ಉತ್ತರ ಕನ್ನಡ ಕೋಟೆಯಲ್ಲಿ ಮತ್ತೆ ಹಾರಿದ ಕೇಸರಿ ಬಾವುಟ: ಮೊದಲ ಬಾರಿ ಗೆದ್ದ ಸರದಾರ ಕಾಗೇರಿ ಹಿನ್ನೆಲೆ ಏನು ಗೊತ್ತಾ?
ಬಿಜೆಪಿಯ ಭದ್ರಕೋಟೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ 3 ಶಾಸಕರು, ಓರ್ವ ಸಚಿವರಿದ್ದರೂ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ 3 ಲಕ್ಷಕ್ಕೂ ಅಧಿಕ ಮತದ ಗೆಲುವು ಕಾಂಗ್ರೆಸ್ ಅನ್ನು ಮುಖಭಂಗ ಆಗುವಂತೆ ಮಾಡಿದೆ.
ಉತ್ತರ ಕನ್ನಡ (ಜೂ.04): ಬಿಜೆಪಿಯ ಭದ್ರಕೋಟೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ 3 ಶಾಸಕರು, ಓರ್ವ ಸಚಿವರಿದ್ದರೂ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ 3 ಲಕ್ಷಕ್ಕೂ ಅಧಿಕ ಮತದ ಗೆಲುವು ಕಾಂಗ್ರೆಸ್ ಅನ್ನು ಮುಖಭಂಗ ಆಗುವಂತೆ ಮಾಡಿದೆ. ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇನ್ನು ಈ ಬಾರಿ ಅನಂತ್ ಕುಮಾರ್ ಹೆಗಡೆಗೆ ಟಿಕೇಟ್ ತಪ್ಪಿಸಿ ಮಾಜಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೇಟ್ ಕೊಡಲಾಗಿತ್ತು.
ಅನಂತ್ ಕುಮಾರ್ ಹೆಗಡೆ ತನ್ನದೇ ಆದ ಹಿಡಿತವನ್ನು ಕ್ಷೇತ್ರದಲ್ಲಿ ಇಟ್ಟುಕೊಂಡಿದ್ದು, ಈ ಬಾರಿ ಅವರಿಗೆ ಟಿಕೆಟ್ ಕೊಡದೇ ಇರುವುದು ದೊಡ್ಡ ಹಿನ್ನಡೆಗೆ ಕಾರಣವಾಗಲಿದೆ ಎನ್ನಲಾಗಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಯಾರೂ ಊಹಿಸದಷ್ಟು ಭರ್ಜರಿ ಗೆಲುವನ್ನು ಪಡೆದಿದ್ದಾರೆ. ಮೊದಲ ಸುತ್ತಿನಿಂದಲೇ ಗೆಲುವಿನ ಅಂತರ ಏರಿಸಿಕೊಂಡು ಹೊರಟ ಕಾಗೇರಿ ಅಂತಿಮವಾಗಿ 7,82,495 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ 4,45,067 ಮತಗಳನ್ನು ಪಡೆಯುವ ಮೂಲಕ ಸೋಲನ್ನ ಕಂಡಿದ್ದಾರೆ.
ಮಗ ಸೋತ ಜಾಗದಲ್ಲಿ ಗೆದ್ದು ಬೀಗಿದ ಅಪ್ಪ: ಗೆಲುವಿಗೆ ಕಾರಣವಾಯ್ತು ಎಚ್‌ಡಿಕೆ ನಾಮಬಲ, ಮೈತ್ರಿ ಒಗ್ಗಟ್ಟಿನ ಫಲ
ಇನ್ನು ಈ ಬಾರಿ ಸುಮಾರು 3,37,428 ಲಕ್ಷ ಮತಗಳ ಅಂತರದಲ್ಲಿ ಕಾಗೇರಿ ಗೆಲುವನ್ನ ಪಡೆದಿದ್ದು, ಈ ಮೂಲಕ ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಲ್ಲಿ ಗೆಲುವನ್ನ ಪಡೆದ ಕೀರ್ತಿಗೆ ಕಾಗೇರಿ ಪಾತ್ರರಾಗಿದ್ದಾರೆ. ಉತ್ತರ ಕನ್ನಡ ಕ್ಷೇತ್ರ ವ್ಯಾಪ್ತಿಗೆ 8 ಕ್ಷೇತ್ರಗಳು ಬರಲಿದ್ದು, ಇದರಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕ ಹೆಬ್ಬಾರ್ ಬೆಂಬಲದ ಜತೆ ಒಟ್ಟು 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಎಲ್ಲಾ ಶಾಸಕರು ಒಟ್ಟಾಗಿ ದುಡಿದಿದ್ದರೆ ಕಾಂಗ್ರೆಸ್ ಗೆಲ್ಲಬಹುದಿತ್ತು. ಅಲ್ಲದೇ, ಗ್ಯಾರಂಟಿ ಪರಿಣಾಮ ಕಾಂಗ್ರೆಸ್ ಗೆ ಲಾಭ ಆಗಲಿದೆ ಎನ್ನಲಾಗಿತ್ತು. ಕ್ಷೇತ್ರದಲ್ಲಿ ಹೆಚ್ಚು ಮತಗಳಿರುವ ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್ ಗೆ ಕಾಂಗ್ರೆಸ್ ಟಿಕೆಟ್ ಕೊಡುವ ಮೂಲಕ ಮರಾಠ ಮತ ಪಡೆದು ಗೆಲುವನ್ನು ಪಡೆಯುವ ತಂತ್ರಗಾರಿಕೆಯನ್ನ ಕಾಂಗ್ರೆಸ್ ಮಾಡಿತ್ತು.
