ಎಐಸಿಸಿ ಅಧ್ಯಕ್ಷ ಡಾ. ಖರ್ಗೆ ಮತ್ತವರ ಕುಟುಂಬ, ಮಕ್ಕಳನ್ನೆಲ್ಲ ಸಾಫ್‌ ಮಾಡ್ತೀನಿ ಎಂದು ಮಣಿಕಂಠ ರಾಠೋಡ ಹೇಳಿದ್ದಾನೆ ಎನ್ನಲಾಗಿರುವ ಆಡಿಯೋ ಧ್ವನಿ ಸುರುಳಿಯೊಂದು ಶನಿವಾರ ಇಲ್ಲಿ ವೈರಲ್‌ ಆಗಿದ್ದು ಚಿತ್ತಾಪುರ, ಕಲಬುರಗಿಯಲ್ಲಿ ಸಂಚಲನ ಹುಟ್ಟುಹಾಕಿದೆ.

ಕಲಬುರಗಿ (ಮೇ.7) : ಎಐಸಿಸಿ ಅಧ್ಯಕ್ಷ ಡಾ. ಖರ್ಗೆ ಮತ್ತವರ ಕುಟುಂಬ, ಮಕ್ಕಳನ್ನೆಲ್ಲ ಸಾಫ್‌ ಮಾಡ್ತೀನಿ ಎಂದು ಮಣಿಕಂಠ ರಾಠೋಡ ಹೇಳಿದ್ದಾನೆ ಎನ್ನಲಾಗಿರುವ ಆಡಿಯೋ ಧ್ವನಿ ಸುರುಳಿಯೊಂದು ಶನಿವಾರ ಇಲ್ಲಿ ವೈರಲ್‌ ಆಗಿದ್ದು ಚಿತ್ತಾಪುರ, ಕಲಬುರಗಿಯಲ್ಲಿ ಸಂಚಲನ ಹುಟ್ಟುಹಾಕಿದೆ.

ಕಳೆದ ವರ್ಷವೇ ಮಣಿಕಂಠ ರಾಠೋಡ ಸುದ್ದಿಗೋಷ್ಠಿಯೊಂದರಲ್ಲಿ ಶಾಸಕ ಪ್ರಿಯಾಂಕ್‌ ಖರ್ಗೆ(Priyank kharge) ವಿಚಾರದಲ್ಲಿ ನಾನು ಶೂಟ್‌ ಮಾಡಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ. ಇದಾದ ಬೆನ್ನಲ್ಲೇ ಇದೀಗ ಚುನಾವಣೆಯ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಾಗೂ ಖರ್ಗೆ ಕುಟುಂಬವನ್ನೇ ಸಾಫ್‌ ಮಾಡುವೆನೆಂದು ಹೇಳಿರುವ ಆಡಿಯೋ ವೈರಲ್‌(Viral audio) ಆಗಿರೋದು ಇದೀಗ ಸುದ್ದಿಗೆ ಗ್ರಾಸವಾಗಿದೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ರಾಠೋಡ್‌ರಿಂದ ಖರ್ಗೆ ಕುಟುಂಬದ ಹತ್ಯೆ ಸಂಚು: ಸುರ್ಜೇವಾಲಾ ಆರೋಪ

ಬಿಜೆಪಿ ಮುಖಂಡನೊಬ್ಬನ ಫೋನ್‌ ಕರೆಗೆ ಸ್ಪಂದಿಸಿರುವ ಆಡಿಯೋ ಇದಾಗಿದ್ದು ಇದರಲ್ಲಿ ನಿಂದನೀಯ ಪದಗಳನ್ನು, ಅಸಂಸದೀಯ ಪದಗಳನ್ನೆಲ್ಲ ಬಳಸಿ ಖರ್ಗೆ ಕುಟುಂಬದ ಬಗ್ಗೆ ಮಾತನಾಡಲಾಗಿದೆ.

ಮಣಿಕಂಠ ರಾಠೋಡ(Manikanth rathod) ವಿರುದ್ಧ ಕಿಡಿ ಕಾರುತ್ತಿರುವ ಚಿತ್ತಾಪುರ ಕಾಂಗ್ರೆಸ್‌ ಹುರಿಯಾಳು ಪ್ರಿಯಾಂಕ್‌ ಖರ್ಗೆ ಶನಿವಾರ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಲಗುರ್ತಿ ಹಾಗೂ ಮುಚ್ಕೇಡ ಗ್ರಾಮಗಳ ರಚಾರ ಸಭೆಯಲ್ಲಿ ಇದೇ ಸಂಗತಿ ಪ್ರಸ್ತಾಪಿಸುತ್ತ ಮಣಿಕಂಠ ವಿರುದ್ಧ ಮುಗಿ ಬಿದ್ದಿದ್ದಾರೆ.

ಖರ್ಗೆ ಹೆಂಡತಿ ಮಕ್ಕಳನ್ನ ಸಾಫ್‌ ಮಾಡುತ್ತೇನೆ ಎಂದು ಮಣಿಕಂಠ ರಾಠೋಡ ಹೇಳಿದ್ದಾನೆ ಎನ್ನಲಾದ ಆಡಿಯೋ ಧ್ವನಿ ವೈರಲ್‌ ಆಗಿದೆ, ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಳೆದ 50 ವರ್ಷದಿಂದ ಕಲಬುರಗಿ ಜನರಿಗಾಗಿಯೇ ದುಡಿಯುತ್ತಿದ್ದಾರೆ ಅಂಥವರನ್ನು ಸಾಯಿಸುತ್ತಾನಂತೆ? ಖರ್ಗೆ ಸಾಹೇಬರು, ನಮ್ಮ ತಾಯಿ, ನಾನು ಹಾಗೂ ನನ್ನ ಪತ್ನಿ ತಪ್ಪು ಏನಾದರೂ ಮಾಡಿದ್ದೀವಾ ನಮ್ಮನ್ನ ಸಾಫ್‌ ಮಾಡಲು? ನಾನು ಇಂತಹ ಹತ್ತು ಮಣಿಕಂಠ ರಾಠೋಡಗಳನ್ನು ನೋಡಿದ್ದೇನೆಂದು ಪ್ರಿಯಾಂಕ್‌ ಖರ್ಗೆ ಗುಡುಗಿದ್ದಾರೆ.

ಪ್ರಿಯಾಂಕ್‌ ಮಾತಿಗೆ ಸಭೆಯಲ್ಲಿದ್ದವರು ಸ್ಪಂದಿಸಿದ್ದು ಮಣಿಕಂಠ ನಿಮ್ಮ ಕುಟುಂಬವನ್ನಷ್ಟೆಅಲ್ರಿ, ಹಂಗೇ ಬಿಟ್ರ ನಮ್ಮೆಲ್ಲರ ಹೆಂಡತಿ, ಮಕ್ಕಳನ್ನೂ ಸಾಫ್‌ ಮಾಡ್ತಾನೆ ಎಂದು ಆತಂಕದಿಂದ ಜನ ಪ್ರಿಯಾಂಕ್‌ ಗಮನ ಸೆಳೆದಾಗ ಚಿತತಾಪುರದ ಈ ಮೊಮ್ಮಗ ಇನ್ನೂ ಬದುಕಿದ್ದಾನೆ, ಇಂತಹ ಹತ್ತು ಮಣಿಕಂಠ ಬಂದರೂ ನೋಡಿಕೊಳ್ಳುವ ತಾಕತ್ತಿದೆ ಎಂದು ಸೇರಿದ್ದ ಜನರಿಗೆ ಅಭಯ ನೀಡಿದ್ದಾರೆ.

ಈ ಸಲದ ಚಿತ್ತಾಪುರ ಚುನಾವಣೆ ವಿಚಿತ್ರ ವಾತಾವರಣದಲ್ಲಿ ನಡೆಯುತ್ತಿದೆ. ಇದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನಡೆಯುತ್ತಿಲ್ಲ ಬದಲಿಗೆ ಚಿತ್ತಾಪುರ ಜನರ ಸ್ವಾಭಿಮಾನದ ಬದುಕಿಗೆ ಧಕ್ಕೆ ತರುವಂತ ಚುನಾವಣೆಯಾಗಿದೆ. ಇದನ್ನು ಮನಗಂಡು ತಾವೆಲ್ಲ ಮತ ಚಲಾವಣೆ ಮಾಡಬೇಕೆಂದರು.

ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸ್ಕೆಚ್‌ ಹಾಕಿದ ಬಿಜೆಪಿ ಅಭ್ಯರ್ಥಿ ಬಂಧಿಸಿ: ಸಿದ್ದರಾಮಯ್ಯ ಆಗ್ರಹ

ನಮ್ಮ ಯುವಕರ ಭವಿಷ್ಯ ಹಾಗೂ ಮಹಿಳೆಯರ ಸುರಕ್ಷತೆಗಾಗಿ ನೀವೆಲ್ಲ ನನಗೆ ಓಟು ಮಾಡಬೇಕು ಎಂದು ಜನತೆಗೆ ಪ್ರಿಯಾಂಕ್‌ ಖರ್ಗೆ ಮನವಿ ಮಾಡಿದ್ದಾರೆ. ನಮ್ಮ ಯುವಕರ ಭವಿಷ್ಯ ಹಾಗೂ ಮಹಿಳೆಯರ ಸುರಕ್ಷತೆಗಾಗಿ ನೀವೆಲ್ಲ ಕಾಂಗ್ರೆಸ್‌ಗೆ ಚಿತ್ತಾಪುರದಲ್ಲಿ ಓಟು ಮಾಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. 40 ಕೇಸ್‌ ಇರುವ, 2 ರಾಜ್ಯಗಳಲ್ಲಿ ಗಡಿಪಾರು ಶಿಕ್ಷೆಗೊಳಗಾಗಿರುವವನಿಗೆ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಅಸೆಂಬ್ಲಿ ಟಿಕೆಟ್‌ ನೀಡಿ ಚಿತ್ತಾಪುರ ಕಣಕ್ಕಿಳಿಸಿರೋದು ನಾಚಿಕೆಗೇಡಿನ ಸಂಗತಿ ಎಂದು ಪ್ರಿಯಾಂಕ್‌ ಖರ್ಗೆ ಜರಿದರು.