ರಂಗೇರಿದ ಮಸ್ಕಿ ಬೈ ಎಲೆಕ್ಷನ್ ಅಖಾಡ: ಕ್ಷೇತ್ರದ ಪ್ರಮುಖ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಭರವಸೆ
ಮಸ್ಕಿ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜ್ಯದ ಘಟಾನುಘಟಿ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಕ್ಷೇತ್ರದ ಪ್ರಮುಖ ಬೇಡಿಕೆ ಈಡೇರಿಸಲು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ.
ರಾಯಚೂರು, (ಏ.06): ಮಸ್ಕಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್, ಬಿಜೆಪಿ ನಾಯಕರ ಪ್ರಚಾರ ಜೋರಾಗಿದೆ. ಸದ್ಯ ಉಭಯ ಪಕ್ಷಗಳು 5ಎ ಕಾಲುವೆ ಹೋರಾಟಗಾರರನ್ನು ಸೆಳೆಯಲು ನನಾ ಕಸರತ್ತು ನಡೆಸಿವೆ.
ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‌ಗೆ 5ಎ ಕಾಲುವೆ ಆತಂಕ ಶುರುವಾಗಿದ್ರೆ, ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ 5A ಕಾಲುವೆ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು.
ಒಂದೆಡೆ ಬಿಜೆಪಿ, ಕಾಲುವೆ ನಿರ್ಮಾಣ ಅಸಾಧ್ಯವೆಂದಿರೋ ಹಿನ್ನೆಲೆ ಕಮಲ ಪಕ್ಷದ ವಿರುದ್ಧ ಹೋರಾಟಗಾರರು ಮುನಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಇತ್ತೀಚಿಗೆ ವಟಗಲ್ ಹಾಗು ಅಮಿನಗಡದಲ್ಲಿ ಗ್ರಾಮಸ್ಥರು ಸಚಿವ ಶ್ರೀರಾಮುಲು ಹಾಗೂ ಸಂಸದ ಸಂಗಣ್ಣ ಕರಡಿಗೆ ಮುತ್ತಿಗೆ ಹಾಕಿದ್ದರು. ಈಗ ಇದೇ ಸ್ಥಳಗಳಲ್ಲಿ ಕಾಂಗ್ರೆಸ್ ಮತಬೇಟೆ ಮಾಡುತ್ತಿದೆ.
'ಪ್ರತಾಪ್‌ಗೌಡ ತೀರಿಕೊಂಡಿಲ್ಲ, ಕ್ಷೇತ್ರದ ಜನ ತೀರಿಕೊಳ್ಳುವಂತೆ ಮಾಡಿದ್ದಾರೆ'
5ಎ ಕಾಲುವೆ ಜಾರಿಗೆ ಭರವಸೆ
ಎನ್‌ಆರ್ ಬಿಸಿ 5 ಎ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮುಂದಿನ ಬಾರಿ ಅಧಿಕಾರಕ್ಕೆ ಬಂದಲ್ಲಿ ಎಷ್ಟೇ ಖರ್ಚಾದರೂ ಯೋಜನೆ ಜಾರಿ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಮಸ್ಕಿ ಕ್ಷೇತ್ರದ ಪಾಮನಕಲ್ಲೂರಿನಲ್ಲಿ ಎನ್ ಆರ್ ಬಿಸಿ 5ಎ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಿದ್ದು, ನಮ್ಮ ಮೇಲೆ ವಿಶ್ವಾಸವಿಡಿ. ನಾನು ಕೊಟ್ಟ ಮಾತು ತಪ್ಪಿಲ್ಲ. ಆಕಾಶ ಕಳಚಿದರೂ ಯೋಜನೆ ಜಾರಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಾಪಗೌಡ ಶಾಸಕನಾಗಿ ವಿಫಲನಾಗಿದ್ದಾನೆ. ಐದು ವರ್ಷದಲ್ಲಿ ಒಮ್ಮೆಯೂ ಯೋಜನೆ ಬಗ್ಗೆ ಚರ್ಚಿಸಿಲ್ಲ. ಅಂಥವರನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕರೆ ನೀಡಿದರು.