ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಸೀಮಿತಗೊಂಡಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ನಾಗಮಂಗಲ (ನ.16): ಈ ಹಿಂದೆ ಪ್ರಧಾನಿಯಾಗಿದ್ದವರು ದೇಶದ ಜನರ ಕಷ್ಟಗಳನ್ನು ಆಲಿಸಲು ಹಾಗೂ ಅಭಿವೃದ್ಧಿಗೆ ಸಮಯ ನೀಡುತ್ತಿದ್ದರು. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಸೀಮಿತಗೊಂಡಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಸ್ಥಾನ ಎಂಬುದನ್ನು ಈ ಹಿಂದೆ ಯಾರೂ ಕೂಡ ಚುನಾವಣೆ ಪ್ರಚಾರಕ್ಕೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಆ ಸ್ಥಾನವನ್ನು ಎಲ್ಲಾ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಮೀಸಲಿರಿಸಿರುವುದು ದೇಶದ ದುರಂತ ಎಂದರು.

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದ ಬಿಜೆಪಿಯವರು ಇಲ್ಲಿ ಯಾಕೆ ಸಂಭ್ರಮಾಚರಣೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಬಿಜೆಪಿ ಮತ್ತು ಜೆಡಿಎಸ್ ಸ್ವತಂತ್ರವಾಗಿ 113 ಸ್ಥಾನಗಳನ್ನು ಪಡೆದಿಲ್ಲ. ದೇಶದಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಬಿಜೆಪಿ ಏನಾಗಿದೆ ಎಂಬುದನ್ನು ಒಂದು ಬಾರಿ ನೆನಪು ಮಾಡಿಕೊಳ್ಳಲಿ ಎಂದು ತಿಳಿಸಿದರು.

ಬಿಹಾರ ರಾಜ್ಯದಲ್ಲಿ ನಿತೀಶ್‌ಕುಮಾರ್ ಜೊತೆ ಸೇರಿಕೊಂಡು ಗೆದ್ದು ಪಟಾಕಿ ಹೊಡೆಯುವುದಲ್ಲ. ಕರ್ನಾಟಕದಲ್ಲಿ 2028ಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದು ಪಟಾಕಿ ಹೊಡೆಯಲಿ. ಆದರೆ, ರಾಜ್ಯದಲ್ಲಿ 2028ಕ್ಕೂ ಕಾಂಗ್ರೆಸ್ ಸರ್ಕಾರ ಬರುವುದು ನೂರಕ್ಕೆ ನೂರು ಸತ್ಯ ಎಂದು ಭವಿಷ್ಯ ನುಡಿದರು. ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರಿಸ್ಥಿತಿ ಚೆನ್ನಾಗಿಲ್ಲ. ಹಾಗಾಗಿ ಬಿಜೆಪಿಯವರು ನಿತೀಶ್‌ಕುಮಾರ್ ಜತೆಗೂಡಿ ಗೆದ್ದಿದ್ದಾರೆ.

ದಬ್ಬಾಳಿಕೆಯ ಚುನಾವಣೆ

ಮತಗಳ್ಳತನ ಎಂಬ ಸತ್ಯವನ್ನು ನಾವು ದೇಶದ ಜನತೆ ಮುಂದೆ ಹೇಳಿದ್ದೇವೆ. ಮತಗಳ್ಳತನದ ವಿರುದ್ಧ ಪ್ರತಿಭಟನೆ ನಡೆದ ತಕ್ಷಣ ಫಲಿತಾಂಶ ನಮ್ಮ ಪರ ಬರುತ್ತದೆ ಎಂಬ ಭ್ರಮೆ ನಮಗಿಲ್ಲ ಎಂದರು. ದೇಶದಲ್ಲಿ ಬಿಜೆಪಿ ದಬ್ಬಾಳಿಕೆ ನಡೆಸಿ ಚುನಾವಣೆ ಮಾಡುವುದರಲ್ಲಿ ಪರಿಣಿತರು. ಆ ರೀತಿಯಲ್ಲಿ ಮ್ಯಾಜಿಕ್ ನಂಬರ್ ಸಮೀಪ ಸ್ಥಾನಗಳಿರುವಂತಹ ರಾಜ್ಯಗಳಲ್ಲಿ ಅಂತಹ ದಬ್ಬಾಳಿಕೆಯ ಚುನಾವಣೆ ನಡೆಸುತ್ತಾರೆ. ಪ್ರಧಾನ ಮಂತ್ರಿಗಳಿಗೆ ದೇಶದ ಅಭಿವೃದ್ಧಿ ಮತ್ತು ಜನರ ಬದುಕು ಮುಖ್ಯವಲ್ಲ. ಅವರಿಗೆ ಚುನಾವಣೆಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.