ಆಟೋ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ಪೂರೈಕೆಯಲ್ಲಿ ಕೇಂದ್ರ ಕೆಲ ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕರ್ನಾಟಕದ ಬಗ್ಗೆ ತಾರತಮ್ಯ ಅನುಸರಿಸುತ್ತಿದೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಏ.07): ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ ಉಲ್ಭಣಗೊಂಡಿದೆ. ಎಲ್‌ಪಿಜಿ ಗ್ಯಾಸ್‌ ಸಿಗದೆ ಆಟೋ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಕೆಲ ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕರ್ನಾಟಕದ ಬಗ್ಗೆ ತಾರತಮ್ಯ ಅನುಸರಿಸುತ್ತಿದೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರದೀಪ್‌ ಸಿಂಗ್‌ ಪುರಿ ಅವರಿಗೆ ಪತ್ರ ಬರೆದಿರುವ ಸಚಿವರು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಾವಿರಾರು ಆಟೋ ರಿಕ್ಷಾಗಳು ಎಲ್‌ಪಿಜಿ ಸಿಗದೆ ಸಮಸ್ಯೆ ಅನುಭವಿಸುತ್ತಿವೆ. ಬಹುತೇಕ ಆಟೋಗಳು ಖಾಸಗಿ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು (ಎಎಲ್‌ಡಿಎಸ್‌) ಆವಲಂಬಿಸಿವೆ. ಪ್ರಸ್ತುತ ಎಲ್‌ಪಿಜಿ ಪೂರೈಕೆ ಕೊರತೆಯಿಂದ ಎಲ್‌ಪಿಜಿ ಸಿಗದೆ ಆಟೋಚಾಲಕರು ಗಂಭೀರ ಸಮಸ್ಯೆ ಸಿಲುಕಿಕೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿಯವರಿಂದ ಹೆಚ್ಚಿನ ಬೆಲೆ

ಸರ್ಕಾರಿ ಓಎಂಸಿಗಳ ವಾಣಿಜ್ಯ ಹಂಚಿಕೆಗಳಲ್ಲಿ ಎಲ್‌ಪಿಜಿ ಆಟೋಗಳ ಅವಶ್ಯಕತೆ ಪೂರೈಸಲು ನಾವು ಯತ್ನಿಸುತ್ತಿದ್ದೇವೆ. ಆದರೂ ಸಮರ್ಪಕವಾಗಿ ಗ್ಯಾಸ್‌ ಪೂರೈಕೆಯಾಗದೆ ಅನೇಕ ಆಟೋ ರಿಕ್ಷಾ ಚಾಲಕರು ಖಾಸಗಿ ಎಎಲ್‌ಡಿಎಸ್‌ಗಳ ಮೇಲೆ ಆವಲಂಬಿತರಾಗಿದ್ದಾರೆ. ಸರ್ಕಾರಿ ಓಎಂಸಿಗಳು(ಆಯಿಲ್‌ ಮಾರ್ಕೆಟಿಂಗ್‌ ಕಂಪನಿ) ನಿಯಂತ್ರಿತ ಬೆಲೆಗಳನ್ನು ಕಾಯ್ದುಕೊಳ್ಳುತ್ತಿದ್ದರೂ ಕೆಲ ಖಾಸಗಿ ಎಎಲ್‌ಡಿಎಸ್‌ಗಳು ಪ್ರಸ್ತುತ ಇರುವ ಸ್ಥಿತಿಯಲ್ಲಿ ಲಾಭ ಪಡೆದುಕೊಳ್ಳಲು ಹೆಚ್ಚಿನ ಬೆಲೆ ವಿಧಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದು ಆಟೋ ಚಾಲಕರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪರೋಕ್ಷವಾಗಿ ಗ್ರಾಹಕರು ಮತ್ತು ಸಾರ್ವಜನಿಕರು, ಬಡಜನರ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಆಟೋ ಚಾಲಕರ ಜೀವನೋಪಾಯ ರಕ್ಷಿಸಲು ಮತ್ತು ಸಾರ್ವಜನಿಕರ ಮೇಲೆ ಹೇರಲಾಗುತ್ತಿರುವ ಹೊರೆ ಕಡಿಮೆ ಮಾಡಲು ಸರ್ಕಾರಿ ಓಎಂಸಿಗಳು ವಿಧಿಸುವ ಬೆಲೆಯಲ್ಲಿ ಖಾಸಗಿ ಎಎಲ್‌ಡಿಎಸ್‌ ಆಟೋ ರಿಕ್ಷಾಗಳಿಗೂ ಎಲ್‌ಪಿಸಿ ಪೂರೈಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.