ಪ್ರಥಮ ಸಾರ್ವತ್ರಿಕ ಚುನಾವಣೆಯಿಂದಲೂ ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಕುಟುಂಬದ ಮುಂದಿನ ತಲೆಮಾರಿನ ನಾಯಕ ರಾಹುಲ್‌ ಗಾಂಧಿ ಕಣಕ್ಕಿಳಿದಿದ್ದಾರೆ.

ಸ್ಟಾರ್‌ ಕ್ಷೇತ್ರ: ರಾಯ್‌ಬರೇಲಿ

ಪ್ರಥಮ ಸಾರ್ವತ್ರಿಕ ಚುನಾವಣೆಯಿಂದಲೂ ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಕುಟುಂಬದ ಮುಂದಿನ ತಲೆಮಾರಿನ ನಾಯಕ ರಾಹುಲ್‌ ಗಾಂಧಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಹಾಲಿ ಸಂಸದೆ ಸೋನಿಯಾ ರಾಜ್ಯಸಭಾ ಸದಸ್ಯತ್ವ ಪಡೆದಾಗಿನಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಂದಿನ ಅಭ್ಯರ್ಥಿ ಆಗುವ ಕುರಿತು ಮೂಡಿದ ಕುತೂಹಲ ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವಿಗೆ ಕೆಲವೇ ಕ್ಷಣವಿರುವ ತನಕ ಮುಂದುವರೆದಿತ್ತು. ಇವರಿಗೆ ಬಿಜೆಪಿಯಿಂದ ಹಾಲಿ ತೋಟಗಾರಿಕಾ ಸಚಿವ ದಿನೇಶ್‌ ಪ್ರತಾಪ್‌ ಸಿಂಗ್‌ ಪೈಪೋಟಿ ನೀಡುತ್ತಿದ್ದು, ಪ್ರಬಲ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.

ರಾಹುಲ್‌ ಸ್ಪರ್ಧೆ ರಹಸ್ಯವೇನು?

ರಾಹುಲ್‌ ಗಾಂಧಿ ವಯನಾಡ್‌ ಬಳಿಕ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಅಂತಿಮ ಕ್ಷಣದವರೆಗೂ ಕುತೂಹಲ ಮೂಡಿತ್ತು. ತಮ್ಮ ಎಂದಿನ ಕ್ಷೇತ್ರ ಅಮೇಠಿಯಲ್ಲಿ ಸ್ಪರ್ಧಿಸುವುದಾಗಿ ಕೊನೆಯವರೆಗೂ ನಂಬಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಅವರು ತಮ್ಮ ತಾಯಿಯ ಕ್ಷೇತ್ರ ರಾಯ್‌ಬರೇಲಿಯಿಂದ ತುರುಸಿನಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಇದಕ್ಕೆ ಕ್ಷೇತ್ರದಲ್ಲಿ ಗಾಂಧಿ ಕುಟುಂಬಕ್ಕೆ ಅಮೇಠಿಗೆ ಹೋಲಿಸಿದರೆ ರಾಯ್‌ಬರೇಲಿಯಲ್ಲಿ ಸುರಕ್ಷಿತ ಕ್ಷೇತ್ರ ಎನಿಸಿರುವುದೇ ಕಾರಣವಾಗಿದೆ. 

ಬಡ ಸೈನಿಕರು, ಶ್ರೀಮಂತ ಸೈನಿಕರ ವರ್ಗ ಸೃಷ್ಟಿ ಎಂದ ರಾಹುಲ್‌ ವಿರುದ್ಧ ದೂರು

ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಇಲ್ಲಿಯವರೆಗೆ 72 ವರ್ಷಗಳಲ್ಲಿ 66 ವರ್ಷಗಳ ಕಾಲ ಕಾಂಗ್ರೆಸ್‌ ಅಭ್ಯರ್ಥಿಗಳೇ ಇಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಲ್ಲದೆ ನಾಮಪತ್ರ ಸಲ್ಲಿಸಿದ ಬಳಿಕ ರಾಹುಲ್‌ ರೋಡ್‌ಶೋ ನಡೆಸುವ ವೇಳೆ ಮತದಾರರಿಗೆ ಸಮಸ್ತರೂ ತಮ್ಮ ಕುಟುಂಬದ ಸದಸ್ಯರು ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಆದರೆ ಕಾಂಗ್ರೆಸ್‌ ಅತಿಯಾದ ಆತ್ಮವಿಶ್ವಾಸ ತೋರಿದಲ್ಲಿ ಕಳೆದ ಬಾರಿ ಮತಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದ್ದ ಬಿಜೆಪಿ ಈ ಬಾರಿ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಬಿಜೆಪಿ ರಣತಂತ್ರವೇನು?

ಬಿಜೆಪಿಯು ಕಾಂಗ್ರೆಸ್‌ ಅಂತಿಮ ಕ್ಷಣದವರೆಗೂ ತನ್ನ ಅಭ್ಯರ್ಥಿಯನ್ನು ಅಂತಿಮ ಮಾಡದಿರುವುದನ್ನೇ ಮುಖ್ಯ ಅಸ್ತ್ರ ಮಾಡಿಕೊಂಡು ಚುನಾವಣಾ ಪ್ರಚಾರ ನಡೆಸುತ್ತಿದೆ. ಅಲ್ಲದೆ ರಾಜ್ಯದಲ್ಲಿ ತೋಟಗಾರಿಕಾ ಸಚಿವರಾಗಿ ಜನಪ್ರಿಯತೆ ಗಳಿಸಿರುವ ದಿನೇಶ್‌ ಪ್ರತಾಪ್‌ ಸಿಂಗ್‌ ಅವರಿಗೆ ಕಳೆದ ಬಾರಿ ಸೋತಿದ್ದರೂ ಮತ್ತೊಮ್ಮೆ ಬಿಜೆಪಿ ಟಿಕೆಟ್‌ ನೀಡಿದೆ.

ದಿನೇಶ್‌ ಪ್ರತಾಪ್‌ ಸಿಂಗ್‌ ಮೂಲತಃ ಕಾಂಗ್ರೆಸ್‌ನಲ್ಲೇ ಇದ್ದರೂ 2018ರಲ್ಲಿ ಬಿಜೆಪಿ ಸೇರಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಜನಪ್ರಿಯತೆಯ ಮಟ್ಟವನ್ನು ಗಮನಿಸುವುದಾದಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ಮತಪ್ರಮಾಣವನ್ನು ಶೇ.20ರಷ್ಟು ಏರಿಸಿದ್ದರು. ಅಲ್ಲದೆ ಕಾಂಗ್ರೆಸ್‌ ಗೆಲುವಿನ ಅಂತರವನ್ನು ಸೋನಿಯಾರ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 1.5 ಲಕ್ಷಕ್ಕೆ ಇಳಿಸಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಇವರ ಮೇಲೆ ನಿರೀಕ್ಷೆ ಇಟ್ಟು ರಾಜ್ಯ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಖಾತೆಗಳನ್ನು ನೀಡುವ ಜೊತೆಗೆ ಮತ್ತೊಮ್ಮೆ ರಾಯ್‌ಬರೇಲಿಯಲ್ಲಿ ಟಿಕೆಟ್‌ ನೀಡುವ ಮೂಲಕ ಕ್ಷೇತ್ರವನ್ಹು ಅಮೇಠಿ ರೀತಿಯಲ್ಲೇ ಕಾಂಗ್ರೆಸ್‌ ತೆಕ್ಕೆಯುವ ನಿರೀಕ್ಷೆಯಲ್ಲಿದೆ.

ಸ್ಪರ್ಧೆ ಹೇಗೆ?

ರಾಯ್‌ಬರೇಲಿ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಗಾಂಧಿ ಕುಟುಂಬದವರು ಬಹುತೇಕ ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಅಭ್ಯರ್ಥಿಯ ಬದಲಾವಣೆ ಆಗಿ ಮುಂದಿನ ತಲೆಮಾರು ಬಂದಿರುವ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಅಧಿಕ ಯುವ ಮತದಾರರೂ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಮತ್ತೊಂದು ಪಕ್ಷಕ್ಕೆ ಮತ ಹಾಕಿದರೆ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ. ಆದರೆ ರಾಹುಲ್‌ ಗಾಂಧಿ ಕ್ಷೇತ್ರದ ಮತದಾರರನ್ನು ತಮ್ಮ ಕುಟುಂಬದಂತೆ ಎಂದು ಸಂಬೋಧಿಸಿ ಮೊದಲ ಭಾಷಣದಲ್ಲೇ ಸೆಳೆಯುವ ಪ್ರಯತ್ನ ಮಾಡಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಬಿಜೆಪಿಯ ಆರೋಪಗಳಿಗೆ ಯಾವ ರೀತಿ ತಿರುಗೇಟು ಕೊಡಲಿದೆ ಎಂಬುದರ ಮೇಲೆ ಕಾಂಗ್ರೆಸ್‌ ಪಕ್ಷದ ಕ್ಷೇತ್ರಭವಿಷ್ಯ ನಿರ್ಧಾರವಾಗಲಿದೆ.

ಮೋದಿ ಮಹಾಭಾರತದ ಶ್ರೀಕೃಷ್ಣನಂತೆ ದುಷ್ಟರ ಸಂಹಾರಕ್ಕೆ ಗುರು: ಯೋಗಿ

ಸ್ಟಾರ್‌ ಕ್ಷೇತ್ರ: ರಾಯ್‌ಬರೇಲಿ

ರಾಜ್ಯ: ಉತ್ತರ ಪ್ರದೇಶ

ವಿಧಾನಸಭಾ ಕ್ಷೇತ್ರಗಳು: 5

ಮತದಾನದ ದಿನ: ಮೇ.20

ಪ್ರಮುಖ ಅಭ್ಯರ್ಥಿಗಳು:

ಕಾಂಗ್ರೆಸ್‌ - ರಾಹುಲ್‌ ಗಾಂಧಿ

ಬಿಜೆಪಿ - ದಿನೇಶ್‌ ಪ್ರತಾಪ್‌ ಸಿಂಗ್‌

ಬಿಎಸ್‌ಪಿ - ಠಾಕೂರ್‌ ಪ್ರಸಾದ್‌

2019ರ ಫಲಿತಾಂಶ:

ಗೆಲುವು: ಸೋನಿಯಾ ಗಾಂಧಿ - ಕಾಂಗ್ರೆಸ್‌

ಸೋಲು: ದಿನೇಶ್‌ ಪ್ರತಾಪ್‌ ಸಿಂಗ್‌ - ಬಿಜೆಪಿ