Asianet Suvarna News Asianet Suvarna News

ಕಾಂಗ್ರೆಸಿಗರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಅಶ್ವತ್ಥ್‌ ನಾರಾಯಣ ಎಚ್ಚರಿಕೆ

ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಶೀಲಿಸಲಾಗಿದೆ ಎಂದು ಕಾಂಗ್ರೆಸಿಗರು ಆರೋಪ ಮಾಡುತ್ತಿರುವ ಚಿಲುಮೆ ಟ್ರಸ್ಟ್‌ಗೂ ನನ್ನ ಸಹೋದರನ ಹೊಂಬಾಳೆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. 

Minister Dr Cn Ashwath Narayan Outraged Against Congress gvd
Author
First Published Nov 18, 2022, 11:01 AM IST

ಬೆಂಗಳೂರು (ನ.18): ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಶೀಲಿಸಲಾಗಿದೆ ಎಂದು ಕಾಂಗ್ರೆಸಿಗರು ಆರೋಪ ಮಾಡುತ್ತಿರುವ ಚಿಲುಮೆ ಟ್ರಸ್ಟ್‌ಗೂ ನನ್ನ ಸಹೋದರನ ಹೊಂಬಾಳೆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರಿಗೆ ಪದೇ ಪದೇ ಮಸಿ ಬಳಿಯಲು ಯತ್ನಿಸುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಎಚ್ಚರಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲೇ ಮುಳುಗಿರುವ ಕಾಂಗ್ರೆಸ್‌ನವರಿಗೆ ಮಾಡಲು ಏನೂ ಕೆಲಸವಿಲ್ಲ. ನನ್ನ ಹೆಸರಿಗೆ ಮಸಿ ಬಳಿಯಲು ಇವರೆಲ್ಲಾ ಹೊಂಚು ಹಾಕುತ್ತಿದ್ದಾರೆ. ಹೀಗಾಗಿ ಅವರೆಲ್ಲ ಹೊಂಬಾಳೆ ಎಂಬ ಸಂಸ್ಥೆಯ ಹೆಸರನ್ನು ಪ್ರಸ್ತಾಪಿಸಿ ನನ್ನ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಇಂದು ಎಂದಿನಂತೆ ಗಾಳಿಯಲ್ಲಿ ಗುಂಡು ಹೊಡೆಯುವ ಚಾಳಿಯಾಗಿದೆ. ಯಾರಾದರೂ ತಪ್ಪು ಮಾಡಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಅದು ಬಿಟ್ಟು ನನ್ನ ವಿರುದ್ಧ ಆರೋಪ ಮಾಡುವ ಚಿಲ್ಲರೆ ಬುದ್ಧಿ ತೋರಿಸಬಾರದು ಎಂದು ತಿರುಗೇಟು ನೀಡಿದರು.

ವಿದ್ಯುನ್ಮಾನ ವಲಯದಲ್ಲಿ 36000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ್‌ ನಾರಾಯಣ

ನನ್ನ ಸಹೋದರನದು ಹೊಂಬಾಳೆ ಎಂಬ ಸಂಸ್ಥೆ ಇದ್ದು, ಸಿನಿಮಾ ನಿರ್ಮಾಣದಲ್ಲಿ ತೊಡಗಿದೆ. ಈ ಸಂಸ್ಥೆಯು ನಾಡು ಮತ್ತು ದೇಶವೇ ಮೆಚ್ಚುವಂಥ ಸಿನಿಮಾಗಳನ್ನು ಮಾಡಿ, ಗೌರವ ತಂದಿದೆ. ಈಗ ಅವರು ಹೇಳುತ್ತಿರುವ ಹೊಂಬಾಳೆ (ಚಿಲುಮೆ ಟ್ರಸ್ಟ್‌) ಸಂಸ್ಥೆಗೂ ನಮ್ಮ ಸೋದರನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಆ ಹೆಸರನ್ನು ಇಟ್ಟುಕೊಳ್ಳಬೇಡಿ ಎಂದು ಹೇಳಲು, ಮಲ್ಲೇಶ್ವರದಲ್ಲಿ ಕಚೇರಿ ಇರಬಾರದು ಎನ್ನಲು ನಾನ್ಯಾರು ಎಂದು ಪ್ರಶ್ನಿಸಿದರು.

ಆಧಾರ ತೋರಿಸದೆ ಪಲಾಯನ: ನಾನು ತತ್ವ, ಸಿದ್ಧಾಂತಗಳಿಗಾಗಿ ರಾಜಕೀಯಕ್ಕೆ ಬಂದಿದ್ದೇನೆಯೇ ವಿನಃ ಕಾಂಗ್ರೆಸ್ಸಿನವರಂತೆ ಕುಟುಂಬ ರಾಜಕಾರಣಕ್ಕಲ್ಲ. ಕಾಂಗ್ರೆಸಿಗರ ಬಳಿ ಗಂಭೀರ ವಿಚಾರಗಳಿಲ್ಲ. ಈ ಹಿಂದೆ ಪಿಎಸ್‌ಐ ಹಗರಣದಲ್ಲೂ ಇವರೆಲ್ಲ ನನ್ನ ಹೆಸರನ್ನು ವಿನಾ ಕಾರಣ ಎಳೆದು ತಂದಿದ್ದರು. ಆದರೆ ಆಧಾರ ತೋರಿಸಿ ಎಂದಾಗ ಪಲಾಯನ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಪತ್ರಕರ್ತರಿಗೆ ಸರ್ಕಾರದಿಂದಲೇ ಸರ್ಟಿಫಿಕೆಟ್‌ ಕೋರ್ಸ್‌: ಸಚಿವ ಅಶ್ವತ್ಥ್‌

ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಚುನಾವಣಾ ಆಯೋಗದ ಕೆಲಸ. ಅದರಲ್ಲಿ ಮುಖ್ಯಮಂತ್ರಿಗಳಾಗಲೀ ಅಥವಾ ನನ್ನ ಪಾತ್ರ ಏನೂ ಇಲ್ಲ. ಕಾಂಗ್ರೆಸ್‌ನವರು ಈಗ ಆರೋಪ ಮಾಡುತ್ತಿರುವ ಸಂಸ್ಥೆಯ ಪ್ರಮುಖ ವ್ಯಕ್ತಿ ನನ್ನೊಂದಿಗೆ ಫೋಟೋ ತೆಗೆಸಿಕೊಂಡಿರಬಹುದು. ಸಾರ್ವಜನಿಕ ಜೀವನದಲ್ಲಿರುವಾಗ ಹೀಗೆ ಸಾವಿರಾರು ಜನ ಏನೇನೋ ಕೆಲಸದ ಕಾರಣಕ್ಕೆ ಬರುತ್ತಾರೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

Follow Us:
Download App:
  • android
  • ios