Lok Sabha Election 2024: ನನ್ನ ಪರ ಪ್ರಚಾರಕ್ಕೆ ಬನ್ನಿ: ಬಿಎಸ್‌ವೈಗೆ ಪ್ರಜ್ವಲ್ ರೇವಣ್ಣ ಮನವಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಬೆಂಗಳೂರು (ಮಾ.22): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿಯಾಗಿ ಸಮಾಲೋಚನೆ ನಡೆಸಿದರು. ಗುರುವಾರ ಡಾಲರ್ಸ್ ಕಾಲೋನಿಯಲ್ಲಿನ ನಿವಾಸದಲ್ಲಿ ಭೇಟಿಯಾಗಿ ಹಾಸನ ಲೋಕಸಭಾ ಕ್ಷೇತ್ರದ ರಾಜಕೀಯ ಕುರಿತು ಚರ್ಚೆ ನಡೆಸಿದರು. ಚುನಾವಣಾ ಪ್ರಚಾರದ ವೇಳೆ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಪರ ಪ್ರಚಾರ ಮಾಡಬೇಕು ಎಂದು ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಅಲ್ಲದೇ, ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗೆಲುವಿಗೆ ಸಹಕಾರ ನೀಡಬೇಕು ಎಂದು ಕೋರಿದರು ಎನ್ನಲಾಗಿದೆ. ಇದೇ ವೇಳೆ ಬಿಜೆಪಿಯ ಮಾಜಿಶಾಸಕ ಪ್ರೀತಂಗೌಡ ಅವರು ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆಯೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಗಮನಕ್ಕೆ ತಂದರು. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ -ಬಿಜೆಪಿ ಜಂಟಿ ಸಭೆ ನಡೆಸಿ ಪಕ್ಷದ ಕಾರ್ಯಕರ್ತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ದೂರ ಮಾಡಬೇಕು ಎಂಬುದರ ಕುರಿತು ಸಹ ಮಾತುಕತೆ ನಡೆಸಲಾಗಿದೆ.
ಲೋಕಸಭೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಬೇಕು: ಸಿಎಂ ಸಿದ್ದು, ಡಿಕೆಶಿ ಸೂಚನೆ
ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇವಣ್ಣ, ಹಾಸನ ಕ್ಷೇತ್ರದಲ್ಲಿ ಸಹಕಾರ ನೀಡುವ ಕುರಿತು ಚರ್ಚಿಸಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ ಎಂದರು. ಪಕ್ಷದ ಆದೇಶಕ್ಕೆ ಕಾಯುತ್ತಿದ್ದಾರೆ: ಪ್ರಜ್ವಲ್ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದರು. ನಂತರ ಎಲ್ಲರೂ ವಿಶ್ವಾಸದೊಂದಿಗೆ ಕೆಲಸ ಮಾಡಲಾಗುವುದು ಎಂದರು. ಪ್ರೀತಂಗೌಡ ಅವರೊಂದಿಗೆ ಸಮನ್ವಯ ಇಲ್ಲದ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಸೂಚನೆ ಬಳಿಕ ವಿಶ್ವಾಸದೊಂದಿಗೆ ಕೆಲಸ ಮಾಡುತ್ತೇವೆ ಎಂದರು.