Karnataka Politics: ಸುಮಲತಾರಿಗೆ ನ್ಯಾಚುರಲ್ ಚಾಯ್ಸ್ ಬಿಜೆಪಿ: ಸಚಿವ ಅಶ್ವತ್ಥ್ ನಾರಾಯಣ್
• ಸುಮಲತಾ ಭಾರತೀಯ ಜನತಾ ಪಕ್ಷ ಸೇರೋದೇ ಸೂಕ್ತ ಎಂದ ಸಚಿವ
• ಭ್ರಷ್ಟಾಚಾರ ಅನ್ನೋದು ಕಾಂಗ್ರೆಸ್ ಕಣಕಣದಲ್ಲಿದೆ ಎಂದು ಕಿಡಿ
• ಮೈಸೂರು ಭಾಗದಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡೂ ಅಪ್ರಸ್ತುತವಂತೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.01): ಮಂಡ್ಯ ಸಂಸದೆ (Mandya MP) ಸುಮಲತಾ (Sumalatha Ambareesh) ಬಿಜೆಪಿಗೆ (BJP) ಬರಲಿ ಎಂದು ಆಶಿಸುತ್ತೇವೆ ಅಂತಾ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ (Dr CN Ashwath Narayan) ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, 'ಸುಮಲತಾ ಅವರು ಸೂಕ್ತ ಕಾಲದಲ್ಲಿ ಏನು ನಿಶ್ಚಯ ಮಾಡ್ತಾರೆ ನೋಡೊಣ. ನಮ್ಮ ಪಕ್ಷಕ್ಕೂ ಅವರಿಗೂ ಒಳ್ಳೆಯ ಸಂಬಂಧ ಇದೆ. ಇಂದು ಎಲ್ಲರಿಗೂ ಸಲ್ಲುವ, ಭರವಸೆ ಇರುವ, ಭವಿಷ್ಯದ ಪಕ್ಷ ಅಂದ್ರೆ ಬಿಜೆಪಿ. ಸುಮಲತಾ ಅವರು ಭಾರತೀಯ ಜನತಾ ಪಕ್ಷವನ್ನೇ ಸೇರುವುದು ಸೂಕ್ತ.
ಸುಮಲತಾ ಬಿಜೆಪಿ ಸೇರಲಿ ಅನ್ನೊದು ಬಯಸುತ್ತೇವೆ. ಅವರಿಗೆ ನ್ಯಾಚುರಲ್ ಚಾಯ್ಸ್ ಇರುವಂತದ್ದು ಬಿಜೆಪಿ. ಇನ್ನೇನು ಕಾಂಗ್ರೆಸ್‌ಗೆ (Congress) ಹೋಗ್ತಾರಾ, ಜೆಡಿಎಸ್‌ಗೆ (JDS) ಹೋಗ್ತಾರಾ?' ಎಂದರು. ಇನ್ನು ಮೈಸೂರು ಭಾಗದಲ್ಲಿ ಬಿಜೆಪಿಗೆ ಟಾರ್ಗೆಟ್ ಯಾರು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವತ್ಥ್ ನಾರಾಯಣ್, 'ಮೈಸೂರು ಭಾಗದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷ ಎರಡೂ ಇದೆ ಎರಡೂ ಟಾರ್ಗೆಟ್ ಇದೆ. ಎರಡೂ ಅಪ್ರಸ್ತುತವಾಗಿದೆ, ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಲಿಷ್ಠಗೊಳಿಸಲು ಪ್ರಯತ್ನ ಮಾಡ್ತೀವಿ' ಎಂದರು.
Mandya Politics: ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಸುಳಿವು ನೀಡಿದ್ರಾ ಸುಮಲತಾ?
'ಸಂಪುಟ ವಿಸ್ತರಣೆ ವಿಚಾರ ಸಿಎಂ ನೋಡಿಕೊಳ್ಳುತ್ತಾರೆ': ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ್ ನಾರಾಯಣ್, 'ಸಂಪುಟ ವಿಸ್ತರಣೆ ವಿಚಾರ ಸಿಎಂ ನೋಡಿಕೊಳ್ಳುತ್ತಾರೆ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡುತ್ತಾರೆ' ಎಂದರು.