ಆದರೆ, ಜಿಲ್ಲೆಯ ಬಹುತೇಕ 8 ಕ್ಷೇತ್ರದಲ್ಲೂ ಕಾಂಗ್ರೆಸ್ ಹೀನಾಯ ಹಿನ್ನಡೆ ಅನುಭವಿಸಿದೆ. ಎಲ್ಲಾ ಕ್ಷೇತ್ರದಲ್ಲೀ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಗೆಲುವನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಕಾಗೇರಿಯಂತೂ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಯಾವುದೇ ಪ್ರಚಾರದಲ್ಲಿ ಭಾಗವಹಿಸದೇ ಕಾಗೇರಿಗೆ ಕೈಕೊಟ್ಟಿದ್ದರಿಂದ ಕಾಗೇರಿ ಪಾಲಿನ ಗೆಲುವು ಪ್ರಶ್ನೆಯಾಗಿತ್ತು. ಆದರೆ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್, ಶಾಸಕ ದಿನಕರ ಶೆಟ್ಟಿ ಹಾಗೂ ಬಿಜೆಪಿಯ ವಿವಿಧ ಮುಖಂಡರ ಜತೆ ಹಗಲು ರಾತ್ರಿಯೆನ್ನದೇ ನಡೆಸಿದ ಪ್ರಚಾರ ಮತ್ತು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕಾಗೇರಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತು.
ಚಿತ್ರದುರ್ಗ: ಹೊರಗಿನವರು ಎಂದವರಿಗೆ ಭರ್ಜರಿ ಗೆಲುವಿನ ಮೂಲಕ ಉತ್ತರ ಕೊಟ್ಟ ಗೋವಿಂದ ಕಾರಜೋಳ
ಮಾಜಿ ಶಾಸಕಿ, ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಪಾಲಿಗೆ ಇದೊಂದು ಘನತೆಯ ಪ್ರಶ್ನೆಯಾಗಿದ್ದರಿಂದ ತನ್ನ ಓಡಾಟ ಸಾರ್ಥಕವಾಗಿದೆ ಅನ್ನೋವಷ್ಟರಮಟ್ಟಿಗೆ ಹಿಗ್ಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಉತ್ತರ ಕನ್ನಡದಲ್ಲಿ ಮತ್ತೆ ಬಿಜೆಪಿ ಗೆಲುವು ಪಡೆದಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಜಿಲ್ಲೆಯ ಜನ ಮತ್ತೆ ಕೈ ಹಿಡಿದು ಸಂಸದರನ್ನಾಗಿ ಮಾಡಿದ್ದು, ಈ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ ಎನ್ನುವುದು ಹಲವರ ಲೆಕ್ಕಾಚಾರ. ಇದರ ಜತೆ ಕಾಗೇರಿ ಕೂಡಾ ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಕ್ಷೇತ್ರದಲ್ಲಿ ಬದಲಾವಣೆ ತರುವುದಾಗಿ ನೀಡಿದ ಹೇಳಿಕೆ ಜಿಲ್ಲೆಯ ಜನರಲ್ಲಿ ಇನ್ನಷ್ಟು ಆಶಾಭಾವನೆ ಮೂಡಿಸಿದೆ.