* ತಮ್ಮನ್ನು ಭ್ರಷ್ಟಎಂದ ಡಿಕೆಶಿಗೆ ಅಶ್ವತ್ಥ್ ನಾರಾಯಣ್ ತಿರುಗೇಟು* ಡಿಕೆಶಿ ಭ್ರಷ್ಟಾಚಾರಕ್ಕೆ ಹೆಸರುವಾಸಿ, ನನ್ನ ಬಗ್ಗೆ ದಾಖಲೆ ರಹಿತ ಆರೋಪ* ಅಶ್ವತ್ಥ್‌ನಾರಾಯಣ ಅತ್ಯಂತ ಭ್ರಷ್ಟ ಸಚಿವ
ಬೆಂಗಳೂರು(ಮೇ.05): ಭ್ರಷ್ಟಾಚಾರಕ್ಕೆ(Corruption) ಹೆಸರುವಾಸಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಬಹಳ ದೊಡ್ಡ ಹೇಳಿಕೆ ನೀಡಿದ್ದಾರೆ. ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದ ವ್ಯಕ್ತಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ(CN Ashwath Narayan) ತಿರುಗೇಟು ನೀಡಿದ್ದಾರೆ.
ಎಸ್‌ಐ ನೇಮಕಾತಿ ಹಗರಣಕ್ಕೆ(PSI Recruitment Scam) ಸಂಬಂಧಿಸಿದಂತೆ ‘ಅಶ್ವತ್ಥನಾರಾಯಣ ಅತ್ಯಂತ ಭ್ರಷ್ಟಸಚಿವ’ ಎಂಬ ಡಿ.ಕೆ.ಶಿವಕುಮಾರ್(DK Shivakumar) ಹೇಳಿಕೆಗೆ ಪ್ರತಿಕ್ರಿಯಿಸಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರು ಯಾವುದೇ ದಾಖಲೆ ಇಲ್ಲದೆ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬಂದ ವ್ಯಕ್ತಿ ನನ್ನ ಬಗ್ಗೆ ಮಾತನಾಡಿದ್ದಾರೆ. ನೈತಿಕತೆ ಇಲ್ಲದ ವ್ಯಕ್ತಿ ಮಾಡಿರುವ ಸುಳ್ಳು ಆರೋಪಗಳನ್ನು ನಾನು ಖಂಡಿಸುತ್ತೇನೆ’ ಎಂದು ಹೇಳಿದರು.
PSI Scam: ನಾನು ಸಿಎಂ ಆಗುತ್ತೇನೆಂದು ಡಿಕೆಶಿಗೆ ಭಯ: ಸಚಿವ ಅಶ್ವತ್ಥ ನಾರಾಯಣ
‘ಕಾಂಗ್ರೆಸ್(Cogress) ಸೋತು ಸುಣ್ಣವಾಗಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವ್ಯಕ್ತಿಯ ಆರೋಪಕ್ಕೆ ಯಾವುದೇ ಕಿಮ್ಮತ್ತಿಲ್ಲ. ಸಿಐಡಿ ತನಿಖೆ ನಡೆಸುತ್ತಿದ್ದು, ದಾಖಲೆ ಇದ್ದರೆ ಮುಂದೆ ಬನ್ನಿ. ತನಿಖೆ ವೇಳೆ ಸುಳ್ಳು ಹೇಳಿಕೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ. ಕಾಂಗ್ರೆಸ್ ಪಕ್ಷವೇ ಜೈಲಿಗೆ ಹೋಗಿ ಬಂದವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಅಂತಹ ಅಧ್ಯಕ್ಷರು ಬೇರೆ ಪಕ್ಷಗಳತ್ತ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದರು.
ಜೈಲು ಸೇರಿದವರ ಪರವಾಗಿ ಸಿದ್ದು ಹೇಳಿಕೆ:
‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಅಸಹಾಯಕರಾಗಿದ್ದಾರೆ. ಜೈಲಿಗೆ ಹೋಗಿ ಬಂದ ಡಿ.ಕೆ. ಶಿವಕುಮಾರ್ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದ ಇವರ ವಿರುದ್ಧ ಸಿದ್ದರಾಮಯ್ಯ ಎಂದಾದರೂ ಧ್ವನಿ ಎತ್ತಿದ್ದಾರಾ?’ ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿದರು.
‘ಇದೇ ಪ್ರಕರಣ ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದರೆ ತನಿಖೆಗೆ ವಹಿಸುತ್ತಿರಲಿಲ್ಲ. ನಮ್ಮ ಸಚಿವರು ಗಮನಕ್ಕೆ ಬಂದ ಕೂಡಲೇ ತನಿಖೆಗೆ ಆದೇಶಿಸಿದ್ದಾರೆ. ನಮ್ಮ ಉನ್ನತ ಶಿಕ್ಷಣ ಇಲಾಖೆ ಬಗ್ಗೆಯೂ ದೂರು ಬಂದಿದ್ದು, ತಕ್ಷಣ ತನಿಖೆಗೆ ನೀಡಲಾಗಿದೆ’ ಎಂದು ಸಮರ್ಥಿಸಿಕೊಂಡರು.
