Maithili Thakur Gen Z MLA : ಬಿಹಾರದಲ್ಲಿ ಚುನಾವಣೆ ಕಾವು ತಣ್ಣಗಾಗಿದೆ. ಆದ್ರೆ ಶಾಸಕರ ಬಗ್ಗೆ ಚರ್ಚೆ ಶುರುವಾಗಿದೆ. ಎಲ್ಲರ ಮಧ್ಯೆ ಕಡಿಮೆ ವಯಸ್ಸಿನ ಜೆನ್ ಜಿ ಶಾಸಕಿ ಎಲ್ಲರ ಗಮನ ಸೆಳೆದಿದ್ದಾರೆ. ದಿಗ್ಗಜ ರಾಜಕಾರಣಿ ಮಣಿಸಿದ ಹೊಸ ಶಾಸಕಿ ಬಗ್ಗೆ ಮಾಹಿತಿ ಇಲ್ಲಿದೆ.
ಬಿಹಾರ ವಿಧಾನಸಭಾ ಚುನಾವಣೆ (Bihar assembly elections )ಯಲ್ಲಿ ಎನ್ಡಿಎ ಭರ್ಜರಿ ಗೆಲುವು ಸಾಧಿಸಿದೆ. ಈ ಬಾರಿ ಬಿಹಾರದ ವಿಧಾನಸಭೆ ಚುನಾವಣೆ ಸಾಕಷ್ಟು ವಿಶೇಷತೆಯನ್ನು ಹೊಂದಿತ್ತು. ಅನೇಕ ಕ್ಷೇತ್ರಗಳಲ್ಲಿ ಮತದಾರರು ಹೊಸಬರಿಗೆ ಅವಕಾಶ ನೀಡಿದ್ದಾರೆ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ. ಸದ್ಯ ಎಲ್ಲರ ಗಮನ ಸೆಳೆಯುತ್ತಿರೋರು ಜೆನ್ ಜಿ ಅಭ್ಯರ್ಥಿ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಮೊದಲ ಜನರೇಷನ್ ಝಡ್ ಶಾಸಕಿಯನ್ನು ಪಡೆದಿದೆ.
ಬಿಹಾರಿಗಳಿಗೆ ಸಿಕ್ಕ ಮೊದಲ ಜೆನ್ ಜಿ ಶಾಸಕಿ :
ಬಿಹಾರದ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಈಗ ಗೆದ್ದ, ಸೋತ ಅಭ್ಯರ್ಥಿಗಳ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿದೆ. ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಜನಪ್ರಿಯ ಜಾನಪದ ಗಾಯಕಿ ಮೈಥಿಲಿ ಠಾಕೂರ್ (Maithili Thakur). ಮೈಥಿಲಿ ಮೊದಲ ಜೆನ್ ಜಿ ಶಾಸಕಿಯಾಗಿ ಹೊರ ಹೊಮ್ಮಿದ್ದಾರೆ. 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ 25 ವರ್ಷದ ಮೈಥಿಲಿ ಠಾಕೂರ್, ಹಿರಿಯ ಆರ್ಜೆಡಿ ನಾಯಕ ವಿನೋದ್ ಮಿಶ್ರಾ ಅವರನ್ನು 11,700 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಬಿಹಾರದ ಅತ್ಯಂತ ಕಿರಿಯ ಶಾಸಕಿಯಾದ್ರು. 63 ವರ್ಷದ ವಿನೋದ್ ಮಿಶ್ರಾ ಅವರನ್ನು ಸೋಲಿಸುವ ಮೂಲಕ ಮೈಥಿಲಿ ಠಾಕೂರ್ ಇತಿಹಾಸ ಸೃಷ್ಟಿಸಿದ್ದಾರೆ. ಅಲಿನಗರದಲ್ಲಿ ಇದು ಬಿಜೆಪಿಯ ಮೊದಲ ಗೆಲುವು. ಜನ್ ಸೂರಜ್ ಪಕ್ಷದ ಬಿಪ್ಲಬ್ ಕುಮಾರ್ ಚೌಧರಿ ಕೂಡ ಕಣದಲ್ಲಿದ್ದರು. ಆದರೆ ಮುಖ್ಯ ಸ್ಪರ್ಧೆ ಮೈಥಿಲಿ ಮತ್ತು ವಿನೋದ್ ಮಿಶ್ರಾ ನಡುವೆ ಇತ್ತು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ 2 ವರ್ಷ ಪೂರೈಸಿದ ಬಿ.ವೈ.ವಿಜಯೇಂದ್ರ: ಹಿರಿಯ ನಾಯಕರಿಂದ ಸನ್ಮಾನ
ಮೈಥಿಲಿ ಠಾಕೂರ್ ಯಾರು ? :
ಮಧುಬನಿಯಲ್ಲಿ ಜನಿಸಿದ ಮೈಥಿಲಿ ಠಾಕೂರ್ ತನ್ನ ಬಾಲ್ಯವನ್ನು ನಜಾಫ್ಗಢದಲ್ಲಿ ಕಳೆದರು. ಮೈಥಿಲಿ ಬಾಲ್ಯದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರು. ರಿಯಾಲಿಟಿ ಶೋನಲ್ಲಿ ಸೋಲು ಕಂಡ ನಂತರ, ಅವರು ತಮ್ಮ ಸಹೋದರರೊಂದಿಗೆ ಭಾರತೀಯ ಶಾಸ್ತ್ರೀಯ ಮತ್ತು ಮೈಥಿಲಿ ಜಾನಪದ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. 2021 ರಲ್ಲಿ ಅವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಲಭಿಸಿದೆ.
ಮೈಥಿಲಿ ಠಾಕೂರ್ ಕುಟುಂಬ ಮೈಥಿಲಿ ಚುನಾವಣೆಗೆ ನಿಂತಾಗ ಸಾಕಷ್ಟು ಬೆಂಬಲ ನೀಡಿತ್ತು. ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದ್ದ ಮೈಥಿಲಿ, ಜಾನಪದ ಹಾಡುಗಳ ಮೂಲಕ ಮತ ಕೇಳಿದ್ದರು. ಮಿಥಿಲಾದ ಯುವಕರು ಅವರನ್ನು ಸಾಂಸ್ಕೃತಿಕ ಹೆಮ್ಮೆ ಮತ್ತು ಹೊಸ ನಾಯಕತ್ವದ ಸಂಕೇತವೆಂದು ಪರಿಗಣಿಸುತ್ತಾರೆ. ಅವರ ಗೆಲುವಿನ ನಂತರ ಪ್ರದೇಶದಾದ್ಯಂತ ಸಂಭ್ರಮಾಚರಣೆ ಮನೆ ಮಾಡಿದೆ.
ದೇಶದ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಸೀಮಿತ: ಸಚಿವ ಚಲುವರಾಯಸ್ವಾಮಿ ಟೀಕೆ
ಮೈಥಿಲಿ ಠಾಕೂರ್ ಕನಸೇನು? :
ಶಾಸಕಿಯಾಗಿರುವ ಮೈಥಿಲಿ, ಹುಡುಗಿಯರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಯುವಕರಿಗೆ ಹೆಚ್ಚಿನ ಉದ್ಯೋಗ ನೀಡುವ, ಶಾಲೆಗಳಲ್ಲಿ ಮಿಥಿಲಾ ಚಿತ್ರಕಲೆಯನ್ನು ಉತ್ತೇಜಿಸುವ ಮತ್ತು ಅಲಿನಗರದ ಹೆಸರನ್ನು ಸೀತಾನಗರ ಎಂದು ಬದಲಾಯಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಬಲವಾದ ಸಂಕಲ್ಪ ಮತ್ತು ಸಾರ್ವಜನಿಕ ಬೆಂಬಲವಿದ್ದರೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಅವರ ಗೆಲುವು ತೋರಿಸುತ್ತದೆ. ಬಿಹಾರ ರಾಜಕೀಯದಲ್ಲಿ ಹೊಸ ಪೀಳಿಗೆ ಹೊರಹೊಮ್ಮಿದೆ. ಮೈಥಿಲಿ ಠಾಕೂರ್ ಈ ಗೆಲುವು, ಯುವಕರಿಗೆ ಸ್ಫೂರ್ತಿ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ,ಬ್ಯುಸಿನೆಸ್ ಗೆ ಹೆಚ್ಚು ಒತ್ತು ನೀಡ್ತಿರುವ, ರಾಜಕೀಯದಿಂದ ದೂರ ಹೋಗ್ತಿರುವ ಜೆನ್ ಜಿಗಳಿಗೆ ಮೈಥಿಲಿ ಠಾಕೂರ್ ಹೊಸ ಪ್ರೇರಣೆಯಾಗಿದ್ದಾರೆ. ಇನ್ಮುಂದೆ ಯುವಕರು ಹೆಚ್ಚಿನ ಮಟ್ಟದಲ್ಲಿ ರಾಜಕೀಯಕ್ಕಿಳಿಯುವ ಸಾಧ್ಯತೆ ದಟ್ಟವಾಗ್ತಿದೆ.
