ಕರ್ನಾಟಕದಂತೆ ಹಿಂದಿ ರಾಜ್ಯದಲ್ಲೂ ಉಚಿತಗಳ ಭರವಸೆ, ಮಹಿಳೆಯರಿಗೆ 1500, ಎಲ್ಪಿಜಿಗೆ 500, ವಿದ್ಯುತ್‌ ಉಚಿತ,  ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದರೆ 500 ರು.ಗೆ ಎಲ್ಪಿಜಿ ಸಿಲಿಂಡರ್‌, ರೈತರ ಕೃಷಿ ಸಾಲ ಮನ್ನಾ, ಸಾಮಾಜಿಕ ಸಬಲೀಕರಣಕ್ಕಾಗಿ ಜಾತಿ ಗಣತಿ, ಮನೆಯ ಯಜಮಾನತಿಗೆ ಪ್ರತಿ ತಿಂಗಳು 1500 ರುಪಾಯಿ ಸಹಾಯಧನ, ಎಲ್ಲ ಮನೆಗಳಿಗೂ ಪ್ರತಿ ತಿಂಗಳು 100 ಯುನಿಟ್‌ವರೆಗೆ ವಿದ್ಯುತ್‌ ಉಚಿತ, ರಾಜ್ಯದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿ, ಸಂತ ರವಿದಾಸರ ಹೆಸರಿನಲ್ಲಿ ಸಾಗರ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ. 

ಸಾಗರ್‌ (ಮಧ್ಯಪ್ರದೇಶ)(ಆ.23): ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಉಚಿತ ಗ್ಯಾರಂಟಿ ಯೋಜನೆ ಘೋಷಣೆ ಮುಂದುವರೆಸಿರುವ ಕಾಂಗ್ರೆಸ್‌, ಇದೀಗ ಮಧ್ಯಪ್ರದೇಶದಲ್ಲೂ ಭರ್ಜರಿ ಕೊಡುಗೆ ಘೋಷಿಸಿದೆ. ವರ್ಷಾಂತ್ಯಕ್ಕೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಬುಂದೇಲ್‌ಖಂಡ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರೈತರು, ಮಹಿಳೆಯರು, ಹಿಂದುಳಿದ ಸಮುದಾಯಗಳನ್ನು ಸೆಳೆಯುವ ಹಲವು ಉಚಿತ ಯೋಜನೆಗಳನ್ನು ಘೋಷಿಸಿದ್ದಾರೆ.

ಗ್ಯಾರಂಟಿ ಘೋಷಣೆಗಳು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ತಂದುಕೊಟ್ಟಬೆನ್ನಲ್ಲೇ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲೂ ಇದೇ ತಂತ್ರ ಬಳಸಲು ಕಾಂಗ್ರೆಸ್‌ ಮುಂದಾಗಿದೆ.

ಲೋಕಸಭಾ ಸಮರ: ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಎಲ್ಲಿಂದ ಸ್ಪರ್ಧಿಸುತ್ತಾರೆ?

ಬುಂದೇಲ್‌ಖಂಡದ ಸಾಗರ್‌ನಲ್ಲಿ ಸಾರ್ವಜನಿಕ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಖರ್ಗೆ, ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದರೆ ಜಾತಿ ಗಣತಿ ನಡೆಸಲಾಗುವುದು, ರೈತರ ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದರು. ಅಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ಪ್ರತಿ ಮಹಿಳೆಗೂ ತಿಂಗಳಿಗೆ 1500 ರು. ಸಹಾಯಧನ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಅನಿವಾರ್ಯವಾಗಿರುವ ಗ್ಯಾಸ್‌ ಸಿಲಿಂಡರ್‌ಗಳನ್ನು 500 ರು.ಗೆ ನೀಡಲಾಗುವುದು. 100 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಸಹ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಅಲ್ಲದೇ ಸರ್ಕಾರಿ ನೌಕರರ ಕ್ಷೇಮಕ್ಕಾಗಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಲಾಗುವುದು. ಸಂತ ರವಿದಾಸರ ಹೆಸರಲ್ಲಿ ಸಾಗರದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗುವುದು ಎಂದು ಅವರು ಘೋಷಿಸಿದ್ದಾರೆ.