Mandya Politics: ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಸುಳಿವು ನೀಡಿದ್ರಾ ಸುಮಲತಾ?
* ಬಿಜೆಪಿ ಸೇರ್ತಾರ ಸಂಸದೆ ಸುಮಲತಾ & ಟೀಂ.?
* ಮಂಡ್ಯದಲ್ಲಿ ಗರಿಗೆದರಿದ ರಾಜಕಾರಣ.
* ಹುಟ್ಟು ಹಬ್ಬದ ನೆಪದಲ್ಲಿ ಸುಮಲತಾ ಆಪ್ತನ ಮನೆಗೆ ಬಿಜೆಪಿ ನಾಯಕರ ದಂಡು.
ವರದಿ: ನಂದನ್ ರಾಮಕೃಷ್ಣ ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.
ಮಂಡ್ಯ (ಏ.18): ವಿಧಾಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮಂಡ್ಯ ರಾಜಕಾರಣ ಗರಿಗೆದರಿದೆ. ಚುನಾವಣೆಗೂ ಮುನ್ನ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಆಯ್ಕೆಗೊಂಡ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಯಾವ ಪಕ್ಷ ಸೇರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ನಡುವೆ ಸುಮಲತಾ ಬಿಜೆಪಿ (BJP) ಸೇರ್ಪಡೆ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದು, ಬೆಂಬಲಿಗರ ಮೂಲಕ ಬಿಜೆಪಿ ಸೇರುವ ಬಗ್ಗೆ ಸುಮಲತಾ ಸುಳಿವು ನೀಡ್ತಿದ್ದಾರ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ವರ್ಷಕ್ಕೂ ಮೊದಲೇ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ (Induvalu Sachidanada) ಚುನಾವಣಾ ತಯಾರಿ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚ್ಚಿ ಕಣಕ್ಕಿಳಿಯುವುದು ಪಕ್ಕಾ ಅಂತಲೇ ಹೇಳಲಾಗ್ತಿದೆ.
ಸಚ್ಚಿದಾನಂದ ಹುಟ್ಟುಹಬ್ಬ, ಶುಭಕೋರಿದ ಬಿಜೆಪಿ ನಾಯಕರು: ಭಾನುವಾರ ಇಂಡುವಾಳು ಸಚ್ಚಿದಾನಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಂಡುವಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹಲವಾರು ಬಿಜೆಪಿ ನಾಯಕರ ಆಗಮಿಸಿ ಶುಭಕೋರಿದ್ದಾರೆ. ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಸಚ್ಚಿದಾನಂದ ಮನೆಗೆ ಭೇಟಿ ನೀಡಿದರು. ಸಚ್ಚಿ ಬಿಜೆಪಿ ಸೇರ್ಪಡೆ ಚರ್ಚೆಗೂ, ಸಚ್ಚಿದಾನಂದ ಮನೆಗೆ ಬಿಜೆಪಿ ನಾಯಕರ ಭೇಟಿಗೂ ಸಂಬಂಧ ಇರುವ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ. ಈ ಎಲ್ಲಾ ಲೆಕ್ಕಾಚಾರಗಳು ನಿಜವಾದರೇ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸಚ್ಚಿದಾನಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
Mandya Politics: ರಾಜಕೀಯ ಪಕ್ಷ ಸೇರಲು ಆತುರ ಮಾಡಲ್ಲ: ಸಂಸದೆ ಸುಮಲತಾ
ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ಸಂಸದೆ ಸುಮಲತಾ ಯಾವ ಪಕ್ಷ ಸೇರುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ದಳಪತಿಗಳ ವಿರುದ್ಧವೇ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿರುವುದರಿಂದ ಸದ್ಯ ಸುಮಲತಾ ಕಾಂಗ್ರೆಸ್ ಅಥವಾ ಬಿಜೆಪಿ ಸೇರಬಹುದು ಎನ್ನಲಾಗ್ತಿದೆ. ಆದರೆ ಸ್ವತಃ ಕಾಂಗ್ರೆಸ್ ನಾಯಕರಿಗೆ ಸುಮಲತಾ ಪಕ್ಷ ಸೇರ್ಪಡೆ ಇಷ್ಟವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಸಂಸದೆ ಸುಮಲತಾ ಮುಂದಿರುವ ಏಕೈಕ ಆಯ್ಕೆ ಬಿಜೆಪಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಎಲ್ಲಿಯೂ ತುಟಿಬಿಚ್ಚದ ಸಂಸದೆ ನಾನು ಯಾವ ಪಕ್ಷ ಸೇರಬೇಕು ಎಂಬುದನ್ನ ಜನರೇ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಆದರೆ ಸುಮಲತಾ ಬೆಂಬಲಿಗರು ಮಾತ್ರ ಬಿಜೆಪಿ ಸೇರ್ಪಡೆಗೆ ಮನಸ್ಸು ಮಾಡಿದ್ದು, ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು ನೀಡ್ತಿದ್ದಾರ ಎಂಬ ಅನುಮಾನ ಮೂಡಿವೆ.
ಬರ್ತಡೇ ನೆಪದಲ್ಲಿ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ: ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡು ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಶ್ರೀರಂಗಪಟ್ಟಣ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಆಯೋಜಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಸಚ್ಚಿದಾನಂದರಿಗೆ ಶುಭಕೋರಿ ವಿವಿಧ ಬಗೆಯ ಬಾಡೂಟ ಸವಿದರು.
Mandya Politics: ಬೇರೆ ಪಕ್ಷ ಸೇರ್ಪಡೆ ಬಗ್ಗೆ ಮಂಡ್ಯ ಜನರೇ ಹೇಳಬೇಕು: ಸುಮಲತಾ
ಸುಮಲತಾರವರು ಬಿಜೆಪಿಗೆ ಬಂದರೆ ಸ್ವಾಗತ: ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿರುವಾಗಲೇ ಸಚಿವ ಅಶ್ವಥ ನಾರಾಯಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ಮಂಡ್ಯಕ್ಕೆ ಆಗಮಿಸಿದ್ದ ಸಚಿವ ಅಶ್ವಥ್ ನಾರಾಯಣ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಸಂಸದೆ ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಲಾಗಿದೆ. ಅವರು ಉತ್ತಮ ನಾಯಕಿ ಎನಿಸಿಕೊಂಡಿದ್ದಾರೆ. ಸುಮಲತಾರವರು ಬಿಜೆಪಿ ಪಕ್ಷ ಸೇರುವುದಾದರೆ ಸ್ವಾಗತಿಸುತ್ತೇನೆ ಎಂದಿದ್ದರು.