ತಾಕತ್ತಿದ್ದರೆ ಬನ್ನಿ ನೋಡೋಣ, ನಾವೇನ್ ಬಳೆ ತೊಡ್ಕೊಂಡಿದ್ದೀವಾ: ಸಚಿವ ಶ್ರೀರಾಮುಲು
ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶದಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಅಬ್ಬರಿಸಿದ ಸಚಿವ ಬಿ. ಶ್ರೀರಾಮುಲು, ತಾಕತ್ತಿದ್ದರೆ ಬನ್ನಿ ನೋಡೋಣ. ನಾವೇನು ಬಳೆ ತೊಟ್ಕೊಂಡಿದ್ದೀವಾ? ಎನ್ನುತ್ತಲೇ ತಲೆಗೆ ಟವೆಲ್ ಸುತ್ತಿಕೊಂಡರು.
ಬಳ್ಳಾರಿ (ನ.21): ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶದಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಅಬ್ಬರಿಸಿದ ಸಚಿವ ಬಿ.ಶ್ರೀರಾಮುಲು, ತಾಕತ್ತಿದ್ದರೆ ಬನ್ನಿ ನೋಡೋಣ. ನಾವೇನು ಬಳೆ ತೊಟ್ಕೊಂಡಿದ್ದೀವಾ? ಎನ್ನುತ್ತಲೇ ತಲೆಗೆ ಟವೆಲ್ ಸುತ್ತಿಕೊಂಡರು. ಶ್ರೀರಾಮುಲು ಭಾಷಣದ ಬಾಣ ಬಿರುಸಾಗುತ್ತಿದ್ದಂತೆಯೇ ಸಮಾವೇಶದಲ್ಲಿ ಜಮಾಯಿಸಿದ್ದ ಜನರು ಹರ್ಷೋದ್ಗಾರದ ಮೂಲಕ ಬೆಂಬಲಿಸಿದರು.
ಜನರ ಕೇಕೆ, ಚಪ್ಪಾಳೆಯ ಸದ್ದು ಹೆಚ್ಚಾಗುತ್ತಿದ್ದಂತೆಯೇ ಮತ್ತಷ್ಟುಏರುದಾಟಿಯಲ್ಲಿ ಮಾತು ಮುಂದುವರಿಸಿದ ಶ್ರೀರಾಮುಲು, ಬಳ್ಳಾರಿ ಪರಿಶಿಷ್ಟಪಂಗಡಗಳ ಸಮಾವೇಶದ ಮೂಲಕವೇ ಕಾಂಗ್ರೆಸ್‌ನ ಪತನ ಶುರುವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳದ ಮೂಲಕ ಸುದರ್ಶನ ಚಕ್ರ ಬಿಟ್ಟಿದ್ದಾರೆ. ಆ ಸುದರ್ಶನ ಚಕ್ರ ಕಾಂಗ್ರೆಸ್‌ನ ಶಿರಚ್ಛೇದ ಮಾಡಲಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ದಲಿತರಿಗೆ ಈ ವರೆಗೆ ಮೋಸ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ನ್ನು ಸೋಲಿಸಿ ಎಂದು ನೆರೆದಿದ್ದ ಜನತೆಗೆ ಕರೆ ನೀಡಿದರು.
ಎಸ್‌ಟಿ ಸಮಾವೇಶ ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡಲಿದೆ: ಶ್ರೀರಾಮುಲು
ಇದೇ ವೇಳೆ ಮೀಸಲಾತಿ ಹೆಚ್ಚಳದ ಮಹತ್ವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದರಲ್ಲದೆ, ಕಾಂಗ್ರೆಸ್‌ನವರು ಬಡಿವಾರದ ಮಾತುಗಳನ್ನು ಬಿಟ್ಟು ಬಿಡಬೇಕು. ಬರೀ ಬಡಿವಾರ ಕೊಚ್ಚಿಕೊಂಡರೆ ಏನೂ ಆಗುವುದಿಲ್ಲ. ನಮ್ಮ ಮುಖ್ಯಮಂತ್ರಿಗಳು ಶೋಷಿತರಿಗೆ ಸಾಮಾಜಿಕ ನ್ಯಾಯ ನೀಡಿ ಜೋಡು ಗುಂಡಿಗೆಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಬೊಮ್ಮಾಯಿ ಅವರು ದಕ್ಷಿಣ ಭಾರತದ ವಾಜಪೇಯಿ ಇದ್ದಂತೆ. ಜನಪರವಾಗಿ ನಿಲ್ಲುವ ತಾಕತ್ತು ಎಲ್ಲರಿಗೂ ಬರುವುದಿಲ್ಲ. ನಮ್ಮ ಸಿಎಂ ಆ ಕೆಲಸ ಮಾಡಿದ್ದಾರೆ ಎಂದು ಕೊಂಡಾಡಿದರು.
ಕ್ಷೇತ್ರ ಸಿಗದೆ ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ: ಶ್ರೀರಾಮುಲು
ಇಷ್ಟುವರ್ಷ ದಲಿತರ ಮತಗಳನ್ನು ಪಡೆದು ನೀವು ಏನು ಮಾಡಿದ್ದೀರಿ? ಎಂದು ಕಾಂಗ್ರೆಸಿಗರನ್ನು ಪ್ರಶ್ನಿಸಿದರಲ್ಲದೆ, ತಾಕತ್ತಿದ್ದರೆ ಬರ್ರಪ್ಪಾ, ಮೀಸಲಾತಿ ಕೊಟ್ಟಿದ್ದು ನಾವು. ನೀವು ಬಳ್ಳಾರಿಗೆ ಬಂದು ಮಾತನಾಡುತ್ತೀರಾ? ತಾಕತ್ತಿದ್ದರೆ ಬನ್ನಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು. ಮೀಸಲಾತಿ ಹೆಚ್ಚಿಸುವ ಮೂಲಕ ನಾನು ನನ್ನ ಸಮಾಜದ ಋುಣ ತೀರಿಸುವ ಪ್ರಯತ್ನ ಮಾಡಿದ್ದೇನೆ. ನಾನು ಬೇಡರ ಜನಾಂಗದಲ್ಲಿ ಹುಟ್ಟಿರಬಹುದು. ಆದರೆ, ನಾನು ಎಲ್ಲ ಸಮುದಾಯಗಳ ಪ್ರೀತಿ ಗಳಿಸಿದ್ದೇನೆ. ಇಡೀ ರಾಜ್ಯದ ಜನ ನನಗೆ ಅನ್ನ, ನೀರು ಕೊಟ್ಟು ಸಲುಹಿದ್ದಾರೆ ಎಂದು ಶ್ರೀರಾಮುಲು ಹೇಳಿದರು.