Asianet Suvarna News Asianet Suvarna News

INTERVIEW: ಬಿಜೆಪಿಯ ದುರಾಡಳಿತವೇ ನನಗೆ ಅಸ್ತ್ರ: ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್

ಡಾ. ಅಂಜಲಿ ನಿಂಬಾಳ್ಕರ್ ಖಾನಾಪುರದ ಮಾಜಿ ಶಾಸಕಿ. ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ. ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಡಾ. ಅಂಜಲಿ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಡಾ. ಅಂಜಲಿ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಸ್ಪರ್ಧೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕುರಿತ ಅವರ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

Lok sabha election 2024 in Karnataka Uttara Kannada Congress Candidate Dr Anjali Nimbalkar Interview rav
Author
First Published May 4, 2024, 12:23 PM IST

ಡಾ. ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ

ಸಂದರ್ಶನ- ವಸಂತಕುಮಾರ್ ಕತಗಾಲ

ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರದ ಸೋಲಿನ ಸವಾಲನ್ನು ಈಗ ಹೇಗೆ ಮೆಟ್ಟಿನಿಲ್ಲುತ್ತೀರಿ?

ಸ್ಪರ್ಧೆ ಎಂದಮೇಲೆ ಸೋಲು-ಗೆಲುವು ಸಹಜ. ಗೆದ್ದ ಮೇಲೆ ಹಿಗ್ಗಬಾರದು, ಸೋತ ಮೇಲೆ ಕುಗ್ಗಬಾರದು. ಜನಸೇವೆಗೆಂದು ರಾಜಕಾರಣಕ್ಕೆ ಬಂದಿದ್ದೇನೆ. ಖಾನಾಪುರದಲ್ಲಿ ಸೋತರೂ ಉತ್ತರ ಕನ್ನಡ ಕ್ಷೇತ್ರದ ಜನರ ಮನ ಗೆಲ್ಲುತ್ತಿದ್ದೇನೆ. ಪ್ರಚಾರಕ್ಕೆ ಹೋದಲ್ಲೆಲ್ಲ ಮುತ್ತೈದೆಯರು ಸ್ವಾಗತಿಸಿ ಉಡಿ ತುಂಬಿ ಹರಸುತ್ತಿದ್ದಾರೆ. ಇಷ್ಟು ಸಾಕಲ್ಲವೇ ಸೋಲು ಮರೆತು ಆತ್ಮವಿಶ್ವಾಸ ಹೆಚ್ಚಾಗಲು?

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರದಿದ್ದರೆ ಈ ಚುನಾವಣೆಯಲ್ಲಿ ನೀವು ಕೊಟ್ಟ ಗ್ಯಾರಂಟಿ ಭವಿಷ್ಯ ಏನಾಗಲಿದೆ?

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಂತೆಯೇ ಮನವಿ ಮಾಡಿಕೊಂಡು ಮತ ಯಾಚಿಸುತ್ತಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಜಾರಿಗೆ ತಂದಂತೆ, ದೇಶಾದ್ಯಂತ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಮತದಾರ ಪ್ರಭುಗಳ ಆಶೀರ್ವಾದದ ಮೇಲೆ ಯೋಜನೆಗಳು ನಿರ್ಧರಿತವಾಗಲಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ನೀವು ಭರವಸೆ ಕೊಟ್ಟಿದ್ದೀರಿ. ಪರೋಕ್ಷವಾಗಿ ನಮ್ಮ ಜಿಲ್ಲೆಯ ಸಚಿವರು, ಶಾಸಕರಿಂದ ಅಸಾಧ್ಯ ಎಂಬ ಭಾವನೆ ಇದೆಯಾ?

ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಬೇಡಿಕೆ ಇದೆ. ನಮ್ಮ ಶಾಸಕರು, ಸಚಿವರು ರಾಜ್ಯ ಸರ್ಕಾರದಿಂದ ಸಿಗಬೇಕಾದ ಅಗತ್ಯ ನೆರವನ್ನು ದೊರಕಿಸಿಕೊಟ್ಟು ಅವರ ಕರ್ತವ್ಯ ಅವರು ಮಾಡಲಿದ್ದಾರೆ. ಉಳಿದಂತೆ ಕೇಂದ್ರದಿಂದ ಆಗಬೇಕಾದ ಕೆಲಸ ಕಾರ್ಯಗಳನ್ನು ನಾನು ಮಾಡಿಸುತ್ತೇನೆ. ಇದರಲ್ಲಿ ಅಸಾಧ್ಯ ಎಂಬ ಭಾವನೆ ಅಲ್ಲ, ನಾವೆಲ್ಲ ಒಗ್ಗಟ್ಟಾಗಿ ಸೇರಿದಾಗ ಆಸ್ಪತ್ರೆ ನಿರ್ಮಾಣ ಸಾಧ್ಯವಿದೆ.

