ತೊಡೆ ತಟ್ಟಿದವರ ಸೊಕ್ಕು ಮುರಿದವನು ನಾನು: ಸಿಎಂ ಸಿದ್ದರಾಮಯ್ಯ
ಜನಾರ್ದನ ರೆಡ್ಡಿ, ಶ್ರೀರಾಮುಲು ಸದನದಲ್ಲೇ ನನಗೆ ತೊಟ್ಟಿದ್ದರು. ಅದೇ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಇಬ್ಬರ ಸೊಕ್ಕನ್ನೂ ಮುರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ (ಮೇ.05): ಜನಾರ್ದನ ರೆಡ್ಡಿ, ಶ್ರೀರಾಮುಲು ಸದನದಲ್ಲೇ ನನಗೆ ತೊಟ್ಟಿದ್ದರು. ಅದೇ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಇಬ್ಬರ ಸೊಕ್ಕನ್ನೂ ಮುರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಕುರುಬ ಸಮಾಜ ಮತ್ತು ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ತೊಡೆ ತಟ್ಟಿದಾಗ ಅಂಥವರ ಜಿಲ್ಲೆವರೆಗೂ ಐತಿಹಾಸಿಕ ಪಾದಯಾತ್ರೆ ಕೈಗೊಂಡು, ಆ ಇಬ್ಬರ ಸೊಕ್ಕು ಮುರಿದಿದ್ದಷ್ಟೇ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೂ ಬರಲು ಕಾರಣರಾದೆವು ಎಂದರು.
ಪ್ರಧಾನಿ ನರೇಂದ್ರ ಮೋದಿ ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡು, ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆದಿದ್ದೇ ಸಾಧನೆ ಮಾಡಿಕೊಂಡಿದ್ದಾರೆ. ಹಿಂದುಳಿದವ ದೊಡ್ಡ ಶತೃವೆಂದರೆ ಅದು ಬಿಜೆಪಿ. ಬಿಜೆಪಿಗೆ ಹಿಂದುಳಿದ ವರ್ಗಗಳು ಮತ ಹಾಕುವುದಕ್ಕೆ ಕಾರಣವೇ ಇಲ್ಲ . ಕುರುಬರಿಗೆ ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಟಿಕೆಟ್ ಕೊಟ್ಟಿಲ್ಲ. ನೀವೂ ಸಹ ಬಿಜೆಪಿಗೆ ಒಂದೇ ಒಂದು ಮತವನ್ನೂ ನೀಡಬೇಡಿ ಎಂದು ಅವರು ಹೇಳಿದರು.
ಪೆನ್‌ಡ್ರೈವ್ ಹಿನ್ನೆಲೆ ಏನೆಂದು ನಾವು ಬಿಚ್ಚಿಡಬೇಕಾ?: ಡಿ.ಕೆ.ಶಿವಕುಮಾರ್
ಹಿಂದುಳಿದವರಿಗೆ ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದೇ ಬಿಜೆಪಿ. ಮಹಿಳೆಯರಿಗೆ ಮೀಸಲಾತಿ ನೀಡಿದಾಗಲೂ ವಿರೋಧ ಮಾಡಿದ್ದು ಬಿಜೆಪಿ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗಲೂ ವಿರೋಧಿಸಿದ್ದು ಬಿಜೆಪಿ. ಬಿಜೆಪಿಯ ರಾಮಾಜೋಯಿಸ್ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಬಿಜೆಪಿ ಸದಾ ಹಿಂದುಳಿದವರು, ಶ್ರಮಿಕರು, ದುಡಿಯುವ ವರ್ಗಗಳ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದರು.
ಮಾತು ತಪ್ಪಿದ ವಿನಯ್‌ಗೆ ನೀವೂ ತಿರಸ್ಕರಿಸಿ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರನಾಗಿ ಸ್ಪರ್ಧಿಸದಂತೆ ತಿಳಿಹೇಳಿದರೂ ನನ್ನ ಹಾಗೂ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನ್ನು ತಿರಸ್ಕರಿಸಿ, ಮಾತು ತಪ್ಪಿದ ಜಿ.ಬಿ.ವಿನಯಕುಮಾರನನ್ನು ಹಿಂದುಳಿದ ವರ್ಗದ ನೀವೆಲ್ಲರೂ ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಕುರುಬ ಸಮಾಜ ಮತ್ತು ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಲಾಭವಾಗಲೆಂದು ಬಿಜೆಪಿಯ ಬಿ.ಎ. ಬಸವರಾಜ ಭೈರತಿ ವಿನಯಕುಮಾರಗೆ ಕುಮ್ಮಕ್ಕು ನೀಡುತ್ತಿದ್ದು, ಹಿಂದುಳಿದವರನ್ನು ಬಿಜೆಪಿ ಬಳಸಿ, ಬಿಸಾಡುತ್ತದೆ. ಇದಕ್ಕೆ ಕೆ.ಎಸ್.ಈಶ್ವರಪ್ಪ ಸ್ಪಷ್ಟ ನಿದರ್ಶನ ಎಂದರು.
ನಿಮಗೆಲ್ಲರಿಗೂ ನಾನು ಬೇಕೋ ಅಥವಾ ವಿನಯ್ ಬೇಕೋ ನೀವೇ ತೀರ್ಮಾನ ಮಾಡಿ. ನಾನು ಬೇಕೆಂದರೆ ಯಾರೊಬ್ಬರೂ ಸಹ ವಿನಯಕುಮಾರ್‌ಗೆ ಒಂದೇ ಒಂದು ಮತವನ್ನೂ ಹಾಕಬಾರದು. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲೂ ಕುರುಬರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಅಂತಹ ಪಕ್ಷಕ್ಕೆ ವಿನಯಕುಮಾರ ಅನುಕೂಲವಾಗುವಂತೆ ಸ್ಪರ್ಧಿಸಿದ್ದು ಸರಿಯೇ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅತ್ಯಾಚಾರಿಗಳ ಪರ ನಿಲ್ಲುತ್ತಾರೆ: ಪ್ರಿಯಾಂಕಾ ಗಾಂಧಿ ಆರೋಪ
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಗೆದ್ದರೆ, ನಾನೇ ಗೆದ್ದಂತೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದರೇ ಮುಖ್ಯಮಂತ್ರಿಯಾಗಿ ನನಗೆ ಮತ್ತಷ್ಟು ಹೆಚ್ಚುಶಕ್ತಿ ಬರುತ್ತದೆ. ನನಗೆ ಮೋಸ ಮಾಡಿ ಹೋಗಿದ್ದ ಭೈರತಿ ಬಸವರಾಜ ಬಿಜೆಪಿಗೆ ಲಾಭವಾಗಲೆಂದು ವಿನಯ್‌ಗೆ ಕುಮ್ಮಕ್ಕು ನೀಡುತ್ತಿದ್ದು, ನನ್ನ ವಿರುದ್ಧ ರಕ್ತ ಕಾರುತ್ತಿದ್ದ ಈಶ್ವರಪ್ಪನ ಮಗನಿಗೂ ಬಿಜೆಪಿ ಟಿಕೆಟ್ ನೀಡಲಿಲ್ಲ. ಇದೇ ಬಿಜೆಪಿ ಜಾಯಮಾನ ಎಂದು ಹರಿಹಾಯ್ದರು.