ದೆಹಲಿ ಪಾಲಿಕೆ ಗೆದ್ದ ಆಪ್‌ಗೆ ಕೌಂಟರ್, ರಾಜಧಾನಿಗೆ ನಮ್ಮವರೇ ಮೇಯರ್ ಎಂದ ಬಿಜೆಪಿ
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 134 ಸ್ಥಾನ ಗೆದ್ದು ಅಧಿಕಾರಕ್ಕೇರಿದೆ. ಬಿಜೆಪಿ 15 ವರ್ಷಗಳ ಆಡಳಿತದಿಂದ ಕೆಳಗಿಳಿದಿದೆ. ಆಮ್ ಆದ್ಮಿ ಪಾರ್ಟಿ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಭ್ರಮದ ನಡುವೆ ಬಿಜೆಪಿ ಕೌಂಟರ್ ನೀಡಿದೆ. ಆಪ್ ಅಧಿಕಾರ ಪಡೆದಿರಬಹುದು. ಆದರೆ ಮೇಯರ್ ನಮ್ಮವರೇ ಎಂದು ಬಿಜೆಪಿ ಹೇಳಿದೆ. ಇದು ಹೇಗೆ ಸಾಧ್ಯ?
ನವದೆಹಲಿ(ಡಿ.07): ದೆಹಲಿ ಇದೀಗ ಸಂಪೂರ್ಮವಾಗಿ ಆಮ್ ಆದ್ಮಿ ಪಾರ್ಟಿ ಕೈವಶವಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಭರ್ಜರಿ ಗೆಲುವು ಸಾಧಿಸಿ ಈಗಾಗಲೇ ಅಧಿಕಾರದಲ್ಲಿದೆ. ಆದರೆ ಕಳೆದ 15 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆ ಬಿಜೆಪಿ ಆಡಳಿತದಲ್ಲಿತ್ತು. ಇದೀಗ ಆಮ್ ಆದ್ಮಿ ಪಾರ್ಟಿ 134 ಸ್ಥಾನ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಮಹಾ ನಗರ ಪಾಲಿಕೆಯಲ್ಲೂ ಅಧಿಕಾರ ಹಿಡಿದಿದೆ. ಇತ್ತ ಬಿಜೆಪಿ 104 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಮ್ ಆದ್ಮಿ ಪಾರ್ಟಿ ಸಂಭ್ರಮ ನಗರದಲ್ಲೆಡೆ ಮುಗಿಲು ಮುಟ್ಟಿದೆ. ಇದರ ನಡುವೆ ಬಿಜೆಪಿ ಚೆಕ್‌ಮೇಟ್ ನೀಡಿದೆ. ಆಮ್ ಆದ್ಮಿ ಪಾರ್ಟಿ ಪಾಲಿಕೆ ಗೆದ್ದಿದೆ ಆದರೆ, ದೆಹಲಿ ಮಹಾನಗರ ಪಾಲಿಕೆಗೆ ಮೇಯರ್ ನಮ್ಮವರೇ ಎಂದು ಬಿಜೆಪಿ ಹೇಳಿದೆ. ಇದಕ್ಕೆ ಚಂಡೀಘಢದ ಉದಾಹರಣೆ ನೀಡಿದೆ.
ತೀವ್ರ ಪೈಪೋಟಿನ ಸಮರದಲ್ಲಿ ಯಾರು ಹೆಚ್ಚು ನಂಬರ್ಸ್ ಪಡೆಯುತ್ತಾರೋ ಅವರೆ ಮೇಯರ್ ಆಗುತ್ತಾರೆ. ಈ ಹೋರಾಟದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮೇಯರ್ ಆಯ್ಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಇದರಿಂದ ಆಪ್ ಪಾಲಿಕೆ ಗೆದ್ದರೆ, ಮೇಯರ್ ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹಾಗೂ ಬಿಜೆಪಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಹೇಳಿದ್ದಾರೆ.
ಮಹಾನಗರ ಪಾಲಿಕೆ ಗೆದ್ದ ಬೆನ್ನಲ್ಲೇ ಆಮ್ ಆದ್ಮಿಗೆ ಎದುರಾಯ್ತು ಸಂಕಷ್ಟ!
ನಗರ ಮತ್ತೊಮ್ಮೆ ಬಿಜೆಪಿ ಮೇಯರ್ ಕಾಣಲಿದೆ. ಇದರಲ್ಲಿ ವ್ಯತ್ಯಾಸವಿಲ್ಲ ಎಂದು ಬಿಜೆಪಿ ವಕ್ತಾರ ತಜಿಂದರ್ ಪಾಲ್ ಹೇಳಿದ್ದಾರೆ. ಚಂಡೀಘಡ ಪಾಲಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮೇಯರ್ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹೇಳಿದೆ. ಇದೇ ರೀತಿ ದೆಹಲಿಯಲ್ಲೂ ಬಿಜೆಪಿಯಿಂದಲೇ ಮೇಯರ್ ಆಯ್ಕೆಯಾಗಲಿದ್ದಾರೆ ಎಂದು ಹೊಸ ದಾಳ ಉರುಳಿಸಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 250 ವಾರ್ಡ್‌ಗಳಿಗೆ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ನೇರಾ ನೇರ ಸ್ಪರ್ಧೆ ನಡೆದಿತ್ತು. ದೆಹಲಿಯ 250 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 1,349 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಒಟ್ಟು 1.45 ಕೋಟಿ ಅರ್ಹ ಮತದಾರರಲ್ಲಿ ಶೇ.50.47ರಷ್ಟುಜನರು ಮತ ಚಲಾಯಿಸಿದ್ದರು. ಈ ಪೈಕಿ ಆಮ್ ಆದ್ಮಿ ಪಾರ್ಟಿ 134 ಸ್ಥಾನ ಗೆದ್ದು ಅಧಿಕಾರಕ್ಕೇರಿದೆ. ಇತ್ತ ಅಧಿಕಾರದಲ್ಲಿದ್ದ ಬಿಜೆಪಿ 104 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಕಾಂಗ್ರೆಸ್ ಕೇವಲ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ.
ಆಪ್ ತೆಕ್ಕೆಗೆ ದೆಹಲಿ ಪಾಲಿಕೆ: ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ ಕೇಜ್ರಿವಾಲ್..!
ನಾಳೆ(ಡಿ.08) ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ವರದಿ ನೀಡಿದೆ. ಆದರೂ ಕದನ ಕುತೂಹಲ ಹೆಚ್ಚಾಗಿದೆ.