ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಇರಲಿಲ್ಲ: ಸುಮಲತಾ ಅಂಬರೀಶ್
ಯಾವ ಕಾರಣಕ್ಕೆ ಸುಮಲತಾ ಅವರನ್ನು ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಎಂದು ಕೇಳಲಿಲ್ಲವೆಂದು ನಿಮ್ಮ ನಾಯಕರನ್ನು ಪ್ರಶ್ನೆಮಾಡಿ ಅವರಿಂದಲೇ ಉತ್ತರ ಪಡೆಯಿರಿ. ನನ್ನ ಈ ನಡೆಯಿಂದ ನೋವಾಗಿದ್ದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ ನಾನು ಕ್ಷಮೆ ಯಾಚಿಸುತ್ತೇನೆ: ಸುಮಲತಾ ಅಂಬರೀಶ್
ನಾಗಮಂಗಲ(ಮೇ.06): ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘ ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ನನಗೆ ಬೆನ್ನೆಲುಬಾಗಿ ನಿಂತು ಆಶೀರ್ವದಿಸಿದ್ದೀರಿ. ಆದರೆ, ಅಂಬರೀಶ್ ಅವರು 25 ವರ್ಷ ಸೇವೆ ಸಲ್ಲಿಸಿರುವ ಪಕ್ಷದಲ್ಲಿ ನನಗೆ ಆಹ್ವಾನ ಇರಲಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬೋಗಾದಿ, ಕಾಂತಾಪುರ, ತುಪ್ಪದಮಡು, ಮಾಯಿಗೋನಹಳ್ಳಿ, ಹೊನ್ನಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡಪರ ಬಿರುಸಿನ ಪ್ರಚಾರ ನಡೆಸಿದ ಬಳಿಕ ಬಿಂಡಿಗನವಿಲೆಯಲ್ಲಿ ಮಾತನಾಡಿದ ಅವರು, ಯಾವ ಕಾರಣಕ್ಕೆ ಸುಮಲತಾ ಅವರನ್ನು ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಎಂದು ಕೇಳಲಿಲ್ಲವೆಂದು ನಿಮ್ಮ ನಾಯಕರನ್ನು ಪ್ರಶ್ನೆಮಾಡಿ ಅವರಿಂದಲೇ ಉತ್ತರ ಪಡೆಯಿರಿ. ನನ್ನ ಈ ನಡೆಯಿಂದ ನೋವಾಗಿದ್ದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ ನಾನು ಕ್ಷಮೆ ಯಾಚಿಸುತ್ತೇನೆ. ಆದರೆ, ಆ ಪಕ್ಷದ ನಾಯಕರ ನಡೆಗೆ ನಾನು ಹೊಣೆಯಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಮಂಡ್ಯಕ್ಕೆ ಬಂದಾಗಲೆಲ್ಲ ನನ್ನ ಬಗ್ಗೆ ಏನೆಲ್ಲಾ ಹೇಳಿಕೆ ಕೊಟ್ಟರು ಎಂಬುದನ್ನು ನೀವೇ ತಿಳಿದುಕೊಂಡು ಆಮೇಲೆ ನನ್ನನ್ನು ಪ್ರಶ್ನೆಮಾಡಿ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿಯಂತಹ ಭ್ರಷ್ಟಸರ್ಕಾರ ನೋಡಿಲ್ಲ: ಸಿದ್ದರಾಮಯ್ಯ
ಅಂಬರೀಶ್‌ಗೆ ಬಿಜೆಪಿ ಗೌರವ:
ಬಿಜೆಪಿ ಪಕ್ಷದವರು ನನ್ನನ್ನು ಗೌರವ ಆತ್ಮೀಯತೆಯಿಂದ ಆಹ್ವಾನಿಸಿದರಲ್ಲದೆ, ಬೆಂಗಳೂರು ಮತ್ತು ಮೈಸೂರಿನಲ್ಲಿ ರಸ್ತೆಗೆ ಅಂಬರೀಶ್ ಅವರ ಹೆಸರಿಟ್ಟು 12ಕೋಟಿ ರು. ವೆಚ್ಚದಲ್ಲಿ ಒಂದು ಸ್ಮಾರಕ ನಿರ್ಮಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಅಂಬರೀಶ್ ಬಿಜೆಪಿ ಪಕ್ಷದಲ್ಲಿರಲಿಲ್ಲ. 27ವರ್ಷ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದರು, ಜೆಡಿಎಸ್ ಪಕ್ಷದವರೆಲ್ಲರೂ ಅಂಬರೀಶ್ ಆತ್ಮೀಯ ಸ್ನೇಹಿತರೆಂದು ಹೇಳಿಕೊಂಡು ಇಂದಿಗೂ ಓಡಾಡುತ್ತಿದ್ದಾರೆ. ಆದರೆ, ಅವರು ನಿಧನರಾದ 14 ತಿಂಗಳಲ್ಲಿ ಇಂತಹ ಕೆಲಸ ಏಕೆ ಮಾಡಲಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಅಭ್ಯರ್ಥಿ ಸುಧಾ ಶಿವರಾಮೇಗೌಡರು ಎಲ್ಲರಿಗೂ ಕೈಚಾಚಿ ಸಹಾಯ ಮಾಡಿ ಅನ್ನಪೂರ್ಣೇಶ್ವರಿ ಎಂದೇ ಖ್ಯಾತರಾಗಿದ್ದಾರೆ. ನೀವು ಅವರಿಗೆ ನೀಡುವ ಒಂದೊಂದು ಮತವೂ ಸಹ ಸುಮಲತಾ ಮತ್ತು ನರೇಂದ್ರಮೋದಿಗೆ ಕೊಟ್ಟಂತಾಗುತ್ತದೆ. ನಾವೆಲ್ಲರೂ ಒಟ್ಟಾಗಿ ನಿಮ್ಮ ಸೇವೆ ಮಾಡಲು ಅನುಕೂಲವಾಗುತ್ತದೆ. ಹಾಗಾಗಿ ಸುಧಾ ಶಿವರಾಮೇಗೌಡರಿಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಅಂಬರೀಶ್‌ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಅಭ್ಯರ್ಥಿ ಸುಧಾ ಶಿವರಾಮೇಗೌಡ, ಪುತ್ರ ಎಲ್.ಎಸ್.ಚೇತನ್‌ಗೌಡ ಮಾತನಾಡಿ ಮತಯಾಚಿಸಿದರು. ಶಿವರಾಮೇಗೌಡರ ಸೊಸೆ ಡಾ.ಶೃತಿ ಚೇತನ್‌ಗೌಡ, ಮುಖಂಡರಾದ ಬಿ.ವಿ.ಸತ್ಯನ್, ಬಿದರಕೆರೆ ಮಂಜೆಗೌಡ, ಟಿ.ಕೆ.ರಾಮೇಗೌಡ, ವಿಜಯಕುಮಾರ್, ಸೋಮಶೇಖರ್, ನರಸಿಂಹಮೂರ್ತಿ ಸೇರಿದಂತೆ ನೂರಾರು ಮಂದಿ ಇದ್ದರು.
ಕುಟುಂಬದೊಳಗೂ ರಾಜಕಾರಣ
ಮೊದಲೆಲ್ಲಾ ಕುಟುಂಬ ರಾಜಕಾರಣ ನಡೆಯುತ್ತಿತ್ತು. ಈಗ ಕುಟುಂಬದೊಳಗೂ ರಾಜಕಾರಣ ಶುರುವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಒಂದು ಪಕ್ಷಕ್ಕೆ ಕುಟುಂಬ ಬಿಟ್ಟರೆ ಬೇರೇನೂ ಬೇಕಿಲ್ಲ. ಅವರ ಕುಟುಂಬದವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಕಾರ್ಯಕರ್ತರೇ ಸಿಗುವುದಿಲ್ಲವಂತೆ. ಹಾಗಿದ್ದರೆ ಎಷ್ಟುಕಡೆ ಕಾರ್ಯಕರ್ತರಿಲ್ಲ ಎಂಬುದನ್ನು ಜನರೇ ಯೋಚಿಸಬೇಕು. ಹಾಸನ, ಮಂಡ್ಯ, ರಾಮನಗರ ಕ್ಷೇತ್ರಗಳಲ್ಲಿ ಒಂದು ಪಕ್ಷಕ್ಕೆ ಕಾರ್ಯಕರ್ತರು ಸಿಗುವುದಿಲ್ಲವಂತೆ. ಹಾಗಾಗಿ ಅಲ್ಲೆಲ್ಲಾ ಅವರ ಕುಟುಂಬದವೇ ನಿಲ್ಲಬೇಕಂತೆ ಎಂದು ಲೇವಡಿ ಮಾಡಿದರು.