Asianet Suvarna News Asianet Suvarna News

ಪಂಜಾಬ್‌ನಲ್ಲಿ ಈ ಬಾರಿ ಚತುಷ್ಕೋನ ಸಮರ; ಗೆಲ್ಲೋದ್ಯಾರು?

ಅಕ್ಕಿ-ಗೋಧಿ ಕಣಜ, ಕೃಷಿ- ಕೈಗಾರಿಕೆಯ ಇತಿಹಾಸದ, ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ಪಂಜಾಬ್‌ನಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಆಪ್‌ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ.

Lok sabha election 2024 why Punjab four way contest this time rav
Author
First Published Apr 11, 2024, 6:03 AM IST

ಚಂಡೀಗಢ: ಅಕ್ಕಿ-ಗೋಧಿ ಕಣಜ, ಕೃಷಿ- ಕೈಗಾರಿಕೆಯ ಇತಿಹಾಸದ, ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ಪಂಜಾಬ್‌ನಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಆಪ್‌ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಮತ್ತೊಂದೆಡೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ 30 ವರ್ಷಗಳಲ್ಲೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿವೆ.2019ರಲ್ಲಿ ರಾಜ್ಯದ 13 ಸ್ಥಾನಗಳ ಪೈಕಿ ಕಾಂಗ್ರೆಸ್‌ 8, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಕ್ರಮವಾಗಿ ಎರಡು ಮತ್ತು ಆಪ್‌ ಒಂದು ಸ್ಥಾನ ಗೆದ್ದಿದ್ದವು.

ಆಪ್‌ ಬಲ: ಆಪ್‌ ಪಂಜಾಬ್‌ ವಿಧಾನಸಭೆ ಗೆಲ್ಲುವಲ್ಲಿ ಯಶಸ್ವಿಯಾದರೂ, ರಾಜ್ಯದಲ್ಲಿನ ಲೋಕಸಭಾ ಕ್ಷೇತ್ರಗಳು ದೊಡ್ಡಮಟ್ಟಿಗೆ ಒಲಿದಿಲ್ಲ. 2022ರ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ ಭರವಸೆಗಳನ್ನು ಈಡೇರಿಸಿದ್ದು, ದೆಹಲಿಯಲ್ಲಿನ ಆಮ್‌ಆದ್ಮಿ ಸರ್ಕಾರದ ಆಡಳಿತ ಮತ್ತು ಇತ್ತೀಚೆಗೆ ರೈತರು ದೆಹಲಿ ಗಡಿಯಲ್ಲಿ ನಡೆಸಿದ ಹೋರಾಟದ ವೇಳೆ ರೈತರ ಪರವಾಗಿ ನಿಂತಿದ್ದು ಆಪ್‌ಗೆ ನೆರವಾಗುವ ಅಂಶಗಳು. ಆದರೆ ಮೂಸೆವಾಲಾ ಹಂತಕರನ್ನು ಇನ್ನೂ ಪತ್ತೆ ಮಾಡದೇ ಇರುವುದು, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವು ಹತ್ಯೆ ಪ್ರಕರಣಗಳು, ಮಹಿಳೆಯರಿಗೆ ಮಾಸಿಕ 1000 ರು. ನೆರವಿನ ಯೋಜನೆ ಘೋಷಣೆ ಆಗದೇ ಇರುವುದು ಪಕ್ಷದ ಪಾಲಿಗೆ ಹಿನ್ನಡೆ.

ಅಣ್ಣಾಮಲೈ ಜೋಕರ್‌ ಎಂದ ದಯಾನಿಧಿ ಮಾರನ್‌ಗೆ ದುರಂಹಕಾರ: ಮೋದಿ ಕಿಡಿ

ಶಿರೋಮಣಿ ಅಕಾಲಿದಳ:

ಸಿಖ್ಖರು ಮತ್ತು ರೈತರ ವಿಷಯ ಬಂದಾಗಲೆಲ್ಲಾ ಶಿರೋಮಣಿ ಅಕಾಲಿದಳ ಅವರ ಬೆಂಬಲಕ್ಕೆ ನಿಂತಿದೆ. ಇದು ಪಕ್ಷದ ಮತದಾರರ ಅಡಿಪಾಯ ಗಟ್ಟಿಯಾಗಿ ಉಳಿಸಿದೆ. ಆದರೆ ನಗರ ಪ್ರದೇಶದಲ್ಲಿ ಪಕ್ಷಕ್ಕೆ ದೊಡ್ಡಮಟ್ಟದ ಬೆಂಬಲ ಇನ್ನೂ ಸಿಕ್ಕಿಲ್ಲ. ಜೊತೆಗೆ ಪಕ್ಷ ಬಾದಲ್‌ ವಂಶಕ್ಕೆ ಸೀಮಿತವಾಗಿದೆ ಎಂಬ ಟೀಕೆ ಪಕ್ಷಕ್ಕೆ ಅಂಟಿದ ಕಳಂಕ. ಆದರೆ ಆಪ್‌- ಕಾಂಗ್ರೆಸ್‌ ಪ್ರತ್ಯೇಕ ಸ್ಪರ್ಧೆ ಪಕ್ಷಕ್ಕೆ ನೆರವಾಗುವ ಆಶಯವನ್ನು ಅಕಾಲಿದಳ ಹೊಂದಿದೆ.