Interview: ನನ್ನ ಮಾವ ಖರ್ಗೆ ಸಾಧನೆಯೇ ನನಗೆ ಶ್ರೀರಕ್ಷೆ - ರಾಧಾಕೃಷ್ಣ ದೊಡ್ಮನಿ

ನಿಮ್ಮ ಎದುರಾಳಿ ಕಾಗೇರಿ ಅವರಾ ಅಥವಾ ನರೇಂದ್ರ ಮೋದಿಯೇ?

ಇಬ್ಬರೂ ಅಲ್ಲ. ನಾನು ಎದುರಾಳಿಯನ್ನು ನೋಡಿ ಚುನಾವಣೆ ಎದುರಿಸುತ್ತಿಲ್ಲ. ವೈಯಕ್ತಿಕವಾಗಿಯೂ ಯಾರನ್ನೂ ಎದುರಾಳಿ ಎಂದು ಅಂದುಕೊಳ್ಳುವುದೂ ಇಲ್ಲ. ಕ್ಷೇತ್ರದ ಜನ 30 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದಾರೆ. ಆ ವನವಾಸವೇ ನನ್ನ ಎದುರಾಳಿ. 10 ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ತಾರದೆ, ಜಿಎಸ್‌ಟಿ, ಬೆಲೆ ಏರಿಕೆ, ಕೋಮುವಾದವೆಂಬ ದುರಾಡಳಿತ ನೀಡಿದೆ. ಈ ದುರಾಡಳಿತ ನನ್ನ ಎದುರಾಳಿ. ಅಂತಿಮವಾಗಿ ಜನಸೇವೆಯನ್ನು ಗುರಿಯಾಗಿಸಿಕೊಂಡು, ಅಭಿವೃದ್ಧಿ ಮಂತ್ರದೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆಯೇ ಹೊರತು ಎದುರಾಳಿಗಳನ್ನು ಗುರಿಯಾಗಿಸಿಕೊಂಡು ಅಲ್ಲ.

ನಿಮ್ಮಿಂದ ಜಿಲ್ಲೆಯ ಜನತೆ ಏನೆಲ್ಲ ನಿರೀಕ್ಷಿಸಬಹುದು?

ಸಂಸತ್‌ನಲ್ಲಿ ಕಳೆದ 30 ವರ್ಷಗಳಿಂದ ಕ್ಷೇತ್ರದ ಹೆಸರು ಬಂದಿಲ್ಲ. ಜಿಲ್ಲೆಯ ಒಂದೇ ಒಂದು ಸಮಸ್ಯೆಯ ಬಗ್ಗೆಯೂ ಚರ್ಚೆಯಾಗಿಲ್ಲ. ಕ್ಷೇತ್ರದ ಹಳ್ಳಿಯ ಸಮಸ್ಯೆಗಳನ್ನೂ ದಿಲ್ಲಿಗೆ ಕೊಂಡೊಯ್ಯಲು ಜನ ನನಗೆ ಮತ ನೀಡಲಿದ್ದಾರೆಂದು ನಂಬಿದ್ದೇನೆ. ಅರಣ್ಯ ಹಕ್ಕಿನ ಸಮಸ್ಯೆ, ಆರೋಗ್ಯ, ನಿರುದ್ಯೋಗ, ಬುಡಕಟ್ಟು ಜನಾಂಗಗಳಿಗೆ ಸಿಗಬೇಕಾದ ಎಸ್‌ಟಿ ಮಾನ್ಯತೆ ಇಂಥ ಹಲವಾರು ವಿಚಾರಗಳಿಗೆ ಪರಿಹಾರ ಒದಗಿಸಲು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ.

ಕ್ಷೇತ್ರದ ಜನತೆಯ ಸ್ಪಂದನೆ ಹೇಗಿದೆ?

ಮನೆ ಮಗಳಂತೆ, ಕುಟುಂಬದ ಸದಸ್ಯರಲ್ಲಿ ನಾನೂ ಒಬ್ಬಳೆಂಬಂತೆ ಈ ಜಿಲ್ಲೆಯ ಜನ ನನ್ನನ್ನು ನೋಡುತ್ತಿದ್ದಾರೆ. ವೈದ್ಯಳಾಗಿ ರೋಗಿಗಳ ನೋವನ್ನು ಅರಿಯುವಂತೆ ಕ್ಷೇತ್ರದ ಜನರ ಕಷ್ಟ- ಸುಖಗಳನ್ನು ಅರಿಯುತ್ತಿದ್ದೇನೆ. ಅವರಿಗೆ ಹತ್ತಿರವಾಗಿದ್ದೇನೆ. ಈ ಬಾರಿ ಬದಲಾವಣೆ ಬೇಕಿದೆ ಎಂಬುದು ಕ್ಷೇತ್ರದ ಮೂಲೆ ಮೂಲೆಯಿಂದಲೂ ಕೇಳಿಬರುತ್ತಿದೆ. ಅದಕ್ಕಾಗಿ ನನಗೆ ಬೆಂಬಲ ಸಿಗುತ್ತಿದೆ.

ನಿಮ್ಮ ಸ್ಪರ್ಧೆಗೆ ಪೂರಕ ಅಂಶಗಳು ಯಾವುವು?

30 ವರ್ಷಗಳಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಅನಾಥವಾಗಿಸಿ, ಮತದಾರರನ್ನು ಮತಕ್ಕಾಗಿ ಮಾತ್ರ ಬಳಸಿಕೊಂಡಿರುವುದು, 10 ವರ್ಷಗಳ ಕೇಂದ್ರದ ಆಡಳಿತದಲ್ಲಿ ಕ್ಷೇತ್ರಕ್ಕೆ ಯಾವುದೇ ಜನಪರ ಯೋಜನೆಗಳು ಬಾರದಿರುವುದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಪರವಾಗಿ ಕೆಲಸ ಮಾಡಿರುವುದೇ ನನ್ನ ಸ್ಪರ್ಧೆಗೆ ಪೂರಕ ಅಂಶಗಳು.

ಅಭಿವೃದ್ಧಿಯಲ್ಲಿ ಉತ್ತರ ಕನ್ನಡದ ಹಿನ್ನಡೆಗೆ ಕಾರಣಗಳೇನು?

ಮೂರು ದಶಕಗಳ ಕಾಲ ಈ ಜಿಲ್ಲೆಯನ್ನು ಆಳಿಯೂ ಸಂಸತ್‌ನಲ್ಲಿ ಒಮ್ಮೆಯೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡದಿರುವುದು. ಆಳ್ವಿಕೆ ನಡೆಸಿದ್ದ ಬಿಜೆಪಿ ನಾಯಕರಿಗೆ ಅಭಿವೃದ್ಧಿಪರ ಚಿಂತನೆ ಇಲ್ಲದೆ, ಕೇವಲ ಜನರ ಭಾವನೆಗಳ ಮೇಲೆ ರಾಜಕೀಯ ಮಾಡಿರುವುದು. ಅದಕ್ಕಾಗಿಯೇ ನಾನು ನನ್ನ ನೆಲ, ನನ್ನ ಜಲ, ನನ್ನ ಸಂಸ್ಕೃತಿಗಾಗಿ ಈ ಚುನಾವಣೆಯೆಂಬ ಹೋರಾಟಕ್ಕೆ ಇಳಿದಿದ್ದೇನೆ.

ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಫುಲ್ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!

ಅನಂತಕುಮಾರ ಹೆಗಡೆ ಬದಲು ಕಾಗೇರಿಗೆ ಟಿಕೆಟ್ ನೀಡಿದ್ದು ನಿಮ್ಮ ಸ್ಪರ್ಧೆಯ ಮೇಲೆ ಪರಿಣಾಮ ಏನು?

ಇಬ್ಬರೂ ಒಂದೇ ನಾಣ್ಯದ ಎರಡು ಮುಖದಂತೆ. ಅವರು ಮಾತನಾಡಿ ವಿವಾದ ಸೃಷ್ಟಿಸುತ್ತಿದ್ದರು, ಇವರು ಮಾತನಾಡದೇ ಜನರನ್ನು ಸಂಕಷ್ಟದಲ್ಲಿರಿಸುತ್ತಿದ್ದರು. ಇಬ್ಬರದ್ದೂ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಶೂನ್ಯ.

Follow Us:
Download App:
  • android
  • ios