ವಿಧಾನಸಭೆ ಚುನಾವಣೆಗೂ ಮುನ್ನ ಭರ್ಜರಿ ಘೋಷಣೆ, ಲಾಡ್ಲಿ ಬೆಹೆನಾ ಯೋಜನೆ ಮೊತ್ತ ಮಾಸಿಕ .1250ಕ್ಕೆ ಏರಿಕೆ, ಶ್ರಾವಣ ಮಾಸದಲ್ಲಿ 450 ರು.ಗೆ ಎಲ್‌ಪಿಜಿ ಸಿಲಿಂಡರ್, ಸರ್ಕಾರಿ ನೌಕರಿಯಲ್ಲಿ ಮಹಿಳಾ ಮೀಸಲು 35%ಗೆ ಏರಿಕೆ.
ಭೋಪಾಲ(ಆ.28): ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮತದಾರರಿಗೆ ಉಚಿತ ಕೊಡುಗೆಗಳನ್ನು ಘೋಷಿಸುವ ಪೈಪೋಟಿ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಭಾನುವಾರ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.
ಈಗ ನಡೆಯುತ್ತಿರುವ ಶ್ರಾವಣ ಮಾಸದ ಪ್ರಯುಕ್ತ ‘ಲಾಡ್ಲಿ ಬೆಹೆನಾ’ ಯೋಜನೆಯಡಿ ಮಹಿಳೆಯರಿಗೆ 1250 ರು. ನೀಡಲಾಗುವುದು (ಈ ಹಿಂದೆ ಮಾಸಿಕ 1000 ರು. ಇತ್ತು). ಅಕ್ಟೋಬರ್ ತಿಂಗಳಿನಿಂದ ಇದನ್ನು ಶಾಶ್ವತವಾಗಿ 1250 ರು.ಗೆ ಏರಿಸಲಾಗುವುದು. ಶ್ರಾವಣ ಮಾಸದಲ್ಲಿ 450 ರು.ಗೆ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು. ಮುಂದೆ ಇದೇ ದರಕ್ಕೆ ಸಿಲಿಂಡರ್ ನೀಡಲು ಶಾಶ್ವತ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗಿರುವ ಮೀಸಲಾತಿಯನ್ನು ಈಗಿನ ಶೇ.30ರಿಂದ ಶೇ.35ಕ್ಕೆ ಏರಿಸಲಾಗುವುದು ಎಂದು ಶಿವರಾಜ ಸಿಂಗ್ ಪ್ರಕಟಿಸಿದ್ದಾರೆ.
ಮಧ್ಯಪ್ರದೇಶ ಗೆದ್ದರೆ ರೈತರ ಸಾಲಮನ್ನಾ, ಗ್ಯಾರಂಟಿ ಸ್ಕೀಂ: ಖರ್ಗೆ ಘೋಷಣೆ
ಕಾಂಗ್ರೆಸ್ ಪಕ್ಷ ಈಗಾಗಲೇ ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ತಾನು ಗೆದ್ದರೆ ಹಲವಾರು ಉಚಿತ ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಿಸಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಸರ್ಕಾರ ಈಗಿನಿಂದಲೇ ಹಲವು ಕೊಡುಗೆಗಳನ್ನು ಘೋಷಿಸಿ ಜಾರಿಗೊಳಿಸುತ್ತಿದೆ. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ 14 ಲಕ್ಷ ಹೊಸ ಮತದಾರರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 7.07 ಲಕ್ಷ ಮಹಿಳೆಯರಿದ್ದಾರೆ.