ಗೌಡರೆಲ್ಲ ನನ್ನ ಸಂಬಂಧಿಕರು:
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿರುವ ದರ್ಶನ್ ಗೌಡ, ನಾಗೇಶ್ ಗೌಡ ನಿಮ್ಮ ಸಂಬಂಧಿಗಳೇ ಎಂಬ ಪ್ರಶ್ನೆಗೆ, ‘ರಾಜ್ಯದಲ್ಲಿರುವ ಎಲ್ಲ ಗೌಡರು ನನ್ನ ಸಂಬಂಧಿಕರೇ. ಯಾರೇ ಇರಲಿ ಎಲ್ಲರೂ ನನ್ನ ಸಂಬಂಧಿಗಳೇ. ಇಲ್ಲಿ ಅವರು ಬೇರೆ, ಇವರು ಬೇರೆ ಇಲ್ಲ. ಗೌಡರು ಯಾರಿದ್ದಾರೆ ಎಲ್ಲರೂ ನಮ್ಮವರೇ’ ಎಂದಷ್ಟೇ ಹೇಳಿದರು.
ಅಶ್ವತ್ಥ್‌ನಾರಾಯಣ ಅತ್ಯಂತ ಭ್ರಷ್ಟ ಸಚಿವ: ಡಿಕೆಶಿ
ರಾಮನಗರ/ಕನಕಪುರ: ಡಾ.ಅಶ್ವತ್ಥ ನಾರಾಯಣ ಅವರು ರಾಜ್ಯದಲ್ಲೇ(Karnataka) ಅತ್ಯಂತ ಹೆಚ್ಚು ಭ್ರಷ್ಟ ಸಚಿವ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗಿದ್ದರೂ ಅವರು ತಮ್ಮನ್ನು ತಾವು ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುವ ಅಗತ್ಯವೇನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
PSI Scam: ಪ್ರಭಾವಿ ಸಚಿವರ ಹೆಸರನ್ನ ಹೇಳಬೇಡಿ ಎಂದು ನನಗೆ ಕರೆ ಬರ್ತಿವೆ: ಡಿಕೆಶಿ
ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ, ಅವರೇನೋ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಅವರು ತಡ ಮಾಡದೆ ಎಲ್ಲವನ್ನೂ ಬಿಚ್ಚಿಡಲಿ. ಬೇಡವೆಂದು ಯಾರು ಹೇಳಿದ್ದಾರೆ. ನಮಗೆ ಏನು ಬೇಕಾದರೂ ಮಾಡಲಿ, ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಹೇಳಿದರು.
ಸಾರ್ವಜನಿಕ ಸಭೆಯಲ್ಲಿ ಗಂಡಸ್ತನದ ಬಗ್ಗೆ ಸಚಿವ ಅಶ್ವತ್ಥ್‌ನಾರಾಯಣ್ ಮಾತನಾಡಿದ್ದಾರೆ. ರಾಮನಗರ ಮಹಾ ಜನತೆಗೆ ಸವಾಲು ಹಾಕಿ ಇಲ್ಲಿ ಯಾರಾದರೂ ಗಂಡಸರು ಇದ್ದೀರಾ ಎಂದು ಕೇಳಿದ್ದರು. ನಾವೆಲ್ಲ ಹೆಂಗಸರ ಕುಲಕ್ಕೆ ಸೇರಿದವರು. ನಮಗೆಲ್ಲ ಸೀರೆ ಕೊಡಿಸಿದರೆ, ಅದನ್ನೇ ತೊಟ್ಟುಕೊಂಡು ಇದ್ದು ಬಿಡುತ್ತೇವೆ. ಅವರು ಹೇಳಿಕೆ ನೀಡುವಾಗ ಇದ್ದವರು ಗಂಡಸರೋ ಅಲ್ಲವೋ ಎಂದು ಹೇಳಬೇಕು. ಅವರೇ ಬೇಕಾದರೆ ಟೆಸ್ವ್ ಮಾಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು ಡಿ.ಕೆ.ಶಿವಕುಮಾರ್.
ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿಹಾಕಲು ಸಾಧ್ಯ. ಪಿಎಸ್‌ಐ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ನಾಲ್ಕೈದು ಜನ ಆಯ್ಕೆಯಾಗಿದ್ದು, ಮೊದಲ ಸ್ಥಾನವನ್ನೂ ಪಡೆದಿದ್ದಾರೆ. ಅವರು ನಮಗೆ ಬೇಕಾದ ಹುಡುಗರೇ ಆಗಿದ್ದು, ಈ ಹಗರಣದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಅವರಿಗೆ ಈ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ, ಅವರ ಕುಟುಂಬದವರು ಮಾಡಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಇನ್ನು ಅವರದೇ ಶಾಸಕರು ಹೇಳಿರುವಂತೆ ಕೆಪಿಎಸ್‌ಸಿ ಸದಸ್ಯರಾಗಲೂ ಹಣ ನೀಡಿದ್ದಾರಂತೆ. ಈ ಬಗ್ಗೆ ಬೊಮ್ಮಾಯಿ ಅವರು ಇನ್ನೂ ಯಾಕೆ ಕೇಸು ದಾಖಲಿಸಿಲ್ಲ? ಎಂದು ಇದೇ ವೇಳೆ ಪ್ರಶ್ನಿಸಿದರು.
