Asianet Suvarna News Asianet Suvarna News

ಚಿತ್ರದುರ್ಗ: ಹೊರಗಿನವರು ಎಂದವರಿಗೆ ಭರ್ಜರಿ ಗೆಲುವಿನ ಮೂಲಕ ಉತ್ತರ ಕೊಟ್ಟ ಗೋವಿಂದ ಕಾರಜೋಳ

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ತೆರೆ ಬಿದ್ದಿದೆ. ಆದ್ರೆ ನಿರೀಕ್ಷೆಯಂತೆಯೇ ಕೋಟೆನಾಡಿನಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಭರ್ಜರಿ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ವಿರುದ್ದ ಗೆಲುವು ಸಾಧಿಸಿದ್ದಾರೆ.

chitradurga lok sabha election 2024 result govinda karjol won gvd
Author
First Published Jun 4, 2024, 9:27 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜೂ.04): ರಾಜ್ಯದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ತೆರೆ ಬಿದ್ದಿದೆ. ಆದ್ರೆ ನಿರೀಕ್ಷೆಯಂತೆಯೇ ಕೋಟೆನಾಡಿನಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಭರ್ಜರಿ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ವಿರುದ್ದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆ ಆದ ಕೆಲ ದಿನಗಳವರೆಗೆ ಕೋಟೆನಾಡಿನ ಬಿಜೆಪಿ ಪಾಳಯದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಇತ್ತು. ಇದಕ್ಕೆ ಮೂಲ ಕಾರಣ ಸ್ಥಳೀಯ ಅಭ್ಯರ್ಥಿ ಕೂಗು ಎತ್ತಿದ್ದ ಬಿಜೆಪಿ ಶಾಸಕ ಚಂದ್ರಪ್ಪ ಹಾಗೂ ಪುತ್ರ ರಘುಚಂದನ್. ರಾಜ್ಯ ಬಿಜೆಪಿ ರಾಜಕಾರಣ ರಾಜಾಹುಲಿ ಯಡಿಯೂರಪ್ಪ ಎಂಟ್ರಿ ಆಗಿದ್ದೇ ತಡ, ಬಂಡಾಯದ ಅಪಸ್ವರ ಎತ್ತಿದ್ದವರೆಲ್ಲರೂ ಸೈಲೆಂಟ್ ಅಗಿ ಬಿಟ್ಟಿದ್ದರು‌. 

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವಿನ ಪ್ಲಸ್ ಪಾಯಿಂಟ್: ಟಿಕೆಟ್ ಸಿಕ್ಕ ಅಂದಿನಿಂದಲೂ ಅಭ್ಯರ್ಥಿ ಕಾರಜೋಳ ಅವರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಲು ಪ್ರಾರಂಭಿಸಿದರು. ಶತೃಗಳನ್ನು ಮಿತ್ರರನ್ನಾಗಿ ನೋಡುವ ಮೂಲಕ ಪ್ರತಿಯೊಬ್ಬರ ಮನೆಗಳಿಗೂ ತೆರಳಿ ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆಯೇ ಜನರು ಕೂಡ ಕಾರಜೋಳ ಅವರ ಸರಳತೆ ಹಾಗೂ ನೀರಾವರಿ ವಿಚಾರದಲ್ಲಿ ಜಿಲ್ಲೆಗೆ ಏನೆಲ್ಲಾ ಮಾಡಬಹುದು ಎನ್ನುವ ಮುಂದಾಲೋಚನೆಯನ್ನು ಅರಿತು ಅವರ ಪರವಾಗಿ ನಿಂತಿದ್ದರು. ಕಾರಜೋಳ ಅವರು ಇಂತಹ ಇಳಿ ವಯಸ್ಸಿನಲ್ಲಿಯೂ ಬೆಳಗ್ಗೆ 7 ಗಂಟೆಗೆ ಶುರುವಾದ ಚುನಾವಣಾ ಪ್ರಚಾರ ರಾತ್ರಿ ೧೨ ಗಂಟೆ ಆದರೂ ನಿತ್ಯ ನಿಲ್ಲುತ್ತಿರಲಿಲ್ಲ. 

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಭೇರಿ:ಹಿಂದಿ ಇಂಗ್ಲಿಷ್ ಕಲಿಯುತ್ತೇನೆ ಎಂದ ಕೋಟ ಶ್ರೀನಿವಾಸ ಪೂಜಾರಿ

ಕಾರಜೋಳ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದ ತಿಪ್ಪಾರೆಡ್ಡಿ: ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಬಿಜೆಪಿಯ ಹಿರಿಯ ನಾಯಕ. ಕೋಟೆನಾಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಆರು ಬಾರಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ. ಈ ಬಾರಿಯ MLA ಚುನಾವಣೆಯಲ್ಲಿ ಸೋತರೂ ಕೂಡ,MP ಚುನಾವಣೆಯಲ್ಲಿ ಕಾರಜೋಳ ಅವರಿಗೆ ಟಿಕೆಟ್‌ ನೀಡಬೇಕು ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದರು. ಅದರಂತೆ ಅವರು ನಿತ್ಯ ಪ್ರಚಾರಕ್ಕೆ ಎಲ್ಲಿಯೇ ತೆರಳುತ್ತಿದ್ದರೂ, ತಿಪ್ಪಾರೆಡ್ಡಿ ಎನಿ ಟೈಮ್ ಕಾರಜೋಳ ಅವರೊಟ್ಟಿಗೆ ಪ್ರಚಾರ ನಡೆಸುತ್ತಿದ್ದರು. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಮತದಾರರನ್ನು ಹೊಂದಿರುವ ನಾಯಕ ಯಾರಾದ್ರು ಇದ್ರೆ ಅದು ತಿಪ್ಪಾರೆಡ್ಡಿ. ತನ್ನ ಚಿತ್ರದುರ್ಗ ಕ್ಷೇತ್ರದಲ್ಲಿಯೆ ಈ ಬಾರಿ ಶತಾಯಗತಾಯ ಲೀಡ್ ಕೊಡಿಸಲೇಬೇಕು ಎಂದು ಪಣ ತೊಟ್ಟಿದ್ದ ತಿಪ್ಪಾರೆಡ್ಡಿ ಸುಮಾರು 17 ಸಾವಿರಕ್ಕೂ ಅಧಿಕ ಮತಗಳ ಲೀಡ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಸಭಾ ಅಖಾಡಲ್ಲಿ ೮ ವಿಧಾನಸಭಾ ಕ್ಷೇತ್ರಗಳ ಪೈಕಿ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರು ಇರುವಂತದ್ದು‌. ಆದ್ರೆ ಇರುವ ಶಾಸಕ ಚಂದ್ರಪ್ಪ ತನ್ನ ಮಗನಿಗೆ ಟಿಕೆಟ್ ಸಿಗಲಿಲ್ಲ ಎನ್ನುವ ಬೇಸರದಲ್ಲಿ ಚುನಾವಣೆಯನ್ನು ಅಷ್ಟಾಗಿ ಸರಿಯಾಗಿ ಮಾಡಿಲ್ಲ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿರುವ ವಿಷಯವೇ ಬಿಡಿ. ಆದ್ರೆ ಕಾರಜೋಳ ಅವರನ್ನು ಗೆಲ್ಲಿಸೇ ಗೆಲ್ಲುಸ್ತೀವಿ ಎಂದು ಹಗಲು ರಾತ್ರಿ ಎನ್ನದೇ ಪ್ರಚಾರ ನಡೆಸಿದ್ದ ತಿಪ್ಪಾರೆಡ್ಡಿ ಎಂದು ಕಾರಜೋಳ ಅವರೇ ಸುಮಾರು ಬಾರಿ ಹೇಳಿದ್ದುಂಟು.