ಬಿಜೆಪಿ: 30 ವರ್ಷಗಳ ಬಳಿಕ ಅಕಾಲಿದಳ ಬಿಟ್ಟು ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಹೀಗಾಗಿ ಈ ಬಾರಿ ಅದರ ನಿಜವಾದ ಶಕ್ತಿ ಪ್ರದರ್ಶನವಾಗಲಿದೆ. ಇದರ ಜೊತೆಗೆ ಮೋದಿ ಅಲೆ, ಕೇಂದ್ರದ ಯೋಜನೆಗಳು, ಹಲವು ವಿಪಕ್ಷ ನಾಯಕರು ವಲಸೆ ಬಂದಿರುವುದು ಪಕ್ಷಕ್ಕೆ ಬಲ ತುಂಬಿದೆ.

ಕಾಂಗ್ರೆಸ್‌: ನಗರ, ಗ್ರಾಮೀಣ ಎರಡೂ ಕಡೆ ಪಕ್ಷಕ್ಕೆ ಮತದಾರರ ನೆಲೆ ಇದೆ. ಒಂದು ವೇಳೆ ಆಪ್‌ ಬೆಂಬಲ ಸಿಕ್ಕಿದ್ದರೆ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಿತ್ತು. ಪಕ್ಷದ ರಾಜ್ಯಾಧ್ಯಕ್ಷ ನವಜೋತ್‌ ಸಿಧು ಮತ್ತು ಇತರೆ ನಾಯಕರ ಒಳಜಗಳ ಪಕ್ಷಕ್ಕೆ ಒಂದಿಷ್ಟು ಹಿನ್ನಡೆ ತರುತ್ತಿದೆ.

ಒಟ್ಟು ಸ್ಥಾನಗಳು13

ಚುನಾವಣೆ ಜೂ.1

ಪ್ರಮುಖ ಕ್ಷೇತ್ರಗಳು

ಅಮೃತಸರ, ಗುರುದಾಸ್‌ಪುರ, ಲೂಧಿಯಾನ, ಹೋಶಿಯಾರ್‌ಪುರ, ಸಂಗ್ರೂರ್‌ ಪಟಿಯಾಲಾ.

ಪ್ರಮುಖ ಅಭ್ಯರ್ಥಿಗಳು

ಪ್ರಣೀತ್‌ ಕೌರ್‌, ನವನೀತ್‌ ಸಿಂಗ್ ಬಿಟ್ಟೂ, ಸುಶೀಲ್‌ ಕುಮಾರ್‌ ರಿಂಕು, ತರಣ್‌ಜಿತ್‌ ಸಿಂಗ್‌ ಸಂಧು, ಸಿಮ್ರನ್‌ಜಿತ್‌ ಸಿಂಗ್‌ ಮಾನ್‌, ಹನ್ಸ್‌ ರಾಜ್‌ ಹನ್ಸ್‌.

2019ರ ಲೋಕಸಭಾ ಚುನಾವಣೆ ಫಲಿತಾಂಶ

  • ಕಾಂಗ್ರೆಸ್‌8ಶೇ.40.12
  • ಅಕಾಲಿದಳ2ಶೇ.27.45
  • ಬಿಜೆಪಿ2ಶೇ.9.63
  • ಆಪ್‌1ಶೇ.7.38

ಸ್ಪರ್ಧೆ ಹೇಗೆ? 

ಪಂಜಾಬ್: ಲೋಕಸಭಾ ಚುನಾವಣೆಗೆ ಬಿಜೆಪಿಗೆ ಹೊಸ ಹುಮ್ಮಸ್ಸು, ಏನಾಗಲಿದೆ ಫಲಿತಾಂಶ?

ಆಮ್‌ಆದ್ಮಿ ಪಕ್ಷ, ಕಾಂಗ್ರೆಸ್‌, ಶಿರೋಮಣಿ ಅಕಾಲಿದಳ, ಬಿಜೆಪಿ ಪ್ರತ್ಯೇಕವಾಗಿ ಕಣಕ್ಕೆ ಇಳಿದಿವೆ. ರೈತ ಹೋರಾಟ, ರೈತರ ಉತ್ಪನ್ನಗಳಿಗೆ ಘೋಷಿಸುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತ್ರಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಮಾದಕ ವಸ್ತು ವಿರುದ್ಧದ ಹೋರಾಟ, ಭ್ರಷ್ಟಾಚಾರದ ವಿಷಯಗಳು ಚುನಾವಣೆಯ ಪ್ರಮುಖ ವಿಷಯವಾಗಲಿದೆ. ಬಿಜೆಪಿ ಮೋದಿ ಅಲೆ ನಂಬಿದೆ. ಆಪ್‌ಗೆ ಕೇಜ್ರಿವಾಲ್‌ ಮತ್ತು ಪಂಜಾಬ್‌ ಸರ್ಕಾರದ ಸಾಧನೆಗಳೇ ಶ್ರೀರಕ್ಷೆ. ಬಿಜೆಪಿ- ಅಕಾಲಿದಳ 30 ವರ್ಷಗಳ ಬಳಿಕ ಪ್ರತ್ಯೇಕವಾಗಿ ಕಣಕ್ಕೆ ಇಳಿದಿವೆ. ಎರಡೂ ಪಕ್ಷಗಳಿಗೆ ಅದು ಅಗ್ನಿಪರೀಕ್ಷೆ. ಜೊತೆಗೆ 2027ರ ವಿಧಾನಸಭೆಯನ್ನೂ ಗಮನದಲ್ಲಿಟ್ಟು ನಾಲ್ಕೂ ಪಕ್ಷಗಳು ಚುನಾವಣಾ ರಣತಂತ್ರ ರೂಪಿಸಿವೆ.

Follow Us:
Download App:
  • android
  • ios