Asianet Suvarna News Asianet Suvarna News

ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟ: ಸಚಿವ ಎಚ್.ಕೆ.ಪಾಟೀಲ್

ಬರಲಿರುವ ಲೋಕಸಭೆ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಣ ಹೋರಾಟವಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ನೀಡಿರುವ ಭರವಸೆ ಈಡೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಾಬೀತುಪಡಿಸಿದೆ. 

Lok Sabha election is a fight between truth and lies Says Minister HK Patil gvd
Author
First Published Oct 30, 2023, 11:30 PM IST

ಅಂಕೋಲಾ (ಅ.30): ಬರಲಿರುವ ಲೋಕಸಭೆ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಣ ಹೋರಾಟವಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ನೀಡಿರುವ ಭರವಸೆ ಈಡೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಾಬೀತುಪಡಿಸಿದೆ. ಇದನ್ನು ಜನತೆಗೆ ಮನವರಿಕೆ ಮಾಡಿಕೊಟ್ಟು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಬಲಪಡಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ನಡೆದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ₹ 15 ಲಕ್ಷ ಖಾತೆಗೆ ಹಾಕುವುದಾಗಿ ಜನಧನ್ ಖಾತೆ ಮಾಡಿಸಿದ್ದು, ಈ ವರೆಗೆ ಹಣ ಬಂದಿಲ್ಲ. 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿಲ್ಲ. ಆ ಮೂಲಕ ಬಿಜೆಪಿ ವಚನ ಭ್ರಷ್ಟ ಸರ್ಕಾರ ಎನಿಸಿಕೊಂಡಿದೆ. ಸುಮಾರು 1 ಕೋಟಿ ಕುಟುಂಬಗಳಿಗೆ ಯೋಜನೆಗಳ ಪ್ರಯೋಜನ ದೊರಕುವಂತೆ ಮಾಡಿ ಬಡತನ ರೇಖೆಗಿಂತ ಮೇಲೆತ್ತುವ ಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರದ ಸಾಧನೆ ಕ್ರಾಂತಿಗೆ ಕಾರಣವಾಗಿದೆ. ನೇರವಾಗಿ ಜನ ಸಾಮಾನ್ಯರನ್ನು ತಲುಪಿದ ಆತ್ಮತೃಪ್ತಿ ನಮ್ಮದು. 

ಕಾಂಗ್ರೆಸ್ ಪಕ್ಷ ಮನೆಯೊಂದು ನಾಲ್ಕು ಬಾಗಿಲು ಆಗಿದೆ: ಸಂಸದ ಮುನಿಸ್ವಾಮಿ

ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಪಕ್ಷದ ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಚುನಾವಣೆಯನ್ನು ಸುಲಭವಾಗಿ ತೆಗೆದುಕೊಳ್ಳದೆ ಪಕ್ಷದ ಬಲ ಹೆಚ್ಚಿಸಲು ಸತತವಾಗಿ ಪ್ರಯತ್ನಿಸಬೇಕು. ಕಿತ್ತೂರು, ಖಾನಾಪುರ ಕ್ಷೇತ್ರಗಳು ಸಹ ಲೋಕಸಭಾ ವ್ಯಾಪ್ತಿಯಲ್ಲಿ ಬರಲಿದ್ದು, ಜಿಲ್ಲೆಯ ಸಭೆಗಳಿಗೆ ಆ ಭಾಗದ ಕಾರ್ಯಕರ್ತರಿಗೂ ಆಹ್ವಾನಿಸಬೇಕಿದೆ ಎಂದರು. ಕಾಂಗ್ರೆಸ್ ಶಾಸಕರು ಬೇರೆ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ, ಇದು ಸುಳ್ಳು ಸುದ್ದಿ ಎಂದ ಅವರು, ಬೇರೆ ಪಕ್ಷ ಒಡೆಯುವ ಕೆಲಸ ಮಾಡುವ ಅಗತ್ಯತೆ ಕಾಂಗ್ರೆಸ್‌ಗೆ ಇಲ್ಲ ಎಂದರು.

ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿ ಸತ್ಯಕ್ಕೆ ದೂರವಾದುದು. ಯಾರಿಗೆ ಸ್ಥಾನ ನೀಡಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಇಲ್ಲಿ ಹೆಚ್ಚು ಹೆಸರು ಬರುತ್ತದೋ ಅಷ್ಟು ನಮ್ಮ ಪಕ್ಷ ಗಟ್ಟಿಯಾಗಿದೆ ಎಂದರ್ಥ ಎಂದು ಹೇಳಿದರು. ಶಾಸಕ ಸತೀಶ ಸೈಲ್‌ ಮಾತನಾಡಿ, ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಜನರಿಗೆ ಉದ್ಯೋಗಾವಕಾಶ ಒದಗಿಸಬೇಕಿದೆ. ಆ ದಿಶೆಯಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದರು. ಶಾಸಕ ಭೀಮಣ್ಣ ನಾಯ್ಕ, ಪಕ್ಷದ ಬಲವರ್ಧನೆಗೆ ಎಲ್ಲರೂ ಶ್ರಮಿಸಬೇಕು. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗಳಿಗೆ ತಲುಪಿದ್ದು ಇದರ ವಿಚಾರವನ್ನು ಪ್ರತಿಯೊಬ್ಬರಿಗೂ ಕಾರ್ಯಕರ್ತರು ತಿಳಿಸಬೇಕು. ಆ ಮೂಲಕ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಸಾಮಾಜಿಕ ಸಮಾನತೆಗೆ ಜಾತಿ, ಜನಗಣತಿ ಅಗತ್ಯ: ಬಿ.ಕೆ.ಹರಿಪ್ರಸಾದ್

ಮಾಜಿ ಶಾಸಕ ವಿ.ಎಸ್. ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ವಿನೋದ ಭಾಸಗೊಡ, ಪಾಂಡುರಂಗ ಗೌಡ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ, ಪ್ರಮುಖ ಶಂಭು ಶೆಟ್ಟಿ, ಯಶೋಧರ ನಾಯ್ಕ, ಹೋರಾಟಗಾರ ರವೀಂದ್ರ ನಾಯ್ಕ್, ವಿವಿಧ ಘಟಕಗಳ ಅಧ್ಯಕ್ಷರು, ಪಧಾದಿಕಾರಿಗಳು ಇದ್ದರು. ಇದಕ್ಕೂ ಮೊದಲು ಜಿಲ್ಲಾ ಕಾಂಗ್ರೆಸ್ ಘಟಕದಿಂದ ಸಚಿವ ಎಚ್‌.ಕೆ. ಪಾಟೀಲ್, ಶಾಸಕರಾದ ಆರ್.ವಿ. ದೇಶಪಾಂಡೆ, ಭೀಮಣ್ಣ ನಾಯ್ಕ್, ಸತೀಶ್ ಸೈಲ್ ಅವರನ್ನು ಸನ್ಮಾನಿಸಲಾಯಿತು.

Follow Us:
Download App:
  • android
  • ios