ನಾನು ಗೆದ್ರೆ ಕೇಂದ್ರ ಸಂಪುಟದಲ್ಲಿ ಮಂತ್ರಿ ಆಗ್ತೀನಿ ಎಂದು ಕ್ಷೇತ್ರದ ಜನರಲ್ಲಿ ಹೇಳಿಕೊಂಡಿದ್ದ ಕಾರಜೋಳ: ಈ ಬಾರಿಯ ಚುನಾವಣೆಯಲ್ಲಿ ನಾನು ಗೆದ್ದರೆ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಅವರ ಪಕ್ಕದಲ್ಲಿಯೇ ಕೂರುತ್ತೀನಿ. ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಗೆದ್ರೆ ಮೂರರಲ್ಲಿ ಒಬ್ಬರು ಆಗ್ತಾರೆ ಜನರೇ ನೀವೆ ಯೋಜನೆ ಮಾಡಿ ಎಂದಿದ್ದರು. ಅಲ್ಲದೇ ಅಪ್ಪರ್ ಭದ್ರಾ ಯೋಜನೆ ಕಾಮಗಾರಿ ಕುಂಠಿತ ಆಗ್ತಿರೋದನ್ನ ತ್ವರಿತಗತಿಯಲ್ಲಿ ಮುಗಿಸಲು ಕೇಂದ್ರದಲ್ಲಿ ನಮ್ಮ ಸರ್ಕಾರದ ಅವಶ್ಯಕತೆಯಿದೆ. ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿ ನನ್ನ ಮೊದಲ ಆದ್ಯತೆ ಎಂದು ಕಾರಜೋಳ ಹೇಳಿದ್ದು ಜನರಲ್ಲಿ ಆಶಾ ಭಾವನೆ ಮೂಡಿಸಿತ್ತು. ಅಲ್ಲದೇ ರಾಜ್ಯದಲ್ಲಿ ದಲಿತ ಎಡಗೈ ಸಮುದಾಯ ಹೆಚ್ಚಿರುವ ಕಾರಣ, ಈ ಬಾರಿ ಎಡಗೈ ಸಮುದಾಯದ ನಾಯಕನಿಗೆ ಮಂತ್ರಿ ಸ್ಥಾನ ಸಿಗುವ ಎಲ್ಲಾ ನಿರೀಕ್ಷೆಯಿದೆ ಎಂಬುದು ಜನರ ನಂಬಿಕೆಯಾಗಿತ್ತು. ಅದ್ರಲ್ಲೂ ಕಾರಜೋಳ ಅವರು ಬಿಜೆಪಿ ರಾಜಾಹುಲಿ ಯಡಿಯೂರಪ್ಪ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಕಾರಣ, ಈ ಬಾರಿ ಗೆದ್ರೆ ಉನ್ನತ ಸಿಗುವ ಎಲ್ಲಾ ಲಕ್ಷಣಗಳು ಇವೆ ಎಂಬುದು ನನಗೆ ಆಸೆಯಾಗಿತ್ತು. ಒಟ್ಟಾರೆ ಬಿಜೆಪಿ ಅಭ್ಯರ್ಥಿ ಕಾರಜೋಳ ಗೆಲುವು ಈ ಮೊದಲೇ ನಿಶ್ಚಯವಾಗಿತ್ತು ಅಂದ್ರೆ ತಪ್ಪಾಗಲಿಕ್ಕಿಲ್ಲ. 

ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ತುಕಾರಾಂ, ಸೋತ ಶ್ರೀರಾಮುಲು: 20 ವರ್ಷಗಳ ಬಳಿಕ‌ ಕಾಂಗ್ರೆಸ್ ಗೆಲವು!

ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಸೋಲಿಗೆ ಕಾರಣ: ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅವರ ಪಕ್ಷದ ಶಾಸಕರೇ ಕಾರಣ ಎಂದ್ರೆ ತಪ್ಪಾಗಲಿಕ್ಕಿಲ್ಲ. ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಅಧಿಕಾರದಲ್ಲಿ ಇದ್ದರು. ಆದ್ರೆ ಈ ಫಲಿತಾಂಶ ನೋಡಿದ್ರೆ ೮ ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿರೋದು ವಿಪರ್ಯಾಸ. ಇನ್ನುಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್ ಸಾಧಿಸುವ ಮೂಲಕ ಭರ್ಜರಿ ಜಯಭೇರಿ ಸಾಧಿಸಿದೆ. ಇನ್ನೂ ಇದ್ದ 7 ಕೈ ಶಾಸಕರು ಒಳ ಮುನಿಸಿನ ಕಾರಣ ಕೈ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಸೋಲಬೇಕಾಯಿತು.‌ ಚಳ್ಳಕೆರೆ, ಮೊಳಕಾಲ್ಮೂರು ಶಾಸಕರು ಹೊರತುಪಡಿಸಿದ್ರೆ ಇನ್ಯಾವ ಶಾಸಕರು ಚಂದ್ರಪ್ಪ ಪರವಾಗಿ ಬಹಿರಂಗವಾಗಿ ಪ್ರಚಾರ ಮಾಡದೇ ಇರುವುದು ಚಂದ್ರಪ್ಪ ಸೋಲಿಗೆ ಮುನ್ನಡಿ ಬರೆಯಿತು. ಶಾಸಕರ ಅಸಮಾಧಾನ ಶಮನ ಮಾಡೋದ್ರಲ್ಲಿಯೇ ಅಭ್ಯರ್ಥಿ ಚಂದ್ರಪ್ಪ ಸಮಯ ಕಳೆದರೂ, ಜೊತೆಗೆ ಕ್ಷೇತ್ರದಲ್ಲಿಯೂ ಅಷ್ಟಾಗಿ ಪ್ರಚಾರದ ಅಬ್ಬರ ಕಾಣಲಿಲ್ಲ.‌ಇದನ್ನೆಲ್ಲಾ ಮನಗಂಡ ಮತದಾರ ಪ್ರಭುಗಳು ಬಿಜೆಪಿ ಅಭ್ಯರ್ಥಿ ಕಾರಜೋಳ ಗೆ ಮಣೆ ಹಾಕಿದ್ದಾರೆ ಎಂದ್ರೆ ತಪ್ಪಾಗಲಿಕ್ಕಿಲ್ಲ.

Latest Videos
Follow Us:
Download App:
  • android
  • ios