲೆ ನಂಬಿಕೆಯಿಡಿ: ಸಚಿವ ಸುಧಾಕರ್
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ತಾಲೂಕಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಿ ಸ್ಥಳೀಯ ಯುವ ಸಮುದಾಯಕ್ಕೆ ಉದ್ಯೋಗ ಕೊಟ್ಟು ತಾಲೂಕಿನ ಜನರು ವಲಸೆ ಹೋಗವುದನ್ನು ತಪ್ಪಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಕೈಗಾರಿಕಾ ಘಟಕ ಸ್ಥಾಪನೆಗೆ ಸ್ಥಳೀಯ ಕೆಲ ರಾಜಕೀಯ ವ್ಯಕ್ತಿಗಳಿಂದ ಅಡಚಣೆಯಾಗುತ್ತಿದೆ ಎಂದು ದೂರಿದರು. ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಹುಟ್ಟಿದ ಮಣ್ಣಿನ ಋುಣ ತೀರಿಸಬೇಕೆಂದು ಸಂಕಲ್ಪ ಮಾಡಿ ನಿಮ್ಮ ಮನೆ ಮಗನಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಲ್ಲಿಕಾರ್ಜುನ್ (ಫೈಟರ್ ರವಿ) ಅವರಿಗೆ ಕ್ಷೇತ್ರದ ಜನರು ಮತ್ತಷ್ಟುಶಕ್ತಿ ತುಂಬಬೇಕೆಂದು ತಿಳಿಸಿದರು.
ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಒಬ್ಬ ಶಾಸಕರನ್ನು ಆಯ್ಕೆ ಮಾಡಿ ಬಿಜೆಪಿ ಖಾತೆ ತೆರೆದಿರುವಂತೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕು ಎಂಬುದು ಬಿಜೆಪಿ ಪಕ್ಷದ ಗುರಿಯಾಗಿದೆ. ಹಾಗಾಗಿ ತಾಲೂಕಿನ ಜನರು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದರು. ಸಮಾವೇಶ ಉದ್ಘಾಟಿಸಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ್ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಟವೆಲ್‌ಗೆ ವಿಕ್ಸ್ ಹಚ್ಚಿಕೊಂಡು ಕಣ್ಣೀರು ಹಾಕುವ ಜೆಡಿಎಸ್ ನಾಯಕರು, ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರ ಯಾವುದೇ ಮರಳು ಮಾತುಗಳಿಗೆ ಸೊಪ್ಪು ಹಾಕಬಾರದೆಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕುಟುಕಿದರು.
ಒಡೆದಾಳುವುದು ಕಾಂಗ್ರೆಸ್ನ ಟ್ರೇಡ್ ಮಾರ್ಕ್: ಜೆ.ಪಿ.ನಡ್ಡಾ
ಕೇವಲ ಅಭಿವೃದ್ಧಿಯಷ್ಟೇ ನಮ್ಮ ಮಂತ್ರ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಜನಪರ ಯೋಜನೆಗಳನ್ನು ಮನಗಂಡು ಪ್ರತಿಯೊಬ್ಬರೂ ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸಮಾರಂಭದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಫೈಟರ್‌ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಯಶೋಧ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ, ಮಾಜಿ ಶಾಸಕ ಮಾರುತಿ ಪವಾರ್, ಪಕ್ಷದ ಮುಖಂಡರಾದ ನಾರಾಯಣಸ್ವಾಮಿ, ಡಾ.ಐ.ವಿಷ್ಣುಮೂರ್ತಿಭಟ್, ಅಜಿತ್, ಸೋಮಶೇಖರ್, ತೊಳಲಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಮಹಿಳಾ ಘಟಕದ ಅಧ್ಯಕ್ಷರು ಇದ್ದರು.