Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಒಂದು ನಿರರ್ಥಕ ವರ್ಷ, ಅತಿ ಕೆಟ್ಟ ಆಡಳಿತ - ಅರ್ ಅಶೋಕ್

ಒಂದೇ ವರ್ಷದಲ್ಲಿ ಆರ್ಥಿಕತೆಯನ್ನು ಹಾಳುಗೆಡವಿ ಜನರ ಜೀವನವನ್ನು ಚಿಂತೆಯ ಪಾತಾಳಕ್ಕೆ ತಳ್ಳಿರುವುದೇ ನುಡಿದಂತೆ ನಡೆದ ಈ ಸರ್ಕಾರದ ಸಾಧನೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾ ಕಾಲಹರಣ ಮಾಡಿ ಒಂದು ವರ್ಷ ಕಳೆದಿದೆ.

LoP R Ashok spark  about congress government completes 1yrs today rav
Author
First Published May 20, 2024, 11:21 AM IST

ಆರ್ ಅಶೋಕ್, ವಿಧಾನಸಭೆಯ ಪ್ರತಿಪಕ್ಷ ನಾಯಕ

ಗ್ಯಾರಂಟಿಗಳ ಮೋಡಿಯಿಂದಾಗಿ ಕಾಂಗ್ರೆಸ್‌ಗೆ ಬಹುಮತ ನೀಡಿದ ಕರ್ನಾಟಕದ ಜನರು, ಇನ್ನು ಐದು ವರ್ಷ ತಮಗೆ ಸುಭದ್ರ, ಸುರಕ್ಷಿತ, ಕ್ರಿಯಾಶೀಲ ಆಡಳಿತ ದೊರೆಯುವುದೆಂದು ಭಾವಿಸಿದ್ದರು. ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕಿತ್ತಾಟದಿಂದ ಆರಂಭವಾದ ಆಡಳಿತ ಯಂತ್ರದ ಕುಸಿತ, ಈಗ ರೈತರ ಕೈಗೆ ಪರಿಹಾರದ ಹಣವನ್ನೂ ತಲುಪಿಸಲಾಗದ ಮಟ್ಟಕ್ಕೆ ಬಂದಿದೆ.

ಕೇವಲ ಒಂದು ವರ್ಷದಲ್ಲೇ ಅಭಿವೃದ್ಧಿ ಶೂನ್ಯವಾಗಿ, ಖಜಾನೆಯಲ್ಲಿ ಹಣವಿಲ್ಲದೆ ಆರ್ಥಿಕತೆ ಅಧೋಗತಿಯತ್ತ ಸಾಗಿದೆ. ಒಂದು ವರ್ಷದಲ್ಲಿ ಐದು ಗ್ಯಾರಂಟಿಗಳ ಪಠಣೆಯನ್ನು ಬಿಟ್ಟರೆ ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಜನರು ಕೇಳಿಲ್ಲ. ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆ, ಸೇತುವೆ, ಬಸ್‌ ನಿಲ್ದಾಣ, ಸರ್ಕಾರಿ ಕಟ್ಟಡಗಳ ನಿರ್ಮಾಣ ಮೊದಲಾದ ಯಾವುದೇ ಪ್ರಗತಿ ಕಾರ್ಯಗಳು ಗೋಚರಿಸಿಲ್ಲ.

‘ಕರ್ನಾಟಕ ಮಾದರಿ’ ಅಭಿವೃದ್ಧಿಗೆ 1 ವರ್ಷ; ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಕಾಂಗ್ರೆಸ್‌ ಸರ್ಕಾರ ಪೂರ್ಣವಾಗಿ ಒಂದು ನಿರರ್ಥಕ ವರ್ಷವನ್ನು ಜನರಿಗೆ ಆರನೇ ಗ್ಯಾರಂಟಿಯಾಗಿ ನೀಡಿದೆ. ಚುನಾವಣಾ ತಂತ್ರವಾಗಿ ಘೋಷಿಸಿದ ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸಿದೆ ಎನ್ನುವ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸುತರಾಂ ಸಿದ್ಧವಿಲ್ಲ.

ಇದನ್ನು ಒಪ್ಪಿಕೊಂಡು ಗ್ಯಾರಂಟಿಗಳನ್ನು ಕೈಬಿಟ್ಟು ಜನರ ಕ್ಷಮೆ ಕೋರಿ ಮುಂದುವರಿಯುವುದರಲ್ಲಿ ಕ್ಷೇಮವಿದೆ ಎಂಬ ಸತ್ಯ ಅರಿತರೆ ಸುಧಾರಣೆಗೆ ಚಾಲನೆ ಸಿಗಲಿದೆ. ಆದರೆ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾ ಕಾಲಹರಣ ಮಾಡಿ ಒಂದು ವರ್ಷ ಕಳೆಯಲಾಗಿದೆ.

ಅದರಲ್ಲೂ ರೈತರ ಪಾಲಿಗಂತೂ ಇದು ಘನಘೋರ ಕಾಲ. ಬರಗಾಲಕ್ಕೆ ನಯಾಪೈಸೆ ಪರಿಹಾರ ನೀಡದ ಸರ್ಕಾರ, ಎಲ್ಲವೂ ಕೇಂದ್ರದ ಹೊಣೆ ಎಂದು ಕೈ ತೊಳೆದುಕೊಂಡುಬಿಟ್ಟಿದೆ. ಜೊತೆಗೆ ನ್ಯಾಯಾಲಯಕ್ಕೆ ಹೋಗಿ ಡ್ರಾಮಾ ಸೃಷ್ಟಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ 3,454 ಕೋಟಿ ರು. ಪರಿಹಾರ ತಮ್ಮದೇ ಸಾಧನೆಯೆಂದು ಬಿಂಬಿಸಿದೆ.

ಆ ನಂತರವೂ ಪರಿಹಾರ ಸಾಲದೆಂದು ಹೊಸ ವಿವಾದ ಸೃಷ್ಟಿಸಲಾಗಿದೆ. ಇಷ್ಟೆಲ್ಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಟ್ಟ ಪರಿಹಾರವನ್ನು ರೈತರಿಗೆ ತಲುಪಿಸುವಲ್ಲೂ ಸಂಪೂರ್ಣ ಸೋತಿದ್ದಾರೆ. ಬರಪೀಡಿತ ಪ್ರದೇಶಗಳಲ್ಲಿ ಮೊದಲಿಗೆ ಬಿತ್ತನೆ ಮಾಡಬೇಡಿ ಎಂದು ಸೂಚನೆ ನೀಡಿ, ನಂತರ ಬಿತ್ತನೆ ಮಾಡದ ರೈತರು ಪರಿಹಾರಕ್ಕೆ ಅರ್ಹರಲ್ಲ ಎಂಬ ನೆಪ ನೀಡಿ ಪರಿಹಾರವನ್ನು ಕೊಟ್ಟಿಲ್ಲ. ಅಲ್ಲದೆ ಪರಿಹಾರದ ಹಣವನ್ನು ಸಾಲಕ್ಕೆ ಜಮೆ ಮಾಡುವುದು, ನರೇಗಾ, ಪಿಂಚಣಿ ಮೊದಲಾದ ಕಾರ್ಯಕ್ರಮಗಳ ಹಣವನ್ನೂ ಸಾಲಕ್ಕೆ ಜಮೆ ಮಾಡುವುದು ಕಂಡುಬಂದಿದೆ.

ಹಾಲಿನ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡು, ಬರ ಪರಿಹಾರ ನೀಡದೆ, ರೈತರ ಆತ್ಮಹತ್ಯೆಯ ಬಗ್ಗೆ ವ್ಯಂಗ್ಯವಾಡುತ್ತಾ ಕಾಲ ಕಳೆಯುವುದು ಈ ಸರ್ಕಾರದ ದುರಾಡಳಿತಕ್ಕೆ ದೊಡ್ಡ ನಿದರ್ಶನ. ಇಷ್ಟೇ ಅಲ್ಲದೆ, ದಲಿತರಿಗೆ ಸೇರಿದ್ದ 11 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗೆ ಬಳಸಿ ಸಮಾನತಾವಾದಿ ಡಾ.ಬಿ.ಆರ್‌.ಅಂಬೇಡ್ಕರ್‌ ಆಶಯಕ್ಕೆ ಮಸಿ ಬಳಿದಿದ್ದು ಇನ್ನಷ್ಟು ಹೇಯ.

ಸತ್ತ ಕಾನೂನು ಸುವ್ಯವಸ್ಥೆ

ಕಾನೂನು ಸುವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಯಾವುದೇ ಹಿಡಿತವಿಲ್ಲ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣದಿಂದ ಆರಂಭವಾಗಿ, ಹೆಣ್ಣುಮಕ್ಕಳ ತಲೆ ಕಡಿಯುವವರೆಗೂ ಬರ್ಬರ ಕೊಲೆ, ಅತ್ಯಾಚಾರಗಳು ನಡೆಯುತ್ತಲೇ ಇವೆ. ಎನ್‌ಸಿಆರ್‌ಬಿ ಅಂಕಿ ಅಂಶದ ಪ್ರಕಾರ, ಈ ವರ್ಷದ ಜನವರಿಯಿಂದ ಏಪ್ರಿಲ್‌ 30ರವರೆಗೆ, ಕೇವಲ ನಾಲ್ಕು ತಿಂಗಳಲ್ಲಿ 430 ಕೊಲೆ ಹಾಗೂ 198 ಅತ್ಯಾಚಾರ ಪ್ರಕರಣ ದಾಖಲಾಗಿವೆ ಎಂದರೆ ಕಾನೂನು ಸುವ್ಯವಸ್ಥೆ ಸತ್ತು ಪೊಲೀಸ್‌ ಇಲಾಖೆ ಮಕಾಡೆ ಮಲಗಿದೆ ಎಂದರ್ಥ.

ಅದರಲ್ಲೂ ಧರ್ಮಾಧಾರಿತವಾದ ಅಪರಾಧಿ ಚಟುವಟಿಕೆಗಳಾದ ಲವ್‌ ಜಿಹಾದ್‌, ಭಯೋತ್ಪಾದನೆ, ಪಾಕಿಸ್ತಾನಕ್ಕೆ ಜೈ ಎನ್ನುವ ದೇಶದ್ರೋಹಿ ಚಟುವಟಿಕೆಗಳಿಗೆ ಉತ್ತೇಜನ ದೊರೆತಿದೆ. ಹಿಂದೂಗಳ ರಕ್ತ ಹರಿಯುತ್ತಿದ್ದರೂ ಕಾಂಗ್ರೆಸ್‌ ನಾಯಕರು ತುಷ್ಟೀಕರಣದಲ್ಲಿ ನಿರತರಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆಗಳ ನಿಯಂತ್ರಣದಲ್ಲೂ ಸರ್ಕಾರ ವಿಫಲವಾಗಿದ್ದು, ಜಾಮೀನು ಪಡೆದು ಹೊರಬಂದ ರಾಕ್ಷಸರು ಮತ್ತೆ ಭ್ರೂಣ ಹತ್ಯೆ ಮುಂದುವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದ 500 ವರ್ಷಗಳ ಕನಸು ನನಸಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ, ಅಲ್ಲಿಗೆ ಹೋಗಲು ಕರಸೇವಕರನ್ನು ತಡೆದು, ಹನುಮ ಧ್ವಜ ಹಾರಿಸುವುದನ್ನು ತಡೆದು ಸರ್ಕಾರ ಹಿಂದೂ ವಿರೋಧಿತನ ಮೆರೆಯಿತು. ಅದೇ ಔರಂಗಜೇಬನ ಕಟೌಟ್‌ ಹಾಕಿದವರಿಗೆ, ಶ್ರೀರಾಮನ ಫ್ಲೆಕ್ಸ್‌ ಹರಿದವರಿಗೆ, ಹನುಮಾನ್‌ ಚಾಲೀಸ ಕೇಳಿದವರನ್ನು ಥಳಿಸಿದವರಿಗೆ ರಾಜ ಸತ್ಕಾರ ಮಾಡಿದೆ.

ಎಡವಟ್ಟು ಸರ್ಕಾರ

ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆ ಕೇಳಿ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಕುಸಿತವಾಗಿದ್ದು, ಕೃಪಾಂಕ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪಗೊಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅಂದರೆ ಸರ್ಕಾರದ ಮುಖ್ಯಸ್ಥರಿಗೆ ಕೂಡ ಇಂತಹ ಮಹತ್ವದ ವಿಷಯ ಗೊತ್ತೇ ಇರಲಿಲ್ಲ!

ವಸತಿ ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ವಾಣಿ ಬದಲಿಸಿದ್ದು, ರೋಗಿಗಳಿಗೆ ಪಶುಗಳ ಔಷಧಿ ಪೂರೈಕೆ, ಮುದ್ದೇನಹಳ್ಳಿಯ ಪಂಚಾಯಿತಿ ಗ್ರಂಥಾಲಯದಲ್ಲಿ ‘ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ’ ಎಂಬ ಬರಹ, ಮುಜರಾಯಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆಹಿಡಿಯುವ ಆದೇಶ, ಎಲ್ಲ ಕಡೆ ಬಾರ್‌ಗಳನ್ನು ನಿರ್ಮಿಸಲು ಮುಂದಾಗಿದ್ದು, ಹೀಗೆ ಸರಣಿ ಎಡವಟ್ಟುಗಳ ಮೂಲಕ ಸರ್ಕಾರ ಜನರ ಬದುಕಿನ ಜೊತೆ ಆಟವಾಡಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಅಸಾಧ್ಯವನ್ನ ಸಾಧಿಸಿ ತೋರಿಸಿದ್ದೇವೆ: ಡಿಕೆ ಶಿವಕುಮಾರ

ಸರ್ಕಾರದ ದುರಾಡಳಿತದಿಂದ ಆರ್ಥಿಕತೆಯ ಮೇಲೂ ತೀವ್ರ ಹೊಡೆತ ಬಿದ್ದಿದೆ. ರಾಜ್ಯದ ಅಭಿವೃದ್ಧಿಗೆ ಬಂಡವಾಳ ವೆಚ್ಚವನ್ನು ಅಳತೆಗೋಲಾಗಿ ನೋಡಲಾಗುತ್ತದೆ. ಆದರೆ ಈ ಬಂಡವಾಳ ವೆಚ್ಚದಲ್ಲೇ 2023-24ನೇ ಸಾಲಿನಲ್ಲಿ ಶೇ.22ರಷ್ಟು ಕುಸಿತ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬಜೆಟ್‌ ಮಂಡಿಸಿದ್ದಾರೆಯೇ ಹೊರತು, ಆರ್ಥಿಕತೆಯನ್ನು ಬೆಳೆಸುವ ಕೆಲಸ ಮಾಡಿಲ್ಲ.

ಇದರ ಜೊತೆಗೆ ಒಂದೂವರೆ ಲಕ್ಷ ಕೋಟಿ ರು. ಸಾಲ ಮಾಡಿರುವುದರಿಂದ ಇನ್ನುಳಿದ ನಾಲ್ಕು ವರ್ಷಗಳ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಿದೆ. ಒಂದೇ ವರ್ಷದಲ್ಲಿ ಆರ್ಥಿಕತೆಯನ್ನು ಹಾಳುಗೆಡವಿ ಜನರ ಜೀವನವನ್ನು ಚಿಂತೆಯ ಪಾತಾಳಕ್ಕೆ ತಳ್ಳಿರುವುದೇ ನುಡಿದಂತೆ ನಡೆದ ಈ ಸರ್ಕಾರದ ಸಾಧನೆ.

Latest Videos
Follow Us:
Download App:
  • android
  • ios