Asianet Suvarna News Asianet Suvarna News

ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್‌

ರಾಜ್ಯದಲ್ಲಿ ಮಳೆ ಬಂದು ನೆರೆಯಿಂದಾಗಿ ಬಹಳಷ್ಟು ಹಾನಿಯಾಗಿದೆ. ಸರ್ಕಾರವನ್ನು ಟೀಕಿಸುವ ಸಮಾಜವಾದಿ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರ ಆತ್ಮಕ್ಕೆ ಅವರೇ ಪ್ರಶ್ನೆ ಹಾಕಿಕೊಳ್ಳಲಿ: ಪಾಟೀಲ್‌ 

Minister BC Patil React on Siddaramotsava grg
Author
Bengaluru, First Published Jul 21, 2022, 9:48 PM IST

ಹಿರೇಕೆರೂರು(ಜು.21):  ಯಾವುದೇ ಮನುಷ್ಯರು ಬದುಕಿದ್ದಾಗ ಅವರ ಉತ್ಸವಗಳನ್ನು ಮಾಡಿಕೊಳ್ಳುವುದಿಲ್ಲ. ಉತ್ಸವ ಅಂದರೆ ನಾವು ದೇವರ ಉತ್ಸವಗಳನ್ನು ಮಾಡುತ್ತೇವೆ. ಮನುಷ್ಯ ಬದುಕಿದ್ದ ಸಮಯದಲ್ಲಿ ದೇವರಾಗೋಕೆ ಆಗೋದಿಲ್ಲ. ಮನುಷ್ಯ ಬದುಕಿದ್ದಾಗ ಅವರ ಉತ್ಸವ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಶ್ನಿಸಿದರು. ಹಿರೇಕೆರೂರ ತಾಲೂಕು ಕೋಡ ಗ್ರಾಮದಲ್ಲಿ ಅವರು ದಾವಣಗೆರೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಿದ್ದರಾಮೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮಳೆ ಬಂದು ನೆರೆಯಿಂದಾಗಿ ಬಹಳಷ್ಟು ಹಾನಿಯಾಗಿದೆ. ಸರ್ಕಾರವನ್ನು ಟೀಕಿಸುವ ಸಮಾಜವಾದಿ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರ ಆತ್ಮಕ್ಕೆ ಅವರೇ ಪ್ರಶ್ನೆ ಹಾಕಿಕೊಳ್ಳಲಿ ಎಂದರು.

ಚುನಾವಣೆಗೆ ಇನ್ನೂ 10 ತಿಂಗಳು ಬಾಕಿಯಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೋಲಿಸಿದರು ಎನ್ನುವಂತೆ ಈಗಲೇ ಕಾಂಗ್ರೆಸ್‌ ಆಡಳಿತಕ್ಕೆ ಬಂದವರ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲು ಕಿತ್ತಾಡುತ್ತಿರುವುದು ಮೂರ್ಖತನದ ಪರಮಾವಧಿ. ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಜನರು ತೀರ್ಮಾನ ಮಾಡಬೇಕು. ಮುಂದಿನ ಬಾರಿಯೂ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. 150 ಸೀಟು ಪಡೆದು ನಾವೇ ಅಧಿಕಾರಕ್ಕೆ ಬರುತ್ತೇವೆ. ಈಗ ಗುದ್ದಾಡಿ ಅವರು ಸಿದ್ದರಾಮೋತ್ಸವನಾದರೂ ಮಾಡಿಕೊಳ್ಳಲಿ, ಶಿವಕುಮಾರೋತ್ಸವನಾದರೂ ಮಾಡಿಕೊಳ್ಳಲಿ, ಇಬ್ಬರ ನಡುವೆ ದೊಡ್ಡ ಕಂದಕ ಆಗುತ್ತಿದೆ. ಕಾಂಗ್ರೆಸ್‌ ಅವನತಿಗೆ ಇದು ಮುನ್ನುಡಿ ಎಂದರು.

