Asianet Suvarna News Asianet Suvarna News

ಬಂಡಾಯ ಅಭ್ಯರ್ಥಿ ಕೆಎಸ್‌ ಈಶ್ವರಪ್ಪಗೆ ಪ್ರತ್ಯೇಕ ಚಿಹ್ನೆ ನೀಡಿದ ಚುನಾವಣಾ ಆಯೋಗ!

ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷದ ವಿರುದ್ಧ ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಜೆಪಿ ಮಾಜಿ ಸಚವ ಕೆಎಸ್‌ ಈಶ್ವರಪ್ಪ ಅವರಿಗೆ ಚುನಾವಣಾ ಆಯೋಗ ಚುನಾವಣಾ ಚಿಹ್ನೆ ನೀಡಿದೆ. ಕಬ್ಬಿನ ಜೊತೆ ನಿಂತಿರುವ ಚಿಹ್ನೆ ನೀಡಲಾಗಿದೆ.

Lok sabha polls 2024 Election commission gave the symbol to rebel candidate KS Eshwarappa rav
Author
First Published Apr 22, 2024, 6:19 PM IST

ಶಿವಮೊಗ್ಗ (ಏ.22): ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಸಿಗದ ಹಿನ್ನೆಲೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಶಿವಮೊಗ್ಗದಿಂದ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇಂದು ನಾಮಪತ್ರ ಹಿಂಪಡೆಯುತ್ತಾರೆಂದು ನಂಬಲಾಗಿತ್ತು. ಆದರೆ ನಾಮಪತ್ರ ಹಿಂಪಡೆಯದೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿ ತಿಳಿಸಿದ ಬಳಿಕ ಇದೀಗ ಈಶ್ವರಪ್ಪನವರಿಗೆ ಚುನಾವಣಾ ಆಯೋಗ ಚಿಹ್ನೆ ನೀಡಿದೆ.

ಬಿಜೆಪಿ ವಿರುದ್ಧ ಬಂಡಾಯ ಸಮರ ಸಾರಿರುವ ಈಶ್ವರಪ್ಪನವರಿಗೆ ಕಬ್ಬಿನ ಜೊತೆ ನಿಂತಿರುವ ರೈತನ ಚಿಹ್ನೆ ನೀಡಿರುವ ಚುನಾವಣಾ ಆಯೋಗ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್‌ರಿಗೆ ಟಿಕೆಟ್ ಸಿಗುತ್ತದೆ ಭಾರೀ ವಿಶ್ವಾಸದಲ್ಲಿದ್ದ ಈಶ್ವರಪ್ಪ, ಬಿಎಸ್‌ ಯಡಿಯೂರಪ್ಪ ಸಹ ಮೊದಲಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆಂಬ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕಾಂತೇಶ್ ಬದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಿದ್ದ ಬಿಜೆಪಿ. ಇದರಿಂದ ಕೆರಳಿದ ಈಶ್ವರಪ್ಪನವರು ಬಿಜೆಪಿ ಪಕ್ಷ, ಬಿಎಸ್‌ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿದ್ದರು. ನನ್ನ ಸ್ಪರ್ಧೆ ಬಿಜೆಪಿ ವಿರುದ್ಧ ಅಲ್ಲ, ಬಿಎಸ್‌ವೈ ಕುಟುಂಬ ರಾಜಕಾರಣದ ವಿರುದ್ಧ ಎಂದು ಬಹಿರಂಗ ವಾಗ್ದಾಳಿ ನಡೆಸಿದ್ದರು.