'ಬಿಜೆಪಿ ಜನಪರ ಪಕ್ಷ, ಕಾಂಗ್ರೆಸ್, ಜೆಡಿಎಸ್ ಕುಟುಂಬ ಆಧಾರಿತ ಪಕ್ಷಗಳು': ಮೈಸೂರು ಭಾಗದಲ್ಲಿ ಬಿಜೆಪಿ ಗಟ್ಟಿಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, 'ಒಟ್ಟಾರೆ ಬಿಜೆಪಿ ಜನರಪರ ಪಕ್ಷ, ಕಾಂಗ್ರೆಸ್ ಜೆಡಿಎಸ್ ಕುಟುಂಬ ಆಧಾರಿತ ಪಕ್ಷಗಳು. ಕಾಂಗ್ರೆಸ್, ಜೆಡಿಎಸ್ ಜನರ ಪಕ್ಷ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಏನೂ ಭರವಸೆ ಇಲ್ಲದಂತಾಗಿದೆ. ಭವಿಷ್ಯ ಇಲ್ಲದ ಪಕ್ಷದಲ್ಲಿ ಯಾರೂ ಉಳಿದುಕೊಳ್ಳಲ್ಲ ಎಂದರು. ಬಿಜೆಪಿ ಭ್ರಷ್ಟಾಚಾರ ಪಕ್ಷ ಎಂದಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ ಹೇಳಿಕೆಗೆ ಪ್ರತಿಕ್ರಿಯಿಸಿ, 'ಕಾಂಗ್ರೆಸ್ ಅಂದ್ರನೇ ಭ್ರಷ್ಟಾಚಾರ ಪಕ್ಷ. ಸ್ವಜನಪಕ್ಷಪಾತ, ಭ್ರಷ್ಟಾಚಾರ ಅನ್ನೊದು ಅವರ ಕಣಕಣದಲ್ಲಿದೆ. ಭ್ರಷ್ಟಾಚಾರ ತಡೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಈ ಮೊದಲು ಒಬ್ಬೊಬ್ಬರು ಹತ್ತತ್ತು ಪ್ಯಾನ್‌ಕಾರ್ಡ್ ನಂಬರ್ ಪಡೆಯುತ್ತಿದ್ದರು. ಇವತ್ತು ಒಬ್ಬರಿಗೆ ಒಂದೇ ಪ್ಯಾನ್ ನಂಬರ್ ಇದೆ. ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಬಿಜೆಪಿ ಸರ್ವಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮಾಡುವ ಕೆಲಸ ನಾವು ಮಾಡ್ತೀವಿ' ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯ ಸಮ್ಮೇಳನ ವಿಚಾರವಾಗಿ ಪ್ರತಿಕ್ರಿಯಿಸಿ, 'ವಿವಿಧ ರಾಜ್ಯಗಳಲ್ಲಿ ಯಾವ ರೀತಿ ಪ್ರಯತ್ನ ಆಗುತ್ತಿದೆ. ಮೂಲ ಯಾವ ರೀತಿ ಶಿಕ್ಷಣ ಕೊಡಬೇಕು, ವ್ಯಕ್ತಿಯ ವಿಕಾಸ ಆಗಬೇಕು. ಗುಣಮಟ್ಟದ ಶಿಕ್ಷಣ, ಕೌಶಲ್ಯತೆ ಪಡೆಯುವ ಮೂಲಕ ಗುಣಮಟ್ಟದ ವ್ಯವಸ್ಥೆ ನೀಡಿದರೆ ಇಡೀ ವಿಶ್ವದ ಜೊತೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತದೆ. ಹೆಜ್ಜೆಗಳು ಮುಂದೇ ಹೋಗುತ್ತಿರಬೇಕು, ಇನ್ನು ಉತ್ತಮಗೊಳ್ಳುತ್ತಿರಬೇಕು.
Mandya Politics: ಬೇರೆ ಪಕ್ಷ ಸೇರ್ಪಡೆ ಬಗ್ಗೆ ಮಂಡ್ಯ ಜನರೇ ಹೇಳಬೇಕು: ಸುಮಲತಾ
ಕರ್ನಾಟಕ ರಾಜ್ಯ ಬಹಳ ಉತ್ತಮವಾಗಿ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿದೆ. ಕೋವಿಡ್ ಹಿನ್ನೆಲೆ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ತಡವಾಗಿ ಈ ವರ್ಷದಿಂದ ಅನುಷ್ಠಾನ ಮಾಡುತ್ತಿದ್ದು ನಾಡಿನ ಯುವಕರಿಗೆ ಉತ್ತಮ ಶಿಕ್ಷಣ ನೀಡಲು ಪೂರಕ ವಾತಾವರಣ ಇದೆ ಎಂದರು. ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ RSS ನೀತಿ ಹೇರಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, 'ಏನೇ ಒಳ್ಳೆಯದು ಆಗಬೇಕಾದರೆ ಆರ್‌ಎಸ್ಎಸ್‌ನಿಂದ ಆಗಬೇಕು ಅಂತಾ ಕಾಂಗ್ರೆಸ್ ಹೇಳುತ್ತೆ, ಅದನ್ನು ಒಪ್ಪಿಕೊಳ್ಳೋಣ, ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಸಮಾಜ ಎಲ್ಲ ಧರ್ಮದವರು ಒಪ್ಪಿರುವಂತದ್ದು. ಕಲಿಕೆಯ ಗುಣಮಟ್ಟ ಒಳ್ಳೆಯದಿರಬೇಕು.ಈಗಿರುವ ವ್ಯವಸ್ಥೆಯಲ್ಲಿ ಶಾಲೆಯಲ್ಲಿ ಕಲಿಕೆಯ ಗುಣಮಟ್ಟ ಕಡಿಮೆ ಇದೆ. ಶಿಕ್ಷಣ ಕಲಿಕೆಯ ಗುಣಮಟ್ಟ ತರಲು ಪ್ರಯತ್ನ ಮಾಡುತ್ತಿದ್ದೇವೆ' ಎಂದು ತಿಳಿಸಿದರು.