ಕಾಂಗ್ರೆಸ್‌ನಲ್ಲಿ ಇಬ್ಬರು ರಾಕಿಗಳಿಂದ ಸಿಎಂ ಕುರ್ಚಿಗೆ ಕಿತ್ತಾಟ: ಶ್ರೀರಾಮುಲು
ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದು, ಕೆಜಿಎಫ್ ಸಿನಿಮಾದಂತೆ ಕಾಂಗ್ರೆಸ್ಸಿನ ಇಬ್ಬರು ರಾಕಿಗಳು ಸಿಎಂ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ಗದಗ (ಜು.06): ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದು, ಕೆಜಿಎಫ್ ಸಿನಿಮಾದಂತೆ ಕಾಂಗ್ರೆಸ್ಸಿನ ಇಬ್ಬರು ರಾಕಿಗಳು ಸಿಎಂ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆಂತರಿಕ ಗುದ್ದಾಟ ನಡೆಸಿದ್ದು, ಒಬ್ಬರು ಸಾಮೂಹಿಕ ನಾಯಕತ್ವ ಅಂದರೆ ಮತ್ತೊಬ್ಬರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಬಿಜೆಪಿ ಇರುವ ವರೆಗೂ ಮುಖ್ಯಮಂತ್ರಿ ಕುರ್ಚಿ ಖಾಲಿ ಇರುವುದಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದು, 150ಕ್ಕೂ ಹೆಚ್ಚು ಟಾರ್ಗೆಟ್‌ನೊಂದಿಗೆ 2023ರಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಎಸಿಬಿ ದಾಳಿ ಹೊಸ ವಿಚಾರ ಅಲ್ಲ. ಕಾಂಗ್ರೆಸ್ ನಾಯಕರ ಮೇಲೆ ಎಸಿಬಿ ದಾಳಿಯಾದಾಗ ಬಿಜೆಪಿ ಹೆಸರು ಹೇಳಿ ರಂಪಾಟ ಮಾಡುತ್ತಾರೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದಾಗಲೂ ಕಾಂಗ್ರೆಸ್‌ನವರು ರಾದ್ಧಾಂತ ಮಾಡಿದರು.
ತುರ್ತು ಪರಿಸ್ಥಿತಿ ಹೇರಿಕೆಯಿಂದಾಗೇ ಕಾಂಗ್ರೆಸ್‌ಗೆ ಆಘಾತ: ಶ್ರೀರಾಮುಲು
ಕಾಂಗ್ರೆಸ್ ನಾಯಕರ ಮೇಲೆ ಎಸಿಬಿ ದಾಳಿಯಾದಾಗಲೆಲ್ಲ ಬಿಜೆಪಿ ಮೇಲೆ ಆರೋಪ ಮಾಡುವುದೇ ಪ್ರಕ್ರಿಯೆಯಾಗಿದೆ ಎಂದರು. ರಾಜ್ಯದಲ್ಲಿ ನಡೆದ ಪಿಎಸ್‌ಐ ಅಕ್ರಮ ಬಯಲಿಗೆಳೆದದ್ದೇ ನಮ್ಮ ಸರ್ಕಾರ. ಸಂಬಂಧಪಟ್ಟತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದ್ದೂ ನಾವೇ. ಎಡಿಜಿಪಿ ಪೌಲ್ ಅವರ ಮೇಲೂ ಅನುಮಾನ ಇದ್ದ ಕಾರಣ ಬಂಧನ ಮಾಡಲಾಗಿದೆ. ಯಾರೇ ಎಷ್ಟೆಪ್ರಭಾವಿಯಾಗಿದ್ದರೂ ಅವರನ್ನು ಮಟ್ಟಹಾಕುತ್ತೇವೆ ಎಂದರು.
ಮೌಲಾನಾ ಅಬ್ದುಲ್ ಕಲಾಂ ಶಾಲೆಗೆ ಭೇಟಿ: ಬಳ್ಳಾರಿಯ ಕೋಟೆ ರಸ್ತೆಯ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಪ್ರೌಢಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಶಾಲೆ ತುಂಬಾ ಹಳೆಯದಾಗಿದ್ದು, ಬೀಳುವ ಹಂತದಲ್ಲಿದೆ. ಶಾಲೆಯಲ್ಲಿ ಸೌಕರ್ಯಗಳಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಾಲೆಗೆ ಬುಧವಾರ ಭೇಟಿ ನೀಡಿ ಶಾಲೆಯ ಆವರಣ ಮತ್ತು ಶಾಲೆಯ ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಈ ಶಾಲೆ ಸಂಪೂರ್ಣ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕುಬಿಟ್ಟಿದೆ ಮತ್ತು ಕಟ್ಟಡ ಚಾವಣಿ ಕುಸಿಯುವ ಹಂತದಲ್ಲಿದೆ. ವಿದ್ಯಾರ್ಥಿಗಳಿಗೆ ಗಾಳಿ ಮತ್ತು ಬೆಳಕು ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳನ್ನು ಇದೇ ಸಂದರ್ಭದಲ್ಲಿ ಸಚಿವರು ಆಲಿಸಿದರು.
ಗಾಳಿ-ಬೆಳಕು ಸರಿಯಾಗಿಲ್ಲ, ರಾತ್ರಿಯಾದೆರೆ ಆವರಣದಲ್ಲಿ ಮದ್ಯದ ಬಾಟಲ್‌ಗಳ ಗ್ಲಾಸ್‌ಗಳು ಬೀಳುತ್ತವೆ. ಕಿಡಿಗೇಡಿಗಳು ಕಿಟಕಿ ಗ್ಲಾಸ್‌ಗಳನ್ನು ಸಂಪೂರ್ಣ ಒಡೆದಿದ್ದಾರೆ. ಶೌಚಾಲಯ ಸೌಲಭ್ಯವಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಸಚಿವರಿಗೆ ತಿಳಿಸಿದರು. ಅಹವಾಲುಗಳನ್ನು ಸಂಯಮದಿಂದ ಆಲಿಸಿದ ಸಚಿವರು ವಿದ್ಯಾರ್ಥಿಗಳ ಭವಿಷ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಶಾಲೆಯನ್ನು ತಾತ್ಕಾಲಿಕವಾಗಿ ಶಾಲೆಯ ಹಿಂಭಾಗದ ಪ್ರಾಥಮಿಕ ಶಾಲಾ ಆವರಣಕ್ಕೆ ಸ್ಥಳಾಂತರಿಸಿ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಿದರು.
ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರ: ಸಚಿವ ಶ್ರೀರಾಮುಲು
ಈ ಶಾಲಾ ಕಟ್ಟಡ ಬಳಸಲು ಯೋಗ್ಯವಿದ್ದಲ್ಲಿ ದುರಸ್ತಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅದರ ವರದಿಯನ್ನು ತಕ್ಷಣ ಸಲ್ಲಿಸಬೇಕು. ಬಳಸಲು ಯೋಗ್ಯವಾಗಿಲ್ಲದಿದ್ದಲ್ಲಿ ನೆಲಸಮ ಮಾಡುವುದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಕೋಟೆಯಿಂದ 300 ಮೀಟರ್ ವ್ಯಾಪ್ತಿಯೊಳಗಿದೆ ಎಂದಲ್ಲಿ ಕೇಂದ್ರ ಪುರಾತತ್ವ ಇಲಾಖೆಯೊಡನೆ ಚರ್ಚಿಸಿ ನೆಲಸಮ ಮಾಡಿ ಹೊಸದಾಗಿ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಬೇಕು. ಈ ಕುರಿತು ತಾಂತ್ರಿಕ ವರದಿಯನ್ನು ಕೂಡಲೇ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.