Asianet Suvarna News Asianet Suvarna News

PM Modi In Karnataka: ಮಂಡ್ಯದ ಪ್ರಾಮುಖ್ಯತೆಯನ್ನು ಮೋದಿ ಗುರುತಿಸಿದ್ದಾರೆ ಅದೇ ನನಗೆ ಖುಷಿ: ಸುಮಲತಾ!

ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಬೇರೆ ಯಾವುದೇ ಸ್ಥಳ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ, ಮೋದಿ ಮಂಡ್ಯದ ಗಜ್ಜಲಗೆರೆಯನ್ನೇ ಆಯ್ಕೆ ಮಾಡಿಕೊಂಡಿರುವುದು ಅವರು ಜಿಲ್ಲೆಗೆ ನೀಡಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.

Mandya MP sumalatha ambareesh on PM Narendra Modi visit Bengaluru Mysuru expressway san
Author
First Published Mar 12, 2023, 10:49 AM IST | Last Updated Mar 12, 2023, 10:49 AM IST

ಮಂಡ್ಯ (ಮಾ.12): ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹೆಮ್ಮೆ ಎನಿಸಿಕೊಂಡಿರುವ 118 ಕಿಲೋಮೀಟರ್‌ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಮಂಡ್ಯ ಸಂಸದೆ ಹಾಗೂ ಇತ್ತೀಚೆಗೆ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವ ಸುಮಲತಾ, ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಹಾಡಿ ಹೊಗಳಿದ್ದಾರೆ. 'ಇದು ಮಡ್ಯ ಜಿಲ್ಲೆಗೆ ಹೆಮ್ಮೆಯ ವಿಚಾರ. 118 ಕಿಲೋಮೀಟರ್‌ನಷ್ಟು ಉದ್ದದ ಹೈವೆ ಇದಾಗಿದೆ. ಅವರು ದೇಶದ ಪ್ರಧಾನಿ, ಈ ಭಾಗದ ಎಲ್ಲಿ ಬೇಕಾದರೂ ಅವರು ಉದ್ಘಾಟನೆಗೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಮಂಡ್ಯವನ್ನ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಪ್ರಾಮುಖ್ಯತೆ ಏನು ಅಂತ ಪ್ರಧಾನಮಂತ್ರಿಗಳು ಗುರುತಿಸಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಉದ್ಘಾಟನೆ ಇಟ್ಕೊಂಡಿದ್ದಾರೆ, ಇದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದು ಅವರು ಹೇಳಿದ್ದಾರೆ. ಇನ್ನು ಮೋದಿ ಅವರ ಮಾತುಗಳಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುಮಲತಾ,  ಮೋದಿ ಅವರ ಮಾತುಗಳನ್ನ ಹೊಸದಾಗಿ ನಾನು ಕೇಳುತ್ತಿಲ್ಲ. ಆದರೆ ಒಂದಂತೂ ಸತ್ಯ ಒಂದು ಕಾರ್ಯಕ್ರಮದಲ್ಲಿ 50 ಸಾವಿರ ಜನ ಇದ್ದರೆ, ಮೋದಿ ಮಾತಿನಿಂದ 45 ಸಾವಿರ ಜನರಾದರೂ ಅವರ ಮಾತನ್ನು ಬಹಳ ಆಸಕ್ತಿಯಿಂದ ಕೇಳಿ ಅವರ ಅಭಿವೃದ್ಧಿ ಅಜೆಂಡಾಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.

ಮೋದಿ ಮಾತುಗಳಲ್ಲಿ ನಿಜವಾಗಿಯೂ ತೂಕವಿರುತ್ತದೆ. ನಾನು ಪಾರ್ಲಿಮೆಂಟ್ ನಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ ಸಾಕಷ್ಟು ಕಲಿತಿದ್ದೇನೆ. ಬಹಳ ತೂಕವಾಗಿ ಮಾತನಾಡುತ್ತಾರೆ ವಿಷಯವನ್ನು ಅರ್ಥ ಮಾಡಿಕೊಂಡು ಚೆನ್ನಾಗಿ ಮಾತನಾಡ್ತಾರೆ. ಎಲ್ಲೆಲ್ಲಿ ಪಂಚ್ ಕೊಡಬೇಕು ಎಲ್ಲೆಲ್ಲಿ ಸೀರಿಯಸ್ ಆಗಿ ಮಾತನಾಡಬೇಕು ಅನ್ನೋ ವಿಚಾರದಲ್ಲಿ ಮೋದಿ ಮಾಸ್ಟರ್ ಎಂದು ಹೇಳಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಬರೋದು ಮಾತ್ರವಲ್ಲ. ಒಂದು ರೋಡ್ ಶೋ‌ ಕೂಡ ಮಾಡ್ತಾರೆ. ನಾನು ಗೆಜ್ಜಲಗೆರೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಮುಖ್ಯ ಕಾರ್ಯಕ್ರಮದ ವೇದಿಕೆಯಲ್ಲಿ ನಾವು ಮೋದಿ ಅವರನ್ನ ಸ್ವಾಗತ ಮಾಡುತ್ತೇವೆ ಎಂದರು. 'ಒಳ್ಳೆಯ ರಸ್ತೆ ನಿರ್ಮಾಣ ಆಗಿದೆ. ನಾನು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ಮಂಡ್ಯಕ್ಕೆ ಮೊದಲೆಲ್ಲ ಎರಡು ಗಂಟೆ ಹಿಡಿಯುತ್ತಿತ್ತು. ಈಗ ಕಡಿಮೆ ಅವಧಿಯಲ್ಲಿ ನಾನೇ ಮಂಡ್ಯಕ್ಕೆ ಹೋಗಿ ಬರುತ್ತಿದ್ದೇನೆ. ಇದು ಎಲ್ಲರೂ ಮೆಚ್ಚುವಂತಹ ರಸ್ತೆ' ಎಂದು ಹೇಳಿದರು.

