ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ: ಶಿವರಾಮೇಗೌಡ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಶಾಸಕ ಸುರೇಶ್‌ಗೌಡ, ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಇಬ್ಬರು ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗದೆ ಪಕ್ಷೇತರರಾಗಿ ಕಣಕ್ಕಿಳಿಯಲಿ. 

lr shivaramegowda challenge to suresh gowda and n chaluvaraya swamy gvd

ಮದ್ದೂರು (ನ.17): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಶಾಸಕ ಸುರೇಶ್‌ಗೌಡ, ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಇಬ್ಬರು ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗದೆ ಪಕ್ಷೇತರರಾಗಿ ಕಣಕ್ಕಿಳಿಯಲಿ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲದೆ ಹೋದರೆ ಶಿರಚ್ಛೇದನ ಮಾಡಿಕೊಳ್ಳುವುದಾಗಿ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಸವಾಲು ಹಾಕಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಹೋಬಳಿ ಕೆ.ಮಲ್ಲಿಗೆರೆ, ಬೋಳಾರೆ, ತರಮನಕಟ್ಟೆ, ಜೋಗಿ ಕೊಪ್ಪಲು, ಗಟ್ಟಹಳ್ಳಿ, ಕೌಡ್ಲೆ ಹಾಗೂ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಸಿ ಮಾತನಾಡಿದರು.

ಈ ಹಿಂದೆ ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ ಆಗಿತ್ತು ನಿಜ. ಆದರೆ, ಕೆಲವರ ದುರ್ವರ್ತನೆಯಿಂದ ಜೆಡಿಎಸ್‌ ಭದ್ರಕೋಟೆ ಸ್ವಲ್ಪ ಸ್ವಲ್ಪ ಕುಸಿಯುತ್ತಿದೆ. ನನಗೆ ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಬಗ್ಗೆ ಅಪಾರ ಗೌರವ ಇದೆ. ಅವರ ಬಗ್ಗೆ ನಾನು ಹಗರುವಾಗಿ ಮಾತನಾಡುವುದಿಲ್ಲ ಎಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸುರೇಶ್‌ಗೌಡರಿಗೆ ಜೆಡಿಎಸ್‌ ಟಿಕೆಟ್‌ ನೀಡಿದರೇ ಸೋಲು ಕಟ್ಟಿಟ್ಟಬುತ್ತಿ. ಆಗಾಗಿ ಜೆಡಿಎಸ್‌ ಪಕ್ಷ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೇ ಮಾತ್ರ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.

Karnataka Politics: ನಂಬಿದವರು ಕೈಬಿಟ್ಟಾರು: ಸಿದ್ದುಗೆ ಮುನಿಯಪ್ಪ ಎಚ್ಚರಿಕೆ

ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕ್ಷೇತ್ರದಲ್ಲಿ ನಾಲ್ಕೈದು ರಿಂಗ್‌ ಮಾಸ್ಟರ್‌ಗಳ ಮೂಲಕ ಶಾಸಕ ಸುರೇಶ್‌ಗೌಡ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರಿಂದ ಕ್ಷೇತ್ರದ ಜನರು ಬೇಸರಗೊಂಡು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು. ಈಗಾಗಲೇ ಬಿಜೆಪಿ ನನಗೆ ಟಿಕೆಟ್‌ ನೀಡಲು ಸಿದ್ಧವಿದೆ. ಆದರೆ, ಬಿಜೆಪಿಗೆ ಹೋಗಲು ಇಷ್ಟವಿಲ್ಲದ ಕಾರಣ ನಿರಾಕರಿಸಿದ್ದೇನೆ. ಅಷ್ಟೇ ಅಲ್ಲದೇ, ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ಕೂಡ ಟಿಕೆಟ್‌ ನೀಡುವ ಭರವಸೆ ಇದೆ. ಆದರೆ, ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮುಖಂಡರಾದ ಮಂಜೇಗೌಡ, ಚೇತನ್‌ಗೌಡ, ರಮೇಶ್‌, ಹರೀಶ್‌, ಪುಟ್ಟಸ್ವಾಮಿ, ರಮೇಶ್‌ ಭಟ್ರು, ನಾಗರಾಜ್‌, ಮಧು, ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಇದ್ದರು.

ಶಿವರಾಮೇಗೌಡ, ಸಮಾಜ ಸೇವ ಫೈಟರ್‌ ರವಿ ಪರಸ್ಪರ ಚರ್ಚೆ: ನಾಗಮಂಗಲ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹಾಗೂ ಸಮಾಜ ಸೇವಕ ಫೈಟರ್‌ ರವಿ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಪರಸ್ಪರ ಭೇಟಿಯಾಗಿರುವುದು ಸಾಕಷ್ಟುಕುತೂಹಲ ಮೂಡಿಸಿದೆ. ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ವೈಶಾಲಿ ಹೋಟೆಲ್‌ನಲ್ಲಿ ಎಲ್.ಆರ್‌.ಶಿವರಾಮೇಗೌಡ ಮತ್ತು ಫೈಟರ್‌ ರವಿ ಇಬ್ಬರೂ ಒಟ್ಟಿಗೆ ಕುಳಿತು 2023ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

Mysuru Bus Shelter: ಗುಂಬಜ್‌ ಬಸ್‌ ಶೆಲ್ಟರ್‌ ತೆರವಿಗೆ ನೋಟಿಸ್‌, ಪೊಲೀಸ್‌ ಭದ್ರತೆ

ಹಾಲಿ ಶಾಸಕ ಸುರೇಶ್‌ಗೌಡರನ್ನು ಶತಾಯಗತಾಯ ಸೋಲಿಸಲು ಹಟಕ್ಕೆ ಬಿದ್ದಿರುವ ಈ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಹೋಟೆಲ್‌ನಿಂದ ಜೊತೆಯಾಗಿ ಹೊರ ಬರುತ್ತಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಾತುಕತೆ ವೇಳೆ ಫೈಟರ್‌ ರವಿ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ ಎಲ್.ಆರ್‌.ಶಿವರಾಮೇಗೌಡರು ಸಮಾಜ ಸೇವೆ ಮೂಲಕ ನೀವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಈವರೆಗೂ ಯಾವೊಬ್ಬ ರಾಜಕಾರಣಿಯೂ ಸಹ ಮಾಡಿಲ್ಲ. ನಿಮ್ಮ ಅತ್ಯದ್ಭುತ ಸೇವೆಗಳು ಎಂದೆಂದಿಗೂ ಶಾಶ್ವತವಾಗಿ ಉಳಿಯುತ್ತವೆ. ಈ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.

Latest Videos
Follow Us:
Download App:
  • android
  • ios