ಚುನಾವಣಾ ಪ್ರಚಾರದಲ್ಲಿ ಬಿಜೆಪಿ, ಪ್ರಧಾನಿ ಮೋದಿ ಹೆಸರು ಬಳಸಿಕೊಂಡೇ ಪ್ರಚಾರ ನಡೆಸಿದ್ದರು. ಬಿಜೆಪಿ ನಾಯಕರು ಮನವೊಲಿಸುವ ಯತ್ನ ನಡೆಸಿದ್ದರು. ಆದರೆ ಯಾವುದೇ ರೀತಿಯಲ್ಲಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದ ಬಳಿಕ ಇತ್ತ ಬಿಜೆಪಿ ಹೈಕಮಾಂಡ್, ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಬಳಸದಂತೆ ತಡೆಯಲು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿತು. ಇದೀಗ ಬಂಡಾಯ ಅಭ್ಯರ್ಥಿಗೆ ಚುನಾವಣಾ ಆಯೋಗ ಗುರುತಿನ ಚಿಹ್ನೆ ನೀಡಿದೆ.

ಈಶ್ವರಪ್ಪ ದುಃಖ ನಾನು ಅರ್ಥ ಮಾಡಿಕೊಳ್ಳಬಲ್ಲೆ: ರಾಧಾಮೋಹನದಾಸ್ ಅಗರವಾಲ್ 

ಇದಕ್ಕೂ ಮೊದಲು ಕೆಎಸ್‌ ಈಶ್ವರಪ್ಪನವರು ಪ್ರಧಾನಿ ಮೋದಿ, ಬಿಜೆಪಿ ಹೆಸರಿನಲ್ಲೇ ಚುನಾವಣಾ ಪ್ರಚಾರ ನಡೆಸಿದ್ದರು. ನನ್ನದು ಕುಟುಂಬ ರಾಜಕಾರಣದ(ಬಿಎಸ್‌ ಯಡಿಯೂರಪ್ಪ ಮತ್ತು ಪುತ್ರರ) ವಿರುದ್ಧ ಸ್ಪರ್ಧೆಯೇ ಹೊರತು ಬಿಜೆಪಿ ವಿರುದ್ಧ ಅಲ್ಲ ಅವರನ್ನು ಸೋಲಿಸುವುದೇ ಗುರಿ. ಆಮೂಲಕ ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಗೆಲುವಿನ ಮೂಲಕ ತಿಳಿಸುತ್ತೇನೆ ಎಂದು ಗುಡುಗಿದ್ದರು. ಇತ್ತ ಬಿಜೆಪಿ ಹೈಕಮಾಂಡ್ ಕೆಎಸ್‌ ಈಶ್ವರಪ್ಪನವರನ್ನು ಮನವೊಲಿಸುವ ಎಲ್ಲ ಪ್ರಯತ್ನ ನಡೆಸಿದ್ದರು. ಆದರೆ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ಮುರಿದಂತೆ ಹೇಳಿದ್ದರು. ಈ ಹಿನ್ನೆಲೆ ಈಶ್ವರಪ್ಪನವರು ಇನ್ಮುಂದೆ ಮೋದಿ ಫೊಟೊ, ಹೆಸರು, ಪಕ್ಷದ ಚಿಹ್ನೆ ಪ್ರಚಾರದಲ್ಲಿ ಬಳಸದಂತೆ ಬಿಜೆಪಿ ನಾಯಕರು ನ್ಯಾಯಾಲಯದ ಕದ ತಟ್ಟಿದ್ದರು. ಅದರಂತೆ ಇದೀಗ ಸ್ವತಂತ್ರ ಅಭ್ಯರ್ಥಿಯಾಗಿರುವ ಕೆಎಸ್ ಈಶ್ವರಪ್ಪನವರಿಗೆ ಚುನಾವಣಾ ಆಯೋಗ ಪ್ರತ್ಯೇಕ ಚಿಹ್ನೆ ನೀಡಿದೆ. ಮುಂದಿನ ಚುನಾವಣಾ ಪ್ರಚಾರದಲ್ಲಿ ಕೈ ಕಟ್ಟಿರುವ ರೈತ ಮತ್ತು ಎರಡು ಕಬ್ಬುಗಳಿರುವ ಚಿಹ್ನೆ ಬಳಕೆ ಮಾಡಲಿದ್ದಾರೆ.

Follow Us:
Download App:
  • android
  • ios