ಮಂಗಳೂರು, (ಡಿ.26): ರಾತ್ರಿ ಕರ್ಫ್ಯೂ ವಿಧಿಸಿದ್ರು, ಬದಲಾಯಿಸಿದ್ರು ಮತ್ತು ಹಿಂಪಡೆದ ಕಾರಣಗಳನ್ನು ಸರ್ಕಾರ ಬಹಿರಂಗ ಪಡಿಸಲಿ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.

ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿರ್ಧಾರಗಳು ರಾಜಕೀಯವಾಗಿ ಕೈಗೊಂಡರೇ? ವೈಜ್ಞಾನಿಕ ಕಾರಣಗಳಿವೆಯೇ? ಎಂಬುದನ್ನು ಜನತೆಗೆ ತಿಳಿಸಲಿ. ಸರ್ಕಾರದ ಗೊಂದಲಮಯ ನಿರ್ಧಾರಗಳಿಂದಾಗಿ ಜನರಲ್ಲಿ ಆತಂಕ ಹೆಚ್ಚಿದೆ ಎಂದು ಆರೋಪಿಸಿದರು.

ಹೊಸ ಕೊರೋನಾ ತಳಿಯ ರೋಗಲಕ್ಷಣ ಏನು? ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತು

ಸರ್ಕಾರದ ಆದೇಶಗಳು ತಾಂತ್ರಿಕ ಕಾರಣ ಹಾಗೂ ತಜ್ಞರ ಸಮಿತಿ ವರದಿ ಆಧರಿಸಿರುತ್ತವೆ. ಅಂತಹ ದಾಖಲೆಗಳಿದ್ದರೆ ನೀಡಲಿ. ಗೊಂದಲ ಸೃಷ್ಟಿಸುವ ಬದಲಾಗಿ, ಕೋವಿಡ್ 2ನೇ ಅಲೆ ನಿರ್ವಹಿಸಲು ಬೇಕಾದ ಸಿದ್ಧತೆಗಳನ್ನು ಮಾಡಲಿ. ಲಸಿಕೆಯ ಬಗ್ಗೆಯೂ ಸ್ಪಷ್ಟಪಡಿಸಲಿ. ಜಾಗೃತಿ ಮೂಡಿಸಲಿ. ಕೊರೋನಾದ ಖರ್ಚು-ವೆಚ್ಚಗಳ ಬಗ್ಗೆ ಲೆಕ್ಕ ನೀಡಲಿ ಎಂದು ಸಲಹೆ ನೀಡಿದರು.

ಕೋವಿಡ್ ಕಡಿಮೆಯಾದ ಮೇಲೆ ಸಿದ್ಧತೆ ಮಾಡಿದಂತೆ 2ನೇ ಹಂತದಲ್ಲಿ ಎಡವುದು ಬೇಡ. ಮುಖ್ಯಮಂತ್ರಿ, ಸಚಿವರುಗಳ ನಡುವಿನ ಸಮನ್ವಯತೆ ಕೊರತೆಯ ಹೊರೆಯನ್ನು ಜನರ ಮೇಲೆ ಹೇರುವುದು ಬೇಡ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಗೊಂದು ಆದೇಶಗಳೂ ಬೇಡ. ಇದರಿಂದ ಆಡಳಿತದ ಅತಂತ್ರ ಮಾತ್ರವಲ್ಲ, ಜನರೂ ಆತಂಕಕ್ಕೀಡಾಗುತ್ತಿದ್ದಾರೆ ಎಂದು ಹೇಳಿದರು. 

ವಿದೇಶದಿಂದ ಬರುವವರನ್ನು ಪರೀಕ್ಷಿಸಿದರೆ ಸಾಕೇ? ವೈರಸ್‌ ದೇಶದೊಳಗೆ ರೂಪಾಂತರಗೊಳ್ಳುವ ಸಾಧ್ಯತೆ ಇಲ್ಲವೇ? ಕೋವಿಡ್ ಮೊದಲ ಹಂತದ ನಿರ್ವಹಣೆ, ರೋಗದ ಬಗ್ಗೆ ಏನು ಸಂಶೋಧನೆ-ಅಧ್ಯಯನ ನಡೆಸಿದ್ದಾರೆ? ವರದಿ ಏನಿದೆ? ಆಯುಷ್ಮಾನ್‌ ಯೋಜನೆಯಿಂದ ಸಾಮಾನ್ಯ ಕೋವಿಡ್ ಸೋಂಕಿತರನ್ನು ಹೊರಗಿಟ್ಟದ್ದೇಕೆ?' ಎಂದು ಪ್ರಶ್ನಿಸಿದರು.