Breaking: ತಾಂತ್ರಿಕ ಕಾರಣ, ಸದ್ಯಕ್ಕೆ ಬಿಜೆಪಿ ಸೇರೋದಿಲ್ಲ ಸುಮಲತಾ!

ಮಂಡ್ಯ ರಸ್ತೆ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ವಿಚಾರದಲ್ಲಿ ಮಾತನಾಡಿದ ಅವರು, ಕ್ರೆಡಿಟ್ ಪಡೆದುಕೊಳ್ಳಲು ಮುಂದಾದ ಕಾಂಗ್ರೆಸ್ , ಜೆಡಿಎಸ್‌ಗೆ ಟಾಂಗ್‌ ನೀಡಿದರು. 'ಜ್ಯೋತಿಷಿ ಒಬ್ಬರಿಗೆ ಕನಸು ಬಿತ್ತಂತೆ ನಿಮಗೆ ಮಗು ಆಗುತ್ತೆ ಅಂತ. ಅದೇ ರೀತಿ ತಂದೆ ತಾಯಿಗೆ ಜ್ಯೋತಿಷಿ ಹೇಳಿದ ಹಾಗೆ ಮಗು ಆಯಿತಂತೆ. ಈಗ ಕ್ರೆಡಿಟ್ ಜ್ಯೋತಿಷಿಗೆ ಹೋಗಬೇಕಾ, ಆ ತಂದೆ ತಾಯಿಗೆ ಹೋಗಬೇಕಾ..? ಈ ರೀತಿ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ತುಂಬಾ ಜನ ಇರ್ತಾರೆ' ಎಂದು ಹೇಳಿದರು. ಈ ವಿಚಾರದಲ್ಲಿ ಕ್ರೆಡಿಟ್ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಜನರಿಗೆ ಚೆನ್ನಾಗಿ ಗೊತ್ತಿದೆ ಯಾರಿಗೆ ಕ್ರೆಡಿಟ್‌ ಕೊಡಬೇಕು ಅಂತ. ಸಾಕಷ್ಟು ಯೋಜನೆಗಳು ನಮಗೆ ಬಂದಿದೆ. ಏರ್‌ಪೋರ್ಟ್‌ ಉದ್ಘಾಟನೆ ಮಾಡೋದಕ್ಕೆ 20 ವರ್ಷ ಕಳೆಯಿತು. ಕೇವಲ ನಾಲ್ಕೇ ವರ್ಷಗಳಲ್ಲಿ ಇಂಥದ್ದೊಂದು ಅದ್ಭುತ ರಸ್ತೆ ಮಾಡಲಾಗಿದೆ. ಈ ಕ್ರೆಡಿಟ್ ಯಾರಿಗೆ ತಲುಪಬೇಕು ಅವರಿಗೆ ತಲುಪುತ್ತೆ. ಬೇರೆಯವರ ತರ ನಾನು ಕ್ರೆಡಿಟ್‌ಗೆ ಇಂಪಾರ್ಟೆಂಟ್ ಕೊಡಲ್ಲ. ಜನರಿಗೆ ಯಾವ ರೀತಿ ಅನುಕೂಲ ಆಗಲಿದೆ ಎನ್ನುವ ದೃಷ್ಟಿಯಿಂದ ಮಾತ್ರ ನೋಡಬೇಕು ಎಂದರು.

Breaking News: ಕಮಲ ಹಿಡಿದ ಸುಮಲತಾ ಅಂಬರೀಶ್‌, ಆಪ್ತರ ಸಮ್ಮುಖದಲ್ಲಿ ಬೆಂಬಲವಷ್ಟೇ ಘೋಷಣೆ!

ಇನ್ನು ಬಿಜೆಪಿಗೆ ಸುಮಲತಾ ಬೆಂಬಲ ನೀಡಿರುವ ಕಾರಣ ಮಂಡ್ಯದ ರಾಜಕೀಯ ಚಿತ್ರಣ ಬದಲಾಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಮುಂದೆ ಖಂಡಿತ ಮಂಡ್ಯದ ರಾಜಕೀಯ ಚಿತ್ರಣ ಬದಲಾಗುತ್ತೆ. ಬದಲಾವಣೆಯ ಗಾಳಿ ನಿಮಗೆ ಮೇಲ್ನೋಟಕ್ಕೆ ಕಾಣದೆ ಇರಬಹುದು. ಆದರೆ ಒಳಗೊಳಗೆ ಸಾಕಷ್ಟು ಬದಲಾವಣೆ ಈಗಾಗಲೇ ಆಗಿದೆ. ಮಂಡ್ಯದಲ್ಲಿ ಇಂಥದ್ದೊಂದು ಬದಲಾವಣೆ ಆಗಬೇಕು ಎಂದು ಜನಸಾಮಾನ್ಯರು ಕೂಡ ಕಾಯುತ್ತಿದ್ದರು ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios