*   ಸಾಗರ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕಾರ*   ಕಾಂಗ್ರೆಸ್ಸಿಗರ ಇಂತಹ ಡ್ರಾಮಾ ಮಾಮೂಲಿಯದ್ದು*   ರಾಜ್ಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇದೆ 

ಸಾಗರ(ಜು.14): ನಾವು ಮಕ್ಕಳಿಗೆ ಶೂ, ಸಾಕ್ಸ್‌ ಕೊಡುತ್ತೇವೆ ಎಂದ ಮೇಲೆ ಕಾಂಗ್ರೆಸ್‌ನವರಿಗೆ ಭಿಕ್ಷೆ ಎತ್ತಿ ಶೂ, ಸಾಕ್ಸ್‌ ಕೊಡುವ ನೆನಪಾಗಿದೆ. ಕಾಂಗ್ರೆಸ್ಸಿಗರ ಇಂತಹ ಡ್ರಾಮಾ ಮಾಮೂಲಿಯದ್ದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು. ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೆ ಪ್ರವಾಹ ಸಂದರ್ಭದಲ್ಲಿ ಭಿಕ್ಷೆ ಎತ್ತಿ ಕೊಟ್ಟಿದ್ದ .1 ಕೋಟಿ ಮೊತ್ತದ ಚೆಕ್‌ ಬೌನ್ಸ್‌ ಮಾಡಿಕೊಂಡದ್ದನ್ನು ಬಹುಶಃ ಕಾಂಗ್ರೆಸ್‌ ಮರೆತಿದೆ. ಸರ್ಕಾರ ಮಕ್ಕಳಿಗೆ ಶೂ-ಸಾಕ್ಸ್‌ ಕೊಡಲು ಎಲ್ಲ ಸಿದ್ಧತೆ ಮಾಡಿಕೊಂಡಾಗ ಭಿಕ್ಷೆ ಎತ್ತುತ್ತೇವೆ ಎಂದು ಕಾಂಗ್ರೆಸ್‌ ನಾಟಕ ಮಾಡುತ್ತಿದೆ. ಶೂ -ಸಾಕ್ಸ್‌ ಕೊಡಲು ಸ್ಥಳೀಯವಾಗಿ ಶಾಲಾಭಿವೃದ್ಧಿ ಸಮಿತಿಗೆ ಸೂಚನೆ ನೀಡಲಾಗಿದೆ ಎಂದರು.

ಉಕ್ರೇನ್‌-ರಷ್ಯಾ ಯುದ್ಧ ಹಿನ್ನೆಲೆಯಲ್ಲಿ ಕಾಗದದ ಕೊರತೆಯಿಂದ ಪುಸ್ತಕ ಮುದ್ರಣ ವಿಳಂಬವಾಗಿತ್ತು. ಆದರೂ ಜುಲೈ 15ರೊಳಗೆ ಮಕ್ಕಳಿಗೆ ಪಠ್ಯಪುಸ್ತಕ ಪೂರೈಸಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಈ ಹಿಂದೆ ಆಗಸ್ಟ್‌, ಸೆಪ್ಟೆಂಬರ್‌ ಕಳೆದರೂ ಪುಸ್ತಕ ಕೊಡುತ್ತಿರಲಿಲ್ಲ. ರಾಜ್ಯದ ಶೇ.96ರಷ್ಟುಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ ಎಂದರು.

1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್‌

ರಾಜ್ಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇದೆ. ಆದರೆ, ಇತಿಹಾಸದಲ್ಲಿ 36 ಸಾವಿರ ಅತಿಥಿ ಶಿಕ್ಷಕರನ್ನು ಶಾಲೆ ಪ್ರಾರಂಭದಲ್ಲಿಯೇ ನೀಡಿ, ಶೈಕ್ಷಣಿಕ ವ್ಯವಸ್ಥೆ ಸುಗಮಗೊಳಿಸುವ ಪ್ರಯತ್ನ ನಮ್ಮ ಸರ್ಕಾರ ಮಾಡಿದೆ. ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಶಿಕ್ಷಣ ಇತರೇ ಇಲಾಖೆಯಂತೆ ಅಲ್ಲ. ಗುಣಮಟ್ಟದ ಶಿಕ್ಷಣ ನೀಡಲು ಗುಣಮಟ್ಟದ ಶಿಕ್ಷಕರ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು ಮುಂದಿನ ಒಂದೆರಡು ತಿಂಗಳಿನಲ್ಲಿ ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು.

ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್‌, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್‌, ಪ್ರಮುಖರಾದ ಈಳಿ ಶ್ರೀಧರ್‌, ಕೆ.ಎನ್‌. ಶ್ರೀಧರ್‌, ರಾಜೇಂದ್ರ ಪೈ, ಸುಪ್ರತೀಕ್‌ ಭಟ್‌, ನಾರಾಯಣಮೂರ್ತಿ, ಬಿಂಬ ಕೆ.ಆರ್‌. ಹಾಜರಿದ್ದರು.