ರಾಜ್ಯದ ಎಲೆಕ್ಟ್ರಾನಿಕ್‌ ವಲಯದಲ್ಲಿ 36,804 ಕೋಟಿ ರು. ಬಂಡವಾಳ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಕಟಿಸಿದರು. 

ಬೆಂಗಳೂರು (ನ.17): ರಾಜ್ಯದ ಎಲೆಕ್ಟ್ರಾನಿಕ್‌ ವಲಯದಲ್ಲಿ 36,804 ಕೋಟಿ ರು. ಬಂಡವಾಳ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಕಟಿಸಿದರು. ‘ಬೆಂಗಳೂರು ತಂತ್ರಜ್ಞಾನ ಸಮಾವೇಶ’ದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್‌ ವಲಯದಲ್ಲಿ ರಾಜ್ಯದಬೇರೆ ಬೇರೆ ಭಾಗಗಳಲ್ಲಿ 36 ಸಾವಿರ ಕೋಟಿ ರು. ಹೂಡಿಕೆ ಮಾಡಲು ಕಂಪನಿಗಳು ಆಸಕ್ತಿ ವಹಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಸಾಧನೆ ಅಭೂತಪೂರ್ವವಾಗಿದ್ದು, ಇಡೀ ದೇಶ ಮತ್ತು ಜಗತ್ತು ನೋಡುತ್ತಿವೆ ಎಂದು ಹೇಳಿದರು.

ಐಟಿ ಮತ್ತು ಬಿಟಿ ವಲಯದಲ್ಲಿ ಈಗ ನಡೆಯುತ್ತಿರುವ 135 ಶತಕೋಟಿ ಡಾಲರ್‌ ಮೌಲ್ಯದ ರಫ್ತು ವಹಿವಾಟನ್ನು 2025ರ ಹೊತ್ತಿಗೆ 300 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯಿದೆ. ರಾಜ್ಯವು ಸೆಮಿಕಂಡಕ್ಟರ್‌, ಚಿಪ್‌, ವಿನ್ಯಾಸ ಇತ್ಯಾದಿ ಕ್ಷೇತ್ರಗಳ ತೊಟ್ಟಿಲಾಗುತ್ತಿದೆ. ಸೆಮಿ ಕಂಡಕ್ಟರ್‌ ಕ್ಷೇತ್ರದಲ್ಲಿ ಈಗಾಗಲೇ 22,900 ಕೋಟಿ ರು. ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪತ್ರಕರ್ತರಿಗೆ ಸರ್ಕಾರದಿಂದಲೇ ಸರ್ಟಿಫಿಕೆಟ್‌ ಕೋರ್ಸ್‌: ಸಚಿವ ಅಶ್ವತ್ಥ್‌

ರಾಜ್ಯದಲ್ಲಿ ಗುಣ ಮಟ್ಟದ ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಆದ್ಯತೆ ನೀಡಲಾಗಿದೆ. ಉದ್ಯಮಗಳಿಗೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ನಿರಂತರವಾಗಿ ಪೂರೈಸುವ ದಕ್ಷ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ದೇಶದ ಒಟ್ಟು ಸ್ಟಾರ್ಟಪ್‌ ವಲಯದ ಮೌಲ್ಯದಲ್ಲಿ ರಾಜ್ಯವು ಶೇ.55 ರಷ್ಟು ಪಾಲು ಹೊಂದಿದೆ. ರಾಜ್ಯದಲ್ಲಿ ಮೂಲಸೌಲಭ್ಯ ಸುಧಾರಣೆ ಮತ್ತು ಸಂಚಾರ ವ್ಯವಸ್ಥೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪ್ರಾಶಸ್ತ್ಯ ನೀಡಿದೆ ಎಂದರು.

ಮಳಿಗೆಗಳಿಗೆ ಸಚಿವರ ಭೇಟಿ, ಮೆಚ್ಚುಗೆ: ಟೆಕ್‌ ಶೃಂಗದಲ್ಲಿ ಭಾಗಿಯಾಗಿರುವ 100ಕ್ಕೂ ಅಧಿಕ ಸ್ಟಾರ್ಚ್‌ಅಪ್‌ ಮಳಿಗೆಗಳಿಗೆ ಐಟಿ-ಬಿಟಿ ಸಚಿವ ಡಾ.ಸಿ ಎನ್‌.ಅಶ್ವತ್ಥನಾರಾಯಣ ಅವರು ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ನವೋದ್ಯಮವನ್ನು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಿದರು. ಯುವ ಜನರು ಮತ್ತು ಮಕ್ಕಳೊಂದಿಗೂ ಮಾತನಾಡಿದರು. ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಅರ್ಜುನ್‌ ಒಡೆಯರ್‌ ಸಚಿವರಿಗೆ ಸಾಥ್‌ ನೀಡಿದರು.

ಕೃಷಿ, ವಿದ್ಯುತ್‌ ಉತ್ಪಾದನೆ ಹೆಚ್ಚಳ ಅನಿವಾರ್ಯ: ಜಗತ್ತಿನ ಅಧಿಕ ದೇಶಗಳು ಈಗ ಜಾಗತಿಕರಣದ ಹಾದಿ ಬಿಟ್ಟು ಸ್ಥಳೀಯವಾಗುತ್ತಿವೆ. ಹೀಗಾಗಿ ಭಾರತ ಕೃಷಿ ಮತ್ತು ವಿದ್ಯುತ್‌ ಕ್ಷೇತ್ರದಲ್ಲಿನ ಉತ್ಪಾದನೆಯನ್ನು ಕನಿಷ್ಠ ಪಕ್ಷ ಎರಡು ಪಟ್ಟು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲದಿದ್ದರೆ, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಲಾಭ ಕೈತಪ್ಪಿ ಹೋಗಲಿದೆ ಎಂದು ಉದ್ಯಮಿ ಡಾ.ಗೋಪಿಚಂದ್‌ ಕಾಟ್ರಗಡ್ಡ ಆತಂಕ ವ್ಯಕ್ತಪಡಿಸಿದರು. ‘ಮುಂಚೂಣಿಗೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ: ಸಚಿವ ಅಶ್ವತ್ಥ್‌ನಾರಾಯಣ

ಜೀವಶಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆ ಎರಡೂ ಇಂದು ಜಗತ್ತನ್ನು ಆಳುತ್ತಿವೆ. ಹೀಗಾಗಿ, ದೊಡ್ಡ ದೊಡ್ಡ ಕಂಪನಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕಾಗಿದೆ. ಭಾರತವು ಸದ್ಯಕ್ಕೆ 400 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದು, ಇದನ್ನು 800 ಗಿಗಾವ್ಯಾಟ್‌ಗೆ ಹೆಚ್ಚಿಸಬೇಕು ಎಂದು ಅಭಿಪ್ರಾಯಪಟ್ಟರು. ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಹಣ ಒಟ್ಟು ಜಿಡಿಪಿಯ ಶೇ.3.6 ರಷ್ಟುಮಾತ್ರ. ಅಮೆರಿಕಾದಲ್ಲಿ ಇದು ಶೇ.15 ರಷ್ಟಿದೆ. ಆದ್ದರಿಂದ ನಮ್ಮಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ವಿನಿಯೋಗಿಸುತ್ತಿರುವ ಹಣ ಶೇ.7 ರಷ್ಟಾದರೂ ಇರಬೇಕು ಎಂದು ಸಲಹೆ ನೀಡಿದರು.