ಬೆಂಗಳೂರು[ಅ.25]:  ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸದೇ ಇರುವುದು ಕರ್ನಾಟಕದಲ್ಲಿನ ಅನರ್ಹ ಶಾಸಕರ ಪಾಳೆಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಮುಂಬರುವ ಉಪಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯನ್ನೇರಿ ಸುಲಭವಾಗಿ ಬಿಜೆಪಿಯಿಂದ ಗೆದ್ದು ಬರಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಅನರ್ಹ ಶಾಸಕರಿಗೆ ಈ ಫಲಿತಾಂಶ ತುಸು ಚಿಂತೆ ಉಂಟುಮಾಡಿದೆ.

ತಮ್ಮ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿನ ನಾಯಕತ್ವದ ವಿರುದ್ಧ ಸಡ್ಡು ಹೊಡೆದು ಹೊರಬಂದಾಯ್ತು. ಅದಕ್ಕಾಗಿ ಶಾಸಕತ್ವವನ್ನೂ ಕಳೆದುಕೊಂಡಾಯ್ತು. ಆದರೆ, ಕಳೆದ ಮೂರು ತಿಂಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೆ ಈಗ ಒಂದು ತಾರ್ಕಿಕ ಅಂತ್ಯ ಕಾಣುವ ಸಂದರ್ಭ ಬಂದೊದಗಿದೆ. ಇಷ್ಟೆಲ್ಲ ಕಷ್ಟನಷ್ಟಅನುಭವಿಸಿದರೂ ಮುಂದೆ ಒಳ್ಳೆಯದಾಗಲಿದೆ. ಸುಲಭವಾಗಿ ಬಿಜೆಪಿಯಿಂದ ಗೆದ್ದು ಬರಬಹುದು ಎಂಬ ಕನಸು ಕಾಣುತ್ತಿದ್ದ ಅನರ್ಹ ಶಾಸಕರಿಗೆ ಗುರುವಾರ ಹೊರಬಿದ್ದ ಎರಡು ರಾಜ್ಯಗಳ ಫಲಿತಾಂಶ ನಿರಾಸೆ ಮೂಡಿಸಿದ್ದರಲ್ಲಿ ಅನುಮಾನವೇ ಇಲ್ಲ.

ಮಹಾರಾಷ್ಟ್ರ-ಹರಿಯಾಣ ಫೈನಲ್ ಫಲಿತಾಂಶ, ಯಾರಿಗೆ ಎಷ್ಟು?...

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಅದೇ ಪಕ್ಷದ ಸರ್ಕಾರವಿದೆ. ಜನರು ಸುಲಭವಾಗಿ ತಮ್ಮನ್ನು ಮತ್ತೆ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನು ಈ ಶಾಸಕರು ಬಲವಾಗಿ ಹೊಂದಿದ್ದರು. ಆದರೆ, ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದು ಚುನಾವಣೆ ಎದುರಿಸಿದರೂ ನಿರೀಕ್ಷಿತ ಮಟ್ಟತಲುಪಲು ಸಾಧ್ಯವಾಗಲಿಲ್ಲ. ಅದು ಆಯಾ ರಾಜ್ಯ ಸರ್ಕಾರಗಳ ವೈಫಲ್ಯವೋ ಅಥವಾ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಆಡಳಿತದ ವಿರುದ್ಧದ ಪರಿಣಾಮವೋ ಎಂಬುದನ್ನು ವಿಶ್ಲೇಷಿಸುವಲ್ಲಿ ಅನರ್ಹ ಶಾಸಕರು ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಒಂದಂತೂ ಸತ್ಯ. ಅನರ್ಹ ಶಾಸಕರು ಮೊದಲು ಹಾಕಿದ್ದ ಲೆಕ್ಕಾಚಾರದಂತೆ ಎಲ್ಲವೂ ನಡೆಯುವುದು ಅನುಮಾನ ಎಂಬ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಮೊದಲು ನ್ಯಾಯಾಲಯದಲ್ಲಿ ಜಯ ಗಳಿಸಬೇಕಾಗಿದೆ. ನಂತರ ಉಪಚುನಾವಣೆ ಹೊತ್ತಿಗೆ ಪರಿಸ್ಥಿತಿ ಅವರ ಪರವಾಗಿ ತಿರುಗಿದರೆ ಗೆಲುವು ಸುಲಭವಾಗಿ ದಕ್ಕಲಿದೆ. ಇಲ್ಲದಿದ್ದರೆ ಅವರ ರಾಜಕೀಯ ಭವಿಷ್ಯವೇ ಅತಂತ್ರವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.