ಬಿಜೆಪಿ ಗೆದ್ರೆ ಹೆಂಗಸ್ರು ಮಂಗಳ ಸೂತ್ರವಲ್ಲ, ಗಂಡ, ಮಕ್ಕಳನ್ನೂ ಕಳೆದುಕೊಳ್ತಾರೆ: ಯತೀಂದ್ರ ಸಿದ್ದರಾಮಯ್ಯ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಎಲ್ಲಾ ಮಹಿಳೆಯರ ಮಂಗಳಸೂತ್ರ ಮಾತ್ರವಲ್ಲ, ತಮ್ಮ ಗಂಡಂದಿರು, ಮಕ್ಕಳನ್ನ ಕಳೆದುಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರು (ಏ.23): ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಎಲ್ಲಾ ಮಹಿಳೆಯರ ಮಂಗಳಸೂತ್ರ ಮಾತ್ರವಲ್ಲ, ತಮ್ಮ ಗಂಡಂದಿರು, ಮಕ್ಕಳನ್ನ ಕಳೆದುಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು. ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿಕೆ ಕುರಿತು ಮೈಸೂರಿನಲ್ಲಿ ಸೋಮವಾರ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕೋಮುಗಲಭೆ, ದೋಂಬಿ ಮಾಡಿ ಅವರ ಮಕ್ಕಳನ್ನು ಸಾಯುವಂತೆ ಮಾಡುತ್ತದೆ.
ಒಬ್ಬರನ್ನೊಬ್ಬರು ಬಡಿದಾಡುವಂತೆ ಮಾಡುತ್ತಾರೆ. ಮಕ್ಕಳನ್ನು ಕೋಮುಗಲಭೆಯಲ್ಲಿ ತೊಡಗಿಸಿ ನಿರುದ್ಯೋಗಿಯಾಗಿ ಮಾಡುತ್ತಾರೆ ಎಂದು ಆರೋಪಿಸಿದರು. ಪ್ರಧಾನಿಯಾದ ನರೇಂದ್ರ ಮೋದಿ ಅವರು ತುಚ್ಛವಾಗಿ ಮಾತನಾಡಿದ್ದಾರೆ. ಮತಿಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಕಣ್ಣು ಮುಚ್ಚಿ ಕುಳಿತಿದೆ ಗೊತ್ತಿಲ್ಲ. 70 ವರ್ಷಗಳಿಂದ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಯಾವ ಹಿಂದೂಗೆ ಅನ್ಯಾಯವಾಗಿಲ್ಲ ಎಂದು ಅವರು ತಿಳಿಸಿದರು.
ನೇಹಾ ಕೇಸ್ ಸಿಬಿಐಗೆ ಒಪ್ಪಿಸಿ, ರಾಜ್ಯ ಸರ್ಕಾರದಿಂದ ಪರಿಹಾರ ನೀಡಿ: ಕಟೀಲ್ ಆಗ್ರಹ
ಬಿಜೆಪಿ ಅಭ್ಯರ್ಥಿಗಳನ್ನು ಅಮಾನತು ಮಾಡಿ: ಮೈಸೂರು- ಕೊಡಗು ಅಭ್ಯರ್ಥಿ ಯದುವೀರ, ಚಾಮರಾಜನಗರ ಅಭ್ಯರ್ಥಿ ಬಾಲರಾಜ್ ಅವರನ್ನು ಅಮಾನತು ಮಾಡಬೇಕು. ಹಣದಿಂದಲೇ ಬಿಜೆಪಿ ಚುನಾವಣೆ ನಡೆಸುತ್ತಿದೆ ಅಂತಾ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬೆಂಗಳೂರಿನಲ್ಲಿ ಸಿಕ್ಕ 2 ಕೋಟಿ ಹಣದಿಂದ ಇವರು ಚುನಾವಣೆ ಯಾವ ರೀತಿ ಅಂತಾ ಗೊತ್ತಾಗುತ್ತದೆ ಎಂದು ಅವರು ದೂರಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಬಂದಲ್ಲಿ ಜಾತಿ ಗಣತಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಜಾತಿ ಗಣತಿಗೆ ಮುಂದಾಗಲಿದ್ದು, ಆ ಮೂಲಕ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ದಲಿತರು ಹಾಗೂ ಹಿಂದುಳಿದ ಸಮುದಾಯದ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಲಿದೆ ಎಂದು ವರುಣ ಕ್ಷೇತ್ರದ ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಹೇಳಿದರು. ಚಾಮರಾಜನಗರ ಲೋಕಸಭಾ ಹಿನ್ನೆಲೆ ಶುಕ್ರವಾರ ಪಟ್ಟಣದ ಮಹದೇಶ್ವರ ಯಾತ್ರಿ ಭವನದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಮೀಸಲಾತಿ ಜನಸಂಖ್ಯೆಗನುಗುಣವಾಗಿ ನಿಗದಿಯಾಗಿಲ್ಲ, ಇದರಿಂದಾಗಿ ಅರ್ಹರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಆರ್.ಎಸ್.ಎಸ್. ಹಾಗೂ ಜನಸಂಘದವರು ಬಹು ಹಿಂದಿನಿಂದಲೂ ಮೀಸಲಾತಿ ವಿರೋಧಿಸುತ್ತಿದ್ದು, ಮಂಡಲ್ ವರದಿ ಅನುಷ್ಠಾನಕ್ಕೆ ತಡೆಯೊಡ್ಡಿದ್ದಲ್ಲದೆ ಅಂದಿನ ವಿ.ಪಿ. ಸಿಂಗ್ ಸರ್ಕಾರ ಬೀಳಲು ಕಾರಣರಾಗಿದ್ದರು. ಅರ್ಹರು ನ್ಯಾಯಯುತ ಮೀಸಲಾತಿಗಾಗಿ ಈಗಲೂ ಹೋರಾಟ ನಡೆಸುತ್ತಿದ್ದಾರೆ, ಆದರೆ ಕೇಂದ್ರ ಬಿಜೆಪಿ ಸರ್ಕಾರ ಶೇ. 4ರಷ್ಟಿರುವ ಮೇಲ್ವರ್ಗದ ಜನರು ಯಾವುದೇ ಹೋರಾಟ ಮಾಡದಿದ್ದರೂ ಅವರಿಗೆ ಇಡಬ್ಲ್ಯುಎಸ್ ಕೋಟಾದಲ್ಲಿ ಶೇ. 10 ಪ್ರಮಾಣದ ಮೀಸಲಾತಿಯನ್ನು ನೀಡುವ ಮೂಲಕ ತಾವು ಮೇಲ್ವರ್ಗದ ಪರ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಪದಗಳೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಶೋಷಿತ ಹಾಗೂ ಹಿಂದುಳಿದ ವಗದ ಜನರ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ನ್ನು ಹಿಂದುಳಿದ ವರ್ಗದ ಜನರು ಬೆಂಬಲಿಸುವ ಮೂಲಕ ತಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು. ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.