ಅಮಿತ್ ಶಾ ರೊಡ್ ಷೋ ಅರ್ಧಕ್ಕೆ ಮೊಟಕು! ನಿರಾಸೆಗೊಂಡ ಬಿಜೆಪಿ ಕಾರ್ಯಕರ್ತರು
ಮಡಿಕೇರಿಯಲ್ಲಿ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿಗದಿತ ದೂರಕ್ಕಿಂತ ಮೊದಲೇ ರೋಡ್ ಷೋ ವಾಹನವನ್ನು ಇಳಿದು ಬೇರೆಡೆ ತೆರಳಿದರು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.29): ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗು ಜಿಲ್ಲೆಯಲ್ಲಿ ಮತ್ತೆ ಕಮಲವನ್ನು ಅರಳಿಸಲು ಬಿಜೆಪಿ ಮುಂದಾಗಿದೆ. ಹೀಗಾಗಿಯೇ ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ, ಶನಿವಾರ ಜಿಲ್ಲೆಯ ತನ್ನ ಇಬ್ಬರು ಅಭ್ಯರ್ಥಿಗಳ ಪರವಾಗಿ ರೋಡ್ ಶೋ ಆರಂಭಿಸಿದ್ದರು. ರೋಡ್ ಶೋಗೆ ನಿರೀಕ್ಷಿತ ಜನರು ಸೇರದ ಹಿನ್ನೆಲೆಯಲ್ಲಿ ಅಮಿತ್ ಶಾ ಸಿಟ್ಟು ಮಾಡಿಕೊಂಡು ರೋಡ್ ಶೋವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಟು ಹೋದರು ಎಂದು ಬಿಜೆಪಿ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶನಿವಾರ ಬಿಜೆಪಿಯ ಮಡಿಕೇರಿ ಅಭ್ಯರ್ಥಿ ಅಪ್ಪಚ್ಚು ರಂಜನ್, ವಿರಾಜಪೇಟೆ ಅಭ್ಯರ್ಥಿ ಕೆ.ಜಿ. ಬೋಪಯ್ಯ ಪರವಾಗಿ ರೋಡ್ ಶೋ ಶುರು ಮಾಡಿದರು. ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಲಾಯಿತು. ರೋಡ್ ಶೋ 500 ಮೀಟರ್ ಸಾಗುವಷ್ಟರಲ್ಲಿ ಜನರ ಸಂಖ್ಯೆ ಕಡಿಮೆ ಇದೆ ಎನ್ನುವುದನ್ನು ಚಾಣಕ್ಯ ಗಮನಿಸಿರಬಹುದು. ಹೀಗಾಗಿ ಖಾಸಗಿ ಹಳೇ ಬಸ್ಸು ನಿಲ್ದಾಣದ ಬಳಿಗೆ ಮೆರವಣಿಗೆ ಬರುವಷ್ಟರಲ್ಲಿ ಅಮಿತ್ ಶಾ ಅವರು ತೆರದ ವಾಹನದ ಮೇಲೆ ಇಲ್ಲಿಗೆ ಮೆರವಣಿಗೆ ಸಾಕು ಎಂದು ಪಕ್ಕದಲ್ಲಿಯೇ ಇದ್ದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲುಗೆ ಸೂಚಿಸಿದ್ದಾರೆ.
Bengaluru: ಮದುಮಗನನ್ನು ತಾಳಿ ಕಟ್ಟೋಕೆ ಹೋಗಲು ಬಿಡದ ಪೊಲೀಸರು!
ಆದರೆ ಇನ್ನು ಸ್ಪಲ್ಪ ಮುಂದೆಯಷ್ಟೇ ಅಲ್ಲಿಯವರೆಗೆ ಹೋಗೋಣ ಎಂದು ನಳೀನ್ ಕುಮಾರ್ ಕಟೀಲು ಅವರು ಹೇಳಿದ್ದಾರೆ. ಆದರೆ ಇಲ್ಲಿಯೇ ಸಾಕು ನಿಲ್ಲಿಸಿ ಎಂದು ಸಿಟ್ಟು ಮಾಡಿಕೊಂಡ ಅಮಿತ್ ಶಾ ರೋಡ್ ಶೋ ನಿಗದಿಯಂತೆ ಜನರಲ್ ತಿಮ್ಮಯ್ಯ ವೃತ್ತಕ್ಕೆ ತಲುಪುವ ಮೊದಲೇ ಅಂದರೆ ಖಾಸಗಿ ಹಳೇ ಬಸ್ಸು ನಿಲ್ದಾಣದ ಬಳಿಯೇ ಇಳಿದು ಹೊರಟೇ ಹೋದರು. ಬೆಳಿಗ್ಗೆ 10.30 ಕ್ಕೆ ಅಮಿತ್ ಶಾ ಅವರ ಬೃಹತ್ ರೋಡ್ ಶೋ ಆಯೋಜಿಸಲಾಗಿತ್ತು. ಆದರೆ ದಾವಣಗೆರೆಯಿಂದ ಅಮಿತ್ ಶಾ ಅವರು ಆಗಮಿಸಿದ್ದು, ಎರಡು ಗಂಟೆ ತಡವಾಯಿತು. ಇದರಿಂದಾಗಿ ಮಧ್ಯಾಹ್ನ 12.45 ಕ್ಕೆ ರೋಡ್ ಶೋ ಆರಂಭವಾಯಿತು.
ಮಡಿಕೇರಿಯಲ್ಲಿ ಬೆಳಗ್ಗೆ 9.30ರಿಂದಲೇ ಅಮಿತ್ ಶಾ ರೋಡ್ ಶೋಗಾಗಿ ಬಂದಿದ್ದ ಸಾಕಷ್ಟು ಜನರು ವಾಪಸ್ಸ್ ಹೋಗಿದ್ದರು. ಹೀಗಾಗಿ, ರೋಡ್ ಶೋನಲ್ಲಿ ಸುಮಾರು ಎರಡು ಸಾವಿರದಷ್ಟು ಜನರಷ್ಟೇ ಇದ್ದರು. ಇದರಿಂದ ಸಿಟ್ಟು ಮಾಡಿಕೊಂಡ ಅಮಿತ್ ಶಾ ರೋಡ್ ಶೋವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಖಾಸಗಿ ಹಳೇ ಬಸ್ಸು ನಿಲ್ದಾಣದಿಂದ ಇಳಿದು ಉಡುಪಿ ಜಿಲ್ಲೆಯ ಕಾಪುಗೆ ಪ್ರಯಾಣ ಬೆಳೆಸಿದರು. ಇದರಿಂದ ರೋಡ್ ಶೋಗೂ ಮೊದಲೇ ಜನರಲ್ ತಿಮ್ಮಯ್ಯ ವೃತ್ತಕ್ಕೆ ಹೋಗಿ ಕಾದಿದ್ದ ನೂರಾರು ಜನರು ನಿರಾಸೆಗೊಂಡರು.
ಇದಕ್ಕೂ ಮುನ್ನ ಮಾತನಾಡಿರುವ ಅಮಿತ್ ಶಾ ಅವರು ಕೊಡಗಿನಲ್ಲಿ ನಮಗೆ ಫೈಟ್ ಕೊಡುವ ವಿರೋಧಿಗಳೇ ಇಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಅವರು ಆಗಮಿಸುವುದಕ್ಕೆ ಮುನ್ನವೇ ಮಾತನಾಡಿದ ಅಪ್ಪಚ್ಚು ರಂಜನ್ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಕೆಲಸ ಮಾಡಿವೆ. ಹೀಗಾಗಿ ಮತ್ತೊಮ್ಮೆ ತಮಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಕುಸಿದು ಬಿದ್ದ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ! ಬಿಸಿಲಿನ ತಾಪ ಲೆಕ್ಕಕ್ಕೇ ಇಲ್ಲ!
ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎನ್ನುತ್ತಿದ್ದಾರೆ. ಆದರೆ ನಾವು ಮಾಡಿರುವ ನಯಸ್ಸಾದ ರಸ್ತೆಗಳಲ್ಲಿ ಓಡಾಡುತ್ತಿರುವುದು ಅವರಿಗೆ ಗೊತ್ತಾಗುತ್ತಿಲ್ಲವೆ. ಸಿದ್ದರಾಮಯ್ಯ ಅವರ ಸರ್ಕಾರದ ಸಂದರ್ಭದಲ್ಲಿ ಕೊಡಗಿಗೆ ಏನು ಮಾಡಿದರು ಎನ್ನುವುದನ್ನು ಹೇಳಲಿ. ಅವರು ಮತ್ತೆ ಅಧಿಕಾರಕ್ಕೆ ಬಂದರೆ, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ಆಚರಣೆಗೆ ತರುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಅಂತಹವರಿಗೆ ಓಟು ಹಾಕಬೇಕಾ ಎಂದು ಬೋಪಯ್ಯ ಪ್ರಶ್ನಿಸಿದರು.