*    ಭ್ರಷ್ಟಾಚಾರದ ಟ್ರೆಂಡ್‌ ಸೆಟ್ಟರ್‌ ಡಿಕೆಶಿ ಸೋದರರು*   ತಮ್ಮನ್ನು ಕಡುಭ್ರಷ್ಟ ಎಂದ ಡಿಕೆಶಿಗೆ ಸಚಿವ ತಿರುಗೇಟು*  ರಾಜ್ಯದಲ್ಲಿ ಭ್ರಷ್ಟಾಚಾರ, ಅಕ್ರಮ, ಅವ್ಯವಹಾರದ ಟ್ರೆಂಡ್‌ ಸೆಟ್ಟರ್‌ಗಳೇ ಕಾಂಗ್ರೆಸ್ಸಿಗರು  

ಬೆಂಗಳೂರು(ಜೂ.16): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಹೋದರರು ರಾಜ್ಯದ ಭ್ರಷ್ಟಾಚಾರ ರಾಯಭಾರಿಗಳು. ರಾಜ್ಯದಲ್ಲಿ ಭ್ರಷ್ಟಾಚಾರದ ಟ್ರೆಂಡ್‌ ಸೆಟ್‌ ಮಾಡಿದ್ದೇ ಇವರು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿರುಗೇಟು ನೀಡಿದ್ದಾರೆ.

ಮಂಗಳವಾರವಷ್ಟೇ ಸಚಿವ ಅಶ್ವತ್ಥನಾರಾಯಣ ರಾಜ್ಯದ ಕಡು ಭ್ರಷ್ಟಮಂತ್ರಿ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದರು. ಈ ಸಂಬಂಧ ಬುಧವಾರ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ ನಾರಾಯಣ, ‘ಡಿಕೆ ಸಹೋದರರು ರಾಜ್ಯದ ಭ್ರಷ್ಟಾಚಾರದ ರಾಯಭಾರಿಗಳು. ಅವರ ಪಕ್ಷ ಕಾಂಗ್ರೆಸ್‌ ಕೂಡ ಭ್ರಷ್ಟಾಚಾರದ ರಾಯಭಾರಿ ಆಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ, ಅಕ್ರಮ, ಅವ್ಯವಹಾರದ ಟ್ರೆಂಡ್‌ ಸೆಟ್ಟರ್‌ಗಳೇ ಅವರು. ಈ ಜೈಲು ಹಕ್ಕಿಗಳು ಮೂರನೇ ದರ್ಜೆಯವರ ರೀತಿ ನನ್ನ ವಿರುದ್ಧ ಏನೇ ಆಪಾದನೆ ಮಾಡಿದರೂ ಉತ್ತಮ ಸಮಾಜಕ್ಕಾಗಿ ಮತ್ತು ರಾಜ್ಯದ ಅಭ್ಯುದಯಕ್ಕಾಗಿ ಯಾವುದೇ ಕಿರುಕುಳ, ಅಗ್ನಿಪರೀಕ್ಷೆಗಳನ್ನು ಎದುರಿಸಲು ಸಿದ್ಧ’ ಎಂದರು.

ದೇಶದ ಅತೀ ಭ್ರಷ್ಟ ಸಚಿವ ಅಂದ್ರೆ ಅದು ಅಶ್ವತ್ಥನಾರಾಯಣ!

‘ನನ್ನ ಬಗ್ಗೆ ನಿರಾಧಾರವಾಗಿ ಬಾಯಿಗೆ ಬಂದಂತೆ ಮಾತನಾಡುವ ವ್ಯಕ್ತಿಗಳಿಗೆ ಮತ್ತು ಕೀಳುಮಟ್ಟದಲ್ಲಿ ಮಾತನಾಡುವ ವ್ಯಕ್ತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಅವರು ಕೀಳು ಮಟ್ಟದಲ್ಲೇ ಬೆಳೆದು, ಬದುಕಿ ಬಂದವರು. ಬೇರೆಯವರ ಬಗ್ಗೆ ಮನಬಂದಂತೆ ಆಪಾದನೆ ಮಾಡುವುದಲ್ಲಿ ನಿಪುಣರು. ಯಾರು ನಮ್ಮನ್ನು ಕಚಡಾ ಅಂದಿದ್ದಾರೋ ಅವರೇ ಕಚಡಾಗಳು. ನಾನು ಸಜ್ಜನಿಕೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ’ ಎದು ಹೇಳಿದರು.

ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖಾ ವರದಿ ಬಂದ ಬಳಿಕವೇ ಯಾವ ಪರೀಕ್ಷೆ ರದ್ದುಮಾಡಬೇಕು, ಯಾವುದನ್ನು ಮರು ಪರೀಕ್ಷೆ ಮಾಡಬೇಕು ಏನು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲಾವುದು ಅಂತ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.