Exclusive Interview: ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನ ಅಲ್ಲ, ಅನಗತ್ಯ ವಿವಾದ ಅಷ್ಟೇ: ಸಿದ್ದರಾಮಯ್ಯ

ರೈತರಿಗೆ ಶೀಘ್ರ ಪರಿಹಾರ:

ಮಳೆಯಿಂದ ಬೆಳೆಹಾನಿಯ ಸಮೀಕ್ಷೆ ನಡೆಯುತ್ತಿದೆ. ಮಳೆ ಇದ್ದುದರಿಂದ ಇನ್ನು ಕೆಲವು ಕಡೆಯಲ್ಲಿ ಸಮೀಕ್ಷೆಗೆ ಅಧಿಕಾರಿಗಳು ಹೋಗಲು ಆಗಿಲ್ಲ. ಹೀಗಾಗಿ ಪೂರ್ಣ ಹಾನಿಯ ವರದಿ ಇನ್ನು ಬಂದಿಲ್ಲ. ಆದಷ್ಟುಬೇಗ ವರದಿ ತರಿಸಿಕೊಂಡು ರೈತರಿಗೆ ಪರಿಹಾರ ನೀಡುತ್ತೇವೆ ಎಂದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಇದ್ದರು.

ಕೃಷಿಯನ್ನು ಕೆಳದರ್ಜೆಯ ಉದ್ಯೋಗವಾಗಿ ನೋಡುವುದು ಬೇಡ

ರಟ್ಟೀಹಳ್ಳಿ: ಕೃಷಿಯನ್ನು ಕೆಳದರ್ಜೆಯ ಉದ್ಯೋಗವಾಗಿ ನೋಡುವುದು ಬೇಡ. ರೈತ ಎಂದು ಹೇಳಿಕೊಳ್ಳಲು ಕೀಳರಿಮೆ ಬೇಡ. ದೇಶಕ್ಕೆ ಅನ್ನ ಕೊಡುವ ಶಕ್ತಿ ಇರುವುದು ರೈತನಿಗೆ ಮಾತ್ರ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಬುಧವಾರ ರಟ್ಟಿಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗುವ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೃಷಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ, ಅಮೃತ ಸ್ವಸಹಾಯ ಕಿರು ಉದ್ಯಮಿ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ರೂ. ಒಂದು ಲಕ್ಷ ಮೊತ್ತದ ಚೆಕ್‌ ವಿತರಿಸಿ ಮಾತನಾಡಿದರು.

ವೈದ್ಯ, ಕೈಗಾರಿಕೋದ್ಯಮಿ, ಇತರ ಉದ್ಯೋಗಿಗಳಿಗೆ ಅನ್ನ ಕೊಡುವವನು ರೈತ. ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯ ಜೊತೆಗೆ ಆಹಾರ ಸಂಸ್ಕರಣೆ, ಜೇನು ಸಾಕಾಣಿಕೆ, ಆಡು-ಕುರಿ ಸಾಕಾಣಿಕೆ, ಹೈನುಗಾರಿಕೆ ಅಳವಡಿಸಿಕೊಂಡರೆ ಕೃಷಿ ಲಾಭದಾಯಕ ಕ್ಷೇತ್ರವಾಗಲಿದೆ. ಆಹಾರ ಸಂಸ್ಕರಣ ಘಟಕ ಆರಂಭಿಸುವವರಿಗೆ .10 ಲಕ್ಷದ ವರೆಗೆ ನೆರವು ದೊರೆಯಲಿದೆ ಎಂದರು.

ರೈತರ ಉತ್ಪನ್ನಗಳನ್ನು ಬೆಲೆ ಬಂದಾಗ ಲಾಭದಾಯಕವಾಗಿ ಮಾರಿಕೊಳ್ಳಲು ಅನುಕೂಲವಾಗುವಂತೆ ರಾಜ್ಯದಲ್ಲಿ ಕೋಲ್ಡ್‌ಸ್ಟೋರೇಜ್‌ ಘಟಕ ಸ್ಥಾಪಿಸಿ ಬೆಲೆ ಕುಸಿತಗೊಂಡಾಗ ದಾಸ್ತಾನುಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಲಾ .10 ಕೋಟಿ ವೆಚ್ಚದಲ್ಲಿ ರಾಜ್ಯದ 13 ಕಡೆ ಕೋಲ್ಡ್‌ಸ್ಟೋರೇಜ್‌ ಆರಂಭಿಸಲಾಗುವುದು. ರೈತರಿಗೆ ಕೋಲ್ಡ್‌ಸ್ಟೋರೇಜ್‌ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಬುಧವಾರ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜನವರಿ ಅಥವಾ ಫೆಬ್ರುವರಿ ಮಾಹೆಯಲ್ಲಿ ಪೂರ್ಣಗೊಳಿಸಿ ರೈತರ ಬಳಕೆಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನ್ಯಾನೋ ಬಳಸಿ:

