ವಿಪಕ್ಷಗಳ ಮೈತ್ರಿ ಸಭೆ ನಡೆಯುತ್ತಿರುವ ಬೆನ್ನಲ್ಲೇ  ನಿತೀಶ್ ಕುಮಾರ್‌ ರಾಜ್ಯದಲ್ಲಿ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಎನ್‌ಡಿಎ ಕೂಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಎನ್‌ಡಿಎ ಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ.

ನವದೆಹಲಿ(ಜು.17) ಲೋಕಸಭೆ ಚುನಾವಣೆ ಗೆಲ್ಲಲು ಪೈಪೋಟಿ ಜೋರಾಗಿದೆ. ಒಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ, ಮತ್ತೊಂದೆಡೆ ವಿಪಕ್ಷಗಳ ಮೈತ್ರಿ ನಡುವಿನ ಸ್ಪರ್ಧೆ ಜೋರಾಗಿದೆ. ವಿಪಕ್ಷಗಳು ಬೆಂಗಳೂರಿನಲ್ಲಿ ಮೈತ್ರಿ ಸಭೆ ನಡೆಸುತ್ತಿದೆ. ನಾಳೆ ಬಿಜೆಪಿ ಎನ್‌ಡಿಎ ಸಭೆ ಆಯೋಜಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ನಿರೀಕ್ಷೆಯಂತೆ ಬಿಹಾರದ ಲೋಕ ಜನಶಕ್ತಿ ಪಾರ್ಟಿ ನಾಯಕ ಚಿರಾಗ್ ಪಾಸ್ವಾನ್, ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ. ನಾಳಿನ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಚಿರಾಗ್ ಪಾಸ್ವಾನ್‌ಗೆ ಆಹ್ವಾನ ನೀಡಲಾಗಿತ್ತು. ಇದಕ್ಕೂ ಮುನ್ನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಎನ್‌ಡಿಎ ಮಿತ್ರ ಪಕ್ಷಗಳ ಒಕ್ಕೂಟ ಸೇರಲು ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ನಿರ್ಧರಿಸಿದ್ದಾರೆ. ಬಿಜೆಪಿ ಎನ್‌ಡಿಎ ಸಭೆ ಆಯೋಜಿಸಿತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ನಾಳಿನ ಸಭೆಗೆ 38 ಪಕ್ಷಗಳು ಬೆಂಬಲ ಸೂಚಿಸಿದೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.

ವಿಪಕ್ಷ ಮೈತ್ರಿಗೆ ನಡುಕು ಹುಟ್ಟಿಸಿದ ಬಿಜೆಪಿ, ಎನ್‌ಡಿಎ ಸಭೆಗೆ 38 ಪಕ್ಷದ ಬೆಂಬಲ!

ಜೆಪಿ ನಡ್ಡಾ ಬಳಿಕ ಅಮಿತ್ ಶಾ ಭೇಟಿ ಮಾಡಿದ ಚಿರಾಗ್ ಪಾಸ್ವಾನ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಚಿರಾಗ್ ಪಾಸ್ವಾನ್ ಎನ್‌ಡಿಎ ಬೆಂಬಲಿಸಿರುವ ಕಾರಣ ಇದೀಗ ಬಿಹಾರದಲ್ಲಿ ನಿತೀಶ್ ಕುಮಾರ್ ನೇತತ್ವದ ಜೆಡಿಯು ಹಾಗೂ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಹಾಗೂ ಎಲ್‌ಜೆಪಿ ಮೈತ್ರಿಯಾಗಿ ಕಣಕ್ಕಿಳಿಯಲಿದೆ. ಇದು ಆಡಳಿತರೂಢ ಜೆಡಿಯು ಹಾಗೂ ಆರ್‌ಜೆಡಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.

ವಿಪಕ್ಷ ನಾಯಕರನ್ನು ಭೇಟಿ ಮಾಡಿ 2024ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನ ಪರಿಕಲ್ಪನೆ ಮುಂದಿಟ್ಟ ಬಿಹಾರ ಸಿಎಂ ನಿತೀಶ್ ಕುಮಾರ್, ಮೊದಲ ಸಭೆಯನ್ನು ಪಾಟ್ನಾದಲ್ಲೇ ಆಯೋಜಿಸಿ ಯಶಸ್ವಿಯಾದರು. ವಿಪಕ್ಷಗಳ ಮೊದಲ ಸಭೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಬೆಂಗಳೂರಿನಲ್ಲಿ ಎರಡನೆ ಸಭೆ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಬಿಹಾರದಲ್ಲಿ ಕೆಲ ರಾಜಕೀಯ ಸಂಚಲನಗಳು ಸೃಷ್ಟಿಯಾಗಿದೆ.

ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ, ಮೈತ್ರಿ ಸಭೆಗೂ ಮುನ್ನವೇ ಶಾಕ್ ನೀಡಿದ ಕಾಂಗ್ರೆಸ್!

ಕಳೆದ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಎನ್‌ಡಿಎನಿಂದ ಎಲ್‌ಜೆಪಿ ಹೊರಬಿದ್ದಿತ್ತು. ಇನ್ನು ಬಹಳ ಹಿಂದೆಯೇ ಜೀತನ್‌ ರಾಂ ಮಾಂಝಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೊಂದಿಗೆ ಗುರುತಿಸಿಕೊಂಡು ಎನ್‌ಡಿಎ ತೊರೆದಿದ್ದರು. ಆದರೆ ಇತ್ತೀಚೆಗೆ ಬದಲಾದ ಪರಿಸ್ಥಿತಿಯಲ್ಲಿ ಜೆಡಿಯುನಿಂದ ಬಿಜೆಪಿ ದೂರವಾಗಿತ್ತು. ಹೀಗಾಗಿ ಜೆಡಿಯು ವೈರಿ ಎಲ್‌ಜೆಪಿ ಈಗ ಮತ್ತೆ ಬಿಜೆಪಿಗೆ ಬೆಂಬಲ ಸೂಚಿಸಿದೆ. ಇನ್ನು ಮಾಂಝಿ ಕೂಡ ಇತ್ತೀಚೆಗೆ ನಿತೀಶ್‌ ಜತೆ ಸಂಬಂಧ ಕಡಿದುಕೊಂಡಿದ್ದರು.

ಈ ಎರಡು ಪಕ್ಷಗಳ ಜೊತೆಗೆ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಸೇರಿದ ಅಜಿತ್‌ ಪವಾರ್‌ ಬಣದ ಎನ್‌ಸಿಪಿ, ಪಂಜಾಬ್‌ನ ಶಿರೋಮಣಿ ಅಕಾಲಿದಳ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ.