Asianet Suvarna News Asianet Suvarna News

Loksabha Elections 2024: ಸಂಸದೆ ಸುಮಲತಾ ಅಂಬರೀಶ್ ಮೌನ: ಮುಂದಿನ ನಡೆಯೇನು?

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಬಿಜೆಪಿಯನ್ನು ಬೆಂಬಲಿಸಿದ್ದ ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ. 

Loksabha Elections 2024 MP Sumalatha Ambareesh Silent What is the next step gvd
Author
First Published Mar 16, 2024, 5:43 AM IST

ಬೆಂಗಳೂರು (ಮಾ.16): ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಬಿಜೆಪಿಯನ್ನು ಬೆಂಬಲಿಸಿದ್ದ ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ. ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೆ ಸುಮಲತಾ ಅವರು ಮೌನಕ್ಕೆ ಶರಣಾಗಿದ್ದು, ತಮ್ಮ ಬೆಂಬಲಿಗರೊಂದಿಗೆ ಸತತ ಸಭೆಗಳನ್ನು ನಡೆಸುವ ಮೂಲಕ ಮುಂದೇನು ಮಾಡಬೇಕು ಎಂಬುದರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬೆಂಬಲಿಸಿ ಹಲವು ತಿಂಗಳುಗಳ ಹಿಂದೆಯೇ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದರು. 

ಯಾವುದೇ ಕಾರಣಕ್ಕೂ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬೇಡ ಎಂಬ ಅಭಿಪ್ರಾಯವನ್ನು ಬಿಜೆಪಿಯ ರಾಜ್ಯ ನಾಯಕರೂ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿವರೆಗೆ ಎಲ್ಲರಿಗೂ ಮನವಿ ಮಾಡಿದ್ದರು. ಆದರೂ, ಜೆಡಿಎಸ್‌ ನಾಯಕರ ಒತ್ತಡಕ್ಕೆ ಮಣಿದ ಬಿಜೆಪಿ ರಾಷ್ಟ್ರೀಯ ನಾಯಕರು ಕೊನೆಗೂ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವ ತೀರ್ಮಾನ ಕೈಗೊಂಡರು. ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿರುವುದರಿಂದ ಇದೀಗ ಸುಮಲತಾ ಅವರು ಆ ಪಕ್ಷಕ್ಕೂ ವಲಸೆ ಹೋಗುವಂತಿಲ್ಲ. ಎರಡನೇ ಬಾರಿ ಪಕ್ಷೇತರ ಸದಸ್ಯೆಯಾಗಿ ಕಣಕ್ಕಿಳಿಯುವುದೊಂದೇ ಉಳಿದಿರುವ ದಾರಿ. ಅದು ಬೇಡ ಎಂದರೆ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಪರ್ಯಾಯ ಹಾದಿಯನ್ನು ಕಂಡುಕೊಳ್ಳಬೇಕಾಗುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಸಚಿವ ಚಲುವರಾಯಸ್ವಾಮಿ

ಈ ಹಿಂದೆ ಸುಮಲತಾ ಅವರು ಬೆಂಗಳೂರು ಉತ್ತರಕ್ಕೆ ಸ್ಥಳಾಂತರಗೊಳ್ಳುತ್ತಾರೆ ಎಂಬ ವದಂತಿ ಹಬ್ಬಿತ್ತು. ಆಗಲೇ ಅವರು ಮಂಡ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈಗ ಅವರು ಮನಸ್ಸು ಮಾಡಿದರೂ ಅವಕಾಶ ಇಲ್ಲದಂತಾಗಿದೆ. ಆ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ರಾಜ್ಯಸಭೆಗೆ ಹೋಗುವ ಅವಕಾಶವನ್ನು ಬಿಜೆಪಿ ನೀಡಬಹುದು. ಅದು ಆಗದಿದ್ದರೆ ಮುಂಬರುವ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ನಡೆಯುವ ಚುನಾವಣೆಯಲ್ಲಿ ಸುಲಭವಾಗಿ ಪರಿಷತ್ತಿಗೆ ಪ್ರವೇಶ ಪಡೆಯಬಹುದು. ಅಥವಾ ಇನ್ನೂ ಘೋಷಣೆಯಾಗದ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಕೇಳಬಹುದು ಎನ್ನಲಾಗುತ್ತಿದೆ.

ನಮಗೇ ನೀರಿಲ್ಲ, ತಮಿಳುನಾಡಿಗೆ ಎಲ್ಲಿಂದ ನೀರು ಕೊಡೋಣ: ಡಿ.ಕೆ.ಶಿವಕುಮಾರ್‌

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗರು ಮತ್ತು ಬಲಿಜಿ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೆ. ಪತಿ ಅಂಬರೀಶ್ ಅವರು ಒಕ್ಕಲಿಗರಾಗಿದ್ದು, ಸುಮಲತಾ ಅವರು ಬಲಿಜ ಸಮುದಾಯಕ್ಕೆ ಸೇರಿದವರು. ಈಗ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಹಾಲಿ ಶಾಸಕ ಎಸ್‌.ಆರ್‌.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇ‍ವರಿಬ್ಬರ ಬದಲು ಸುಮಲತಾ ಅವರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆಯೂ ಬಿಜೆಪಿಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios