ಕಾಪಿ ಹೊಡೀತಿದ್ದೆ, ಗೂಂಡಾಗಿರಿ ಮಾಡಿ ಜೈಲಿಗೋಗಿದ್ದೆ: ಸಚಿವ ಶ್ರೀರಾಮುಲು
ವಿದ್ಯಾರ್ಥಿಯಾಗಿದ್ದಾಗ ಗುಂಡಾಗಿರಿ ಮಾಡುತ್ತಿದ್ದೆ, ಧ್ವನಿ ಇಲ್ಲದವರ ಪರ ಜಗಳವಾಡಿ ಹದಿನಾರು ಬಾರಿ ಜೈಲಿಗೂ ಹೋಗಿದ್ದೆ, ಲಾಸ್ಟ್ ಬೆಂಚ್ ವಿದ್ಯಾರ್ಥಿಯಾಗಿದ್ದ ನನಗೆ ಯಾವ ಭಾಷೆಯೂ ಸರಿಯಾಗಿ ಬರುತ್ತಿರಲಿಲ್ಲ.
ಬಳ್ಳಾರಿ (ಡಿ.11): ವಿದ್ಯಾರ್ಥಿಯಾಗಿದ್ದಾಗ ಗುಂಡಾಗಿರಿ ಮಾಡುತ್ತಿದ್ದೆ, ಧ್ವನಿ ಇಲ್ಲದವರ ಪರ ಜಗಳವಾಡಿ ಹದಿನಾರು ಬಾರಿ ಜೈಲಿಗೂ ಹೋಗಿದ್ದೆ, ಲಾಸ್ಟ್ ಬೆಂಚ್ ವಿದ್ಯಾರ್ಥಿಯಾಗಿದ್ದ ನನಗೆ ಯಾವ ಭಾಷೆಯೂ ಸರಿಯಾಗಿ ಬರುತ್ತಿರಲಿಲ್ಲ. ಇದಕ್ಕಾಗಿ ಅಧ್ಯಾಪಕರಿಂದ ಬೈಸಿಕೊಳ್ಳುತ್ತಿದ್ದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡಿದ್ದಾರೆ.
ನಗರದ ಶೆಟ್ರ ಗುರುಶಾಂತಪ್ಪ ಕಾಲೇಜಿನ ಅಮೃತ ಮಹೋತ್ಸವದಲ್ಲಿ ಶನಿವಾರ ಮಾತನಾಡಿದ ಅವರು, ನಾನು ಬಹಳ ದಡ್ಡನಿದ್ದೆ. ಓದು ತಲೆಗೆ ಹತ್ತುತ್ತಿರಲಿಲ್ಲ. ಜೈಲಿಗೆ ಹೋದಾಗ ನನ್ನ ತಂದೆಯವರು ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ತಿಪ್ಪಣ್ಣ ಬಳಿ ಹೋಗಿ ಬೇಲ್ ಮೇಲೆ ಬಿಡಿಸಿಕೊಂಡು ಬರುತ್ತಿದ್ದರು. ಕಾಪಿ ಹೊಡೆದು ಪಾಸಾಗುತ್ತಿದ್ದೆ. ಆದರೆ, ಕ್ರೀಡಾ ಚಟುವಟಿಕೆಯಲ್ಲಿ ಸದಾ ಮುಂದಿರುತ್ತಿದ್ದೆ. ಈಗಲೂ ಜೀನ್ಸ್ ಪ್ಯಾಂಟ್, ಟೀಶರ್ಚ್ ಹಾಕಿಕೊಂಡು ಹೋದರೆ ಹುಡುಗಿಯರು ನೋಡುತ್ತಾರೆ ಎಂದರು.