ಹೊಲಗಳಿಗೆ ಯೂರಿಯಾ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ. ಯೂರಿಯಾ ಗೊಬ್ಬರಕ್ಕಿಂತ ಭೂಮಿಗೆ ನ್ಯಾನೋ ಗೊಬ್ಬರ ಉತ್ತಮವಾಗಿದೆ. ಸಾವಯವ, ಹಸಿರೆಲೆ ಗೊಬ್ಬರ ಬಳಸಬೇಕು. ಬದುಗಳಲ್ಲಿ ಒಡ್ಡು ನಿರ್ಮಾಣ ಮಾಡಿ ಮಣ್ಣು ಸವಕಳಿಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚು ಗಿಡಗಳನ್ನು ಬೆಳೆಸಬೇಕು. ಒಂದು ಇಂಚು ಮಣ್ಣು ಉತ್ಪತ್ತಿಯಾಗಲು ಐದನೂರರಿಂದ ಆರನೂರು ವರ್ಷಗಳು ಬೇಕಾಗುತ್ತದೆ. ಹಾಗಾಗಿ ಕೃಷಿ ಭೂಮಿ ಫಲವತ್ತೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಆರ್ಥಿಕ ಶಕ್ತಿ:

ಮಹಿಳೆಯರಿಗೆ ಆರ್ಥಿಕ ಸುಭದ್ರತೆ ಒದಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಸ್ತ್ರೀಶಕ್ತಿ ಸಂಘಗಳು ಶಕ್ತಿಯುತವಾಗಬೇಕು ಹಾಗೂ ಸ್ವಾವಲಂಬಿಗಳಾಗಬೇಕು. ಈ ಹಿನ್ನೆಲೆಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ .1 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ 60 ಸಂಘಗಳಿಗೆ ನೆರವು ಒದಗಿಸಲಾಗುತ್ತದೆ ಎಂದರು.

ಸಿದ್ದರಾಮೋತ್ಸವ ಸಿದ್ದು ವ್ಯಕ್ತಿ ಪೂಜೆನಾ, ಡಿಕೆಶಿ ಮುಗಿಸೋದೇ ಉದ್ದೇಶವಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿ ಇಲ್ಲದ ಕೃಷಿ ಕಾರ್ಮಿಕರನ್ನು ಗುರುತಿಸಿ, ಅವರಿಗೂ ಸರ್ಕಾರದ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಹಾಗಾಗಿ ಎಲ್ಲ ಗ್ರಾಮಗಳಲ್ಲಿ ಕೃಷಿ ಕಾರ್ಮಿಕರ ಪಟ್ಟಿಮಾಡಿ ನೋಂದಾಯಿಸಿದರೆ ಅವರ ಮಕ್ಕಳ ವಿದ್ಯಾಭ್ಯಾಸ ಹಾಗೂ ವಿವಾಹಕ್ಕೆ ಸಹಾಯ ಮಾಡಲಾಗುವುದು. ಅದೇ ರೀತಿ ಈ ಭಾಗದಲ್ಲಿ ಒಂದು ಗಾರ್ಮೆಂಟ್ಸ್‌ ಆರಂಭಿಸುವ ಬಹುದಿನಗಳ ಬೇಡಿಕೆ ಇತ್ತು. ಆಗಸ್ಟ್‌ ತಿಂಗಳಲ್ಲಿ .12 ಲಕ್ಷ ವೆಚ್ಚದಲ್ಲಿ ಮಾಸೂರಿನಲ್ಲಿ ಗಾರ್ಮೆಂಟ್ಸ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಭಾಗದ ಮಹಿಳೆಯರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ರಾಜ್ಯ ಸರ್ಕಾರ ರೈತರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ ಅವರು ಸಚಿವರಾದ ಮೇಲೆ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌, ಜಿಪಂ ಸಿಇಒ ಮಹಮ್ಮದ ರೋಷನ್‌, ಕೃಷಿಜಂಟಿ ನಿರ್ದೇಶಕ ಮಂಜುನಾಥ, ಕೃಷಿ ಇಲಾಖೆ ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್‌, ಕೃಷಿ ವಿವಿಯ ಪ್ರಾಧ್ಯಾಪಕ ಡಾ. ಅಶೋಕ ಇತರರು ಇದ್ದರು.
 

Follow Us:
Download App:
  • android
  • ios