Mandya Politics: ಬೇರೆ ಪಕ್ಷ ಸೇರ್ಪಡೆ ಬಗ್ಗೆ ಮಂಡ್ಯ ಜನರೇ ಹೇಳಬೇಕು: ಸುಮಲತಾ
* ನಾನಾಗೇ ನಿರ್ಧರಿಸಲಾಗದು
* ಸದ್ಯಕ್ಕೆ ಬೇರೆ ಪಕ್ಷ ಸೇರಲು ತಾಂತ್ರಿಕ ಸಮಸ್ಯೆ
* ತಂಗಿಯ ಮಗಳ ಮದುವೆಗೆ ಸಿಎಂ ಬೊಮ್ಮಾಯಿಗೆ ಆಹ್ವಾನ ನೀಡಿದ ಸಂಸದೆ ಸುಮಲತಾ ಅಂಬರೀಷ್
ಬೆಂಗಳೂರು(ಏ.12): ನಾನು ಈಗ ಬಿಜೆಪಿ(BJP) ಸೇರಿದಂತೆ ಯಾವುದೇ ಪಕ್ಷಕ್ಕೆ ಸೇರಬೇಕು ಎಂದರೆ ಮಂಡ್ಯದ ಜನ ಹೇಳಬೇಕು. ನಾನಾಗಿಯೇ ಸ್ವಂತ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್(Sumalatha Ambareesh) ಹೇಳಿದ್ದಾರೆ.
ಸೋಮವಾರ ಆರ್.ಟಿ.ನಗರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ನಿವಾಸಕ್ಕೆ ಭೇಟಿ ನೀಡಿ ತಂಗಿಯ ಮಗಳ ಮದುವೆಗೆ ಸಿಎಂಗೆ ಆಹ್ವಾನ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನರ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ(Lokasabha Election) ಸ್ಪರ್ಧಿಸಿ ಗೆದ್ದಿದ್ದೇನೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶ. ಈಗ ಯಾವುದೇ ಪಕ್ಷ ಸೇರಲು ತಾಂತ್ರಿಕ ಸಮಸ್ಯೆಯಿದೆ. ನಾನು ಚುನಾವಣೆಗೆ ನಿಂತಾಗಿನಿಂದ ಬಿಜೆಪಿ ಸೇರ್ಪಡೆ ಬಗ್ಗೆ ಮಾತು ಕೇಳಿ ಬರುತ್ತಿದೆ. ಜಿಲ್ಲೆಯ ಜನ ಹೇಳಿದ ಹಾಗೆ ಕೇಳುತ್ತೇನೆ ಎಂದರು.
Mandya Rain Effect: ಶೀಘ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಭರವಸೆ ನೀಡಿದ ಸಂಸದೆ ಸುಮಲತಾ
ನನ್ನ ಜಿಲ್ಲೆಗೆ ಏನೇನು ಅಭಿವೃದ್ಧಿ ತರಬಹುದು ಎಂಬುದಷ್ಟೇ ನನ್ನ ಯೋಚನೆ. ಅದೇ ರೀತಿ ಜಿಲ್ಲೆಯ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಇದರ ಹೊರತಾಗಿ ಬೇರೆ ರಾಜಕೀಯ ವಿಷಯದ ಚರ್ಚೆ ಮಾಡಿಲ್ಲ. ಯಾವುದೇ ಪಕ್ಷ ಸೇರುವುದಕ್ಕೆ ಮಂಡ್ಯದ ಜನರು ಹೇಳಬೇಕೆ ಹೊರತು ನಾನಾಗಿಯೇ ಯಾವ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ ಎಂದರು.
ಪುತ್ರ ಅಭಿಷೇಕ ಅಂಬರೀಷ್ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಭಿಷೇಕ್ ಚುನಾವಣೆಗೆ ಸ್ಪರ್ಧಿಸುವಂತೆ ಜನರ ಒತ್ತಡ ಇದೆ. ಅವನು ಹೋದ ಕಡೆಗಳಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಅದು ಅಭಿಷೇಕ್‌ಗೆ ಬಿಟ್ಟವಿಚಾರ ಎಂದು ಸಂಸದೆ ಸುಮಲತಾ ಹೇಳಿದರು.
ಅಪ್ಪ, ತಾತನ ಹೆಸರು ಬಿಟ್ಟು ನಿಖಿಲ್ ಜಿಪಂ ಎಲೆಕ್ಷನ್ ಗೆದ್ದು ತೋರಿಸಲಿ: ಸುಮಲತಾ ಸವಾಲ್
ನವದೆಹಲಿ: ನಿಖಿಲ್ ಕುಮಾರಸ್ವಾಮಿ(Nikhil Kumarswamy) ಪಕ್ಷ ಬಿಟ್ಟು, ತಂದೆ, ತಾತನ ಹೆಸರು ಬಿಟ್ಟು ಜಿಲ್ಲಾ ಪಂಚಾಯ್ತಿ ಚುನಾವಣೆ ಗೆಲ್ಲಲಿ. ಆಮೇಲೆ ಬಂದು ನನಗೆ ಸಲಹೆ ನೀಡಲಿ ಎಂದು ಸಂಸದೆ ಸುಮಲತಾ ಅಂಬರೀಷ್ ಸವಾಲು ಹಾಕಿದ್ದರು.
ನಿಖಿಲ್ ಭಾರೀ ರಾಜಕೀಯ(Politics) ಅನುಭವಿಯಂತೆ ಸಲಹೆ ನೀಡಿದ್ದಾರೆ. ಸಂಸದರು ತಮ್ಮ ಸಾಧನೆ ಏನು? ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ. ಚಿಕ್ಕವರಾದರೂ ಪರವಾಗಿಲ್ಲ, ನನ್ನಿಂದ ತಪ್ಪಾಗಿದ್ದರೆ ಸಲಹೆ ಸ್ವೀಕರಿಸುವೆ. ಆದರೆ ಫ್ಯಾಕ್ಟ್ ಇಟ್ಟುಕೊಂಡು ಮಾತನಾಡಬೇಕು ಎಂದು ಟಾಂಗ್ ನೀಡಿದ್ದಾರೆ.
ನಾನು ವಿಧಾನಸಭೆಗೆ(Assembly Election) ಸ್ಪರ್ಧೆ ಮಾಡುವುದಿಲ್ಲ. ಅಭಿಷೇಕ್ ಅಂಬರೀಶ್(Abhishek Ambareesh) ಸ್ಪರ್ಧೆ ಮಾಡುವ ಬಗ್ಗೆ ಮುಂದಿನ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಸಂಸದೆ ಕೊಡುಗೆ ಏನು?
ಮದ್ದೂರು:ಮಂಡ್ಯ(Mandya) ಜಿಲ್ಲೆ ಅಭಿವೃದ್ಧಿಗೆ ಸಂಸದೆ ಸುಮಲತಾ ಕೊಡುಗೆ ಏನು ಎಂದು ಜೆಡಿಎಸ್(JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸಾಮಿ ಭಾನುವಾರ ಪ್ರಶ್ನಿಸಿದ್ದರು. ಮಾ.26 ರಂದು ಪಟ್ಟಣದ ಲೀಲಾವತಿ ಬಡಾವಣೆಯ ಶಾಸಕ ಡಿ.ಸಿ.ತಮ್ಮಣ್ಣನವರ ನಿವಾಸಕ್ಕೆ ಭೇಟಿ ನೀಡಿ ಕೆ.ಬೆಳ್ಳೂರು ಗ್ರಾಪಂ ನೂತನ ಅಧ್ಯಕ್ಷೆ ಸುಂದ್ರಮ್ಮ ಹಾಗೂ ಉಪಾಧ್ಯಕ್ಷ ನಟರಾಜು ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಜಿಲ್ಲೆ ಅಭಿವೃದ್ಧಿ ಮಾಡುವುದಕ್ಕೆ ಸಂಸದರು ಬೇಕಾಗಿಲ್ಲ. ನಮ್ಮಲ್ಲಿ ದಕ್ಷತೆಯ ಶಾಸಕರು ಇದ್ದಾರೆ. ಅವರಿಗೆ ತಮ್ಮ ಕರ್ತವ್ಯದ ಬಗ್ಗೆ ಪರಿಜ್ಞಾನವಿದೆ ಎಂದು ವ್ಯಂಗ್ಯವಾಡಿದ್ದರು.
ನಿಖಿಲ್‌ಗೆ ಸುಮಲತಾ ಸವಾಲು, ಮಂಡ್ಯದಿಂದಲೇ ನಿಖಿಲ್ ಸ್ಪರ್ಧಿಸ್ತಾರೆ ಎಂದ ಎಚ್‌ಡಿಕೆ
ಸಂಸದೆ ಸುಮಲತಾ ಅವರ ರೀತಿ ಒಂದು ಬಾರಿ ಆಯ್ಕೆಯಾದವರಲ್ಲ. ಶಾಸಕರು ಹಿಂದಿನ ಬಾಗಿಲಿಂದ ಬಂದು ರಾಜಕಾರಣ ಮಾಡುತ್ತಿಲ್ಲ. ಮೂರು ನಾಲ್ಕು ಬಾರಿ ಕ್ಷೇತ್ರದ ಜನರಿಂದ ಆಯ್ಕೆಯಾಗಿ ಅಭಿವೃದ್ಧಿ ಜೊತೆಗೆ ರಾಜಕಾರಣ ಮಾಡುತ್ತಿದ್ದಾರೆ. ಈ ವಿಚಾರವನ್ನು ಜನರು ಪ್ರಶ್ನಿಸಬೇಕೆ ಹೊರತು ಸಂಸದೆಯಲ್ಲ ಎಂದು ಹೇಳಿದ್ದರು.
ಸಂಸದೆ ಸುಮಲತಾ ಪ್ರತಿ ಸಂದರ್ಭದಲ್ಲೂ ಪಕ್ಷ ಮತ್ತು ಶಾಸಕರ ವಿರುದ್ಧ ಕಾಲು ಕೆರೆದುಕೊಂಡು ಜಗಳ ತೆಗೆಯುತ್ತಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನು ಎಂದ ನಿಖಿಲ್ ಕುಮಾರಸ್ವಾಮಿ, ಇಂತಹ ಆಟಗಳು ಸದಾ ಕಾಲ ನಡೆಯುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸುಮಲತಾ ಅವರು ಮೊದಲು ಜೆಡಿಎಸ್ ಶಾಸಕರ ಜೊತೆ ಕೈ ಜೋಡಿಸಿ ಜನರ ಜೊತೆ ನಿಂತು ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದರು. ಜೆಡಿಎಸ್ ಶಾಸಕರಿಗೆ ಸುಮಲತಾ ಪಾಠ ಮಾಡುವ ಅಗತ್ಯವಿಲ್ಲ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸಂಸದರ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.