ರೆಡ್ಡಿ ಸ್ನೇಹ, ಪಕ್ಷ ಸರಿದೂಗಿಸಿಕೊಂಡು ಹೋಗುತ್ತೇನೆ: ಸಚಿವ ಶ್ರೀರಾಮುಲು
ಕಾಂಗ್ರೆಸ್ ದೊಡ್ಡ ದೊಡ್ಡ ನಾಯಕರು ಬಿಜೆಪಿ ಬಾವುಟ ಹಿಡಿಯಲಿದ್ದಾರೆ: ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರು ಮುಂದೆ ಬಿಜೆಪಿ ಬಾವುಟ ಹಿಡಿಯಲಿದ್ದಾರೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅನೇಕ ಮುತ್ಸದ್ಧಿ ನಾಯಕರು ಸಹ ಬಿಜೆಪಿಗೆ ಬರಲಿದ್ದಾರೆ. ಯಾರೆಂದು ಈಗಲೇ ಹೇಳುವುದಿಲ್ಲ. ಆದರೆ, ಕೈ ನಾಯಕರು ನಮ್ಮ ಪಕ್ಷದ ಬಾವುಟ ಹಿಡಿಯುವುದಂತೂ ಸತ್ಯ. ನೀವೇ ಕಾದು ನೋಡಿ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾವೇಶ ಕುತಂತ್ರ ರಾಜಕೀಯದ ಸಮಾವೇಶ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ, ಪರಮೇಶ್ವರ, ಖರ್ಗೆ ಅವರ ಪ್ರತ್ಯೇಕ ಗುಂಪುಗಳಿವೆ. ಅವರವರ ನಡುವೆಯೇ ಸ್ಪರ್ಧೆ ನಡೆದಿದೆ. ಅಧಿಕಾರಕ್ಕಾಗಿ ಅವರಲ್ಲಿಯೇ ಕುತಂತ್ರ ರಾಜಕಾರಣ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಗುಜರಾತ್‌ನಂತೆಯೇ ಕರ್ನಾಟಕದ ಫಲಿತಾಂಶವೂ ಬರಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಗುಜರಾತ್ ಮಾದರಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿಗೊಳಿಸುತ್ತೇವೆ. ಗುಜರಾತ್ ಮಾದರಿ ಎಂದರೆ ಹಿರಿಯರನ್ನು ಪಕ್ಷದಿಂದ ತೆಗೆಯುವುದಿಲ್ಲ. ಹಿರಿಯರನ್ನು ಕೈ ಬಿಡುವ ಕುರಿತು ಪಕ್ಷವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
‘ಮೊಳಕಾಲ್ಮೂರಲ್ಲಿ ಶ್ರೀರಾಮಲು ಎದುರು ನಾನೇ ನಿಲ್ತೇನೆ’: ವಿ.ಎಸ್.ಉಗ್ರಪ್ಪ
ಇದೇ ವೇಳೆ ನಗರಸಭೆ ಮಾಜಿ ಅಧ್ಯಕ್ಷೆ ಪದ್ಮಾವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮಾವತಿ ಅವರ ಸಂಬಂಧಿಕರು ಮುಖ್ಯಮಂತ್ರಿಗಳು ಹಾಗೂ ಅಮಿತ್ ಶಾ ಅವರಿಗೆ ಪತ್ರ ಬರೆದು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಯಾರೇ ಏನೇ ಆರೋಪ ಮಾಡಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ ಎಂದರು. ರಾಜಕೀಯದಲ್ಲಿ ಆರೋಪಗಳು ಸಹಜ. ಚುನಾವಣೆ ವರ್ಷವಾಗಿರುವುದರಿಂದ ಅನೇಕ ಆರೋಪಗಳು ಕೇಳಿ ಬರುತ್ತವೆ. ನಾವು ಎಷ್ಟೆಷ್ಟುಜನಪ್ರಿಯವಾಗುತ್ತೀವೋ ಅಷ್ಟೇ ಸಮಸ್ಯೆಗಳು ಎದುರಾಗುತ್ತವೆ. ಜನಪ್ರಿಯತೆ ಇಲ್ಲದಿದ್ದರೆ ಸಮಸ್ಯೆಗಳು ಸಹ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.