ಮಹಾನಗರ ಪಾಲಿಕೆ ಗೆದ್ದ ಬೆನ್ನಲ್ಲೇ ಆಮ್ ಆದ್ಮಿಗೆ ಎದುರಾಯ್ತು ಸಂಕಷ್ಟ!
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಗೆಲುವಿನ ಮೂಲಕ ಗದ್ದುಗೆ ಏರಿದೆ. 15 ವರ್ಷಗಳಿಂದ ಆಡಳಿದಲ್ಲಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿಗೆ ತಲೆನೋವು ಹೆಚ್ಚಾಗಿದೆ.
ನವದೆಹಲಿ(ಡಿ.07): ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವಿನ ನಗೆ ಬೀರಿದೆ. ಅಭೂತಪೂರ್ವ ಬಹುಮತದೊಂದಿಗೆ ಆಪ್ ಪಾಲಿಕೆ ಅಧಿಕಾರ ಹಿಡಿದಿದೆ. ಇತ್ತ 15 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ, ಅರವಿಂದ್ ಕೇಜ್ರಿವಾಲ್ ಬಿರುಗಾಳಿಗೆ ಕುಸಿದು ಬಿದ್ದಿದೆ. ಬದ್ಧವೈರಿ ಬಿಜೆಪಿ ಮಣಿಸಿದ ಸಂಭ್ರಮ ಆಮ್ ಆದ್ಮಿ ಪಾರ್ಟಿಯಲ್ಲಿ ಮನೆ ಮಾಡಿದೆ. ಆದರೆ ಈ ಸಂಭ್ರಮದ ನಡುವೆ ತಲೆನೋವು ಹೆಚ್ಚಾಗಿದೆ. ದೆಹಲಿಯ ವಾಯುಮಾಲಿನ್ಯ ಮತ್ತೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಕಟ್ಟಡ ಕಾಮಾಗಾರಿ, ಕಟ್ಟಡ ನೆಲಸಮ ಮಾಡುವ ಕಾರ್ಯಕ್ಕೂ ಬ್ರೇಕ್ ಹಾಕಲಾಗಿದೆ. ಆದರೂ ವಾಯು ಮಾಲಿನ್ಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ದೆಹಲಿ ಸರ್ಕಾರ ಹಾಗೂ ಇದೀಗ ಪಾಲಿಕೆಯಲ್ಲಿ ಆಡಳಿತ ಪಡೆದಿರುವ ಆಮ್ ಆದ್ಮಿ ಪಾರ್ಟಿಗೆ ವಾಯು ಮಾಲಿನ್ಯ ನಿಯಂತ್ರಣ ಮಾಡುವುದು ಮೊದಲ ಸವಾಲಾಗಿದೆ.
ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ವಾಯು ಗುಣಮಟ್ಟ ಪ್ರಮಾಣ 337ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕ ದೆಹಲಿ ವಾಯು ಮಾಲಿನ್ಯ ಗುಣಮಟ್ಟ ಕಳಪೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮಾಲಿನ್ಯ ಪ್ರಮಾಣ ವಿಪರೀತ ಏರಿಕೆಯಾಗಿದೆ. ದೆಹಲಿಯಲ್ಲಿ ಮತ್ತೆ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಆದರೂ ಮಾಲಿನ್ಯ ತಗ್ಗಿಲ್ಲ.
Delhi MCD Election Result: ಮೇಯರ್ ರೇಸ್‌ನಲ್ಲಿ ಮೂವರ ಫೈಟ್, ಸಿಸೋಡಿಯಾಗೆ ಪ್ರಮೋಷನ್?
ಪಾಲಿಕೆಯಲ್ಲಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಾರ್ಟಿ ಮೇಲೆ ಇದೀಗ ಮಹತ್ತರ ಜವಾಬ್ದಾರಿ ಹೆಗಲೇರಿದೆ. ಇಷ್ಟು ದಿನ ಪಾಲಿಕೆ ಹಾಗೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದ ಆಮ್ ಆದ್ಮಿ ಪಾರ್ಟಿ ಇದೀಗ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.
ರಾಷ್ಟ್ರರಾಜಧಾನಿ ವಲಯ ಹಾಗೂ ದೆಹಲಿಯಲ್ಲಿ ವಾಯುಮಾಲಿನ್ಯ ಕೊಂಚ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ರಾಷ್ಟ್ರೀಯ ಗಾಳಿ ಗುಣಮಟ್ಟಸಮಿತಿ ಹಿಂಪಡೆದಿತ್ತು. ಆದರೆ ಕಳೆದ ವಾರ ಮತ್ತೆ ದೆಹಲಿ ಮಾಲಿನ್ಯ ಅತಿಯಾಗಿತ್ತು. ಪಂಜಾಬ್, ಹರ್ಯಾಣ ಸೇರಿದಂತೆ ಈ ಭಾಗದಲ್ಲಿ ರೈತರು ಕಳೆಗೆ ಬೆಂಕಿ ಹಚ್ಚುತ್ತಿದ್ದ ಪರಿಣಾಮ ದೆಹೆಲಿ ಮಾಲಿನ್ಯ ಮತ್ತೆ ವಿಷಮ ಸ್ಥಿತಿಗೆ ತಲುಪುತ್ತಿದೆ. ಹೀಗಾಗಿ ಮತ್ತೆ ಒಂದೊಂದೆ ನಿರ್ಬಂಧಗಳು ಜಾರಿಯಾಗುತ್ತಿದೆ.
ಆಪ್ ತೆಕ್ಕೆಗೆ ದೆಹಲಿ ಪಾಲಿಕೆ: ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ ಕೇಜ್ರಿವಾಲ್..
ಗಾಳಿಯ ಗುಣಮಟ್ಟ400 ಅಂಕಗಳನ್ನು ದಾಟಿದ್ದ ಕಾರಣದಿಂದಾಗಿ 3 ದಿನಗಳ ಹಿಂದೆ 4ನೇ ಹಂತದ ನಿಯಂತ್ರಣ ಕ್ರಮಗಳನ್ನು ಹೇರಲಾಗಿತ್ತು. ಇದರಡಿ ಬಿಎಸ್-6 ಗುಣಮಟ್ಟದ ಎಂಜಿನ್ ಹೊಂದಿಲ್ಲದ ಡೀಸೆಲ್ ವಾಹನಗಳು ರಾಷ್ಟ್ರ ರಾಜಧಾನಿ ವಲಯ ಮತ್ತು ಟ್ರಕ್‌ಗಳು ದೆಹಲಿಯನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು.
ವಿಪರೀತ ಮಾಲಿನ್ಯದ ಪರಿಣಾಮ ಶಾಲೆಗಳಿಗೆ ರಜೆ ಘೋಷಿಸಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗಿತ್ತು. ಇಷ್ಟೇ ಅಲ್ಲ ಮಕ್ಕಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೇ ಶಾಲೆಗಳಲ್ಲಿ ಉಸಿರಾಟದ ವ್ಯಾಯಾಮಗಳನ್ನು ಆರಂಭಿಸಲಾಗಿದೆ. ಅಲ್ಲದೇ ನಾಲ್ಕು ಚಕ್ರಗಳ ಡೀಸೆಲ್ ವಾಹನಗಳು ದೆಹಲಿಯನ್ನು ಪ್ರವೇಶಿಸದಂತೆ ನಿಷೇಧಿಸಲಾಗಿತ